)
Post Office RD Scheme: ಅಂಚೆ ಕಚೇರಿಯಲ್ಲಿ 5 ವರ್ಷ ಅಥವಾ 60 ತಿಂಗಳ ಮರುಕಳಿಸುವ ಠೇವಣಿ ಯೋಜನೆ ಇದ್ದು, ಇದರಲ್ಲಿ ನೀವು ಪ್ರತಿ ತಿಂಗಳು ನಿಗದಿತ ಮೊತ್ತವನ್ನ ಠೇವಣಿ ಮಾಡುವ ಮೂಲಕ ಸಾಕಷ್ಟು ಹಣ ಗಳಿಸಬಹುದು. ಈ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ 100 ರೂ. ಅಥವಾ 10 ರೂ.ಗಳ ಗುಣಕಗಳಲ್ಲಿ ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಹೂಡಿಕೆಗೆ ಯಾವುದೇ ರೀತಿಯ ಗರಿಷ್ಠ ಮಿತಿಯಿಲ್ಲ.
ಅಂಚೆ ಕಚೇರಿಯ ಈ ಆರ್ಡಿ ಖಾತೆಯಲ್ಲಿ ಠೇವಣಿ ಇಟ್ಟ ಹಣಕ್ಕೆ ನೀವು ಖಚಿತ ಆದಾಯ ಪಡೆಯುತ್ತೀರಿ. ಅಲ್ಲದೆ ಇದು ಭಾರತ ಸರ್ಕಾರದ ಉಳಿತಾಯ ಯೋಜನೆಯಾಗಿರುವುದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ದೀರ್ಘಕಾಲದವರೆಗೆ ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನ ಠೇವಣಿ ಮಾಡುವ ಮೂಲಕ ನೀವು ದೊಡ್ಡ ಮೊತ್ತವನ್ನ ಉಳಿಸಬಹುದು.
ಪ್ರಸ್ತುತ ಅಂಚೆ ಕಚೇರಿಯಲ್ಲಿ 5 ವರ್ಷಗಳ ಆರ್ಡಿ ಖಾತೆಗೆ 6.7% ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ. ನೀವು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಖಾತೆ ಓಪನ್ ಮಾಡಬಹುದು. 5 ವರ್ಷಗಳ ನಂತರ ನಿಮ್ಮ ಅಂಚೆ ಕಚೇರಿ ಆರ್ಡಿ ಖಾತೆಯನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಬಹುದು.
ನೀವು ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ 60 ತಿಂಗಳಿಗೆ ಮಾಸಿಕ ₹6000 ಠೇವಣಿ ಇಟ್ಟರೆ, ಲೆಕ್ಕಾಚಾರದ ಪ್ರಕಾರ ಕೊನೆಯಲ್ಲಿ ನಿಮಗೆ ಒಟ್ಟು ₹4,28,197 ಸಿಗುತ್ತದೆ. ಇದರಲ್ಲಿ ನೀವು ಹೂಡಿಕೆ ಮಾಡಿದ ₹3,60,000 ಮತ್ತು ಅದರ ಮೇಲೆ ಬಡ್ಡಿಯಾಗಿ ಪಡೆದ ₹68,197 ಮೊತ್ತವು ಸೇರಿದೆ.
ಈ ಯೋಜನೆಯ ಮತ್ತೊಂದು ವಿಶೇಷ ಲಕ್ಷಣವೆಂದರೆ ಖಾತೆಯು ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದ ನಂತರ ಮತ್ತು ಖಾತೆಯಲ್ಲಿ ಹನ್ನೆರಡು ತಿಂಗಳಿಗೊಮ್ಮೆ ಠೇವಣಿ ಇಟ್ಟ ನಂತರ, ಠೇವಣಿದಾರರು ಖಾತೆಯಲ್ಲಿ ಠೇವಣಿ ಇಟ್ಟ ಮೊತ್ತದ 50% ವರೆಗೆ ಸಾಲ ಸೌಲಭ್ಯವನ್ನ ಪಡೆಯಬಹುದು. ಸಾಲವನ್ನು ಒಂದೇ ಬಾರಿಗೆ ಅಥವಾ ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದು.