)
PM Viksit Bharat Rozgar Yojana : ಪ್ರಧಾನಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ (PM-VBRY) ಎಂದು ಹೆಸರಿಸಲ್ಪಟ್ಟ ಈ ಯೋಜನೆಯು ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದರಲ್ಲಿ 1.92 ಕೋಟಿ ಯುವಕರು ಮೊದಲ ಬಾರಿಗೆ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಈ ಯೋಜನೆಯ ವಿಶೇಷವೆಂದರೆ, ಮೊದಲ ಬಾರಿಗೆ ಖಾಸಗಿ ವಲಯದಲ್ಲಿ ಕೆಲಸ ಪ್ರಾರಂಭಿಸುವ ಯುವಕರಿಗೆ ಸರ್ಕಾರದಿಂದ 15,000 ರೂ. ಆರ್ಥಿಕ ನೆರವು ಲಭ್ಯವಾಗುತ್ತದೆ. ಇದಕ್ಕಾಗಿ ಅವರು "ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ" (ಇಪಿಎಫ್ಒ)ಯಲ್ಲಿ ಮೊದಲ ಬಾರಿಗೆ ನೋಂದಾಯಿಸಿರಬೇಕು ಮತ್ತು ತಿಂಗಳಿಗೆ ರೂ. 1 ಲಕ್ಷದೊಳಗೆ ಸಂಬಳವನ್ನು ಹೊಂದಿರಬೇಕು.
ಇನ್ನು ಈ ಸಹಾಯಧನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ
ಮೊದಲ ಕಂತು: 6 ತಿಂಗಳ ಸೇವೆ ಪೂರ್ಣಗೊಂಡ ಬಳಿಕ
ಎರಡನೇ ಕಂತು: 12 ತಿಂಗಳ ಸೇವೆ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಂಡ ಬಳಿಕ
ಈ ಹಣವನ್ನು ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. ಜೊತೆಗೆ, ಹಣದ ಒಂದು ಭಾಗವನ್ನು ಉಳಿತಾಯಕ್ಕೆ ಮೀಸಲಿಡಲಾಗುತ್ತದೆ, ಇದರಿಂದ ಯುವಕರಲ್ಲಿ ಆರ್ಥಿಕ ಶಿಸ್ತು ಬೆಳೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಈ ಯೋಚನೆ ಕೇವಲ ಯುವ ಖಾಸಗಿ ನೌಕರರಿಗೆ ಮಾತ್ರವಲ್ಲ, ಅವರಿಗೆ ಉದ್ಯೋಗ ಒದಗಿಸುವ ಕಂಪನಿಗಳಿಗೂ ಪ್ರೋತ್ಸಾಹ ಧನ ನೀಡಲಾಗುತ್ತದೆ. ತಿಂಗಳಿಗೆ ರೂ. 1 ಲಕ್ಷದೊಳಗಿನ ಸಂಬಳವನ್ನು ಹೊಂದಿರುವ ಪ್ರತಿ ಹೊಸ ಉದ್ಯೋಗಿಗೆ ಮತ್ತು ಕಂಪನಿಗಳಿಗೆ ತಿಂಗಳಿಗೆ ರೂ. 3,000 ಸಹಾಯಧನ ಸಿಗುತ್ತದೆ. ಈ ಸೌಲಭ್ಯವು ಎರಡು ವರ್ಷಗಳವರೆಗೆ ಲಭ್ಯವಿದ್ದು, ಉತ್ಪಾದನಾ ವಲಯದಲ್ಲಿ ಮೂರನೇ ಮತ್ತು ನಾಲ್ಕನೇ ವರ್ಷಗಳಿಗೂ ವಿಸ್ತರಿಸಲಾಗಿದೆ.
ಯೋಜನೆಗೆ 99,446 ಕೋಟಿ ರೂ. ಬಜೆಟ್ ಮೀಸಲಾಗಿದ್ದು, ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. 50 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಕನಿಷ್ಠ 2 ಜನರನ್ನು ಹಾಗೂ 50 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಕನಿಷ್ಠ 5 ಜನರನ್ನು ಹೊಸದಾಗಿ ನೇಮಿಸಿಕೊಳ್ಳಬೇಕು ಎಂಬ ನಿಯಮವಿದೆ. ಈ ಮೂಲಕ, ಯುವಕರಿಗೆ ಆರ್ಥಿಕ ನೆರವು, ಕಂಪನಿಗಳಿಗೆ ಪ್ರೋತ್ಸಾಹ, ಮತ್ತು ದೇಶದ ಆರ್ಥಿಕತೆಗೆ ಹೊಸ ವೇಗ ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.