)
ನಮ್ಮಲ್ಲಿ ಅತಿ ಹೆಚ್ಚು ಬಳಸುವ ಸಾರಿಗೆ ಮಾರ್ಗ ಎಂದರೆ ಅದು ರೈಲ್ವೆ. ದಿನಕ್ಕೆ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ದೂರದ ಊರುಗಳಿಗೆ ತೆರಳಲು ಜನರು ಹೆಚ್ಚು ಅವಲಂಬಿಸುವುದು ರೈಲನ್ನೇ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕೂಡಾ ಪ್ರಯಾಣಿಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಲೇ ಇದೆ. ಇದೀಗ ಕೇಂದ್ರ ಸರ್ಕಾರ ಹಿರಿಯ ನಾಗರೀಕರಿಗೆ ರೈಲು ಟಿಕೆಟ್ ಮೇಲೆ ಮತ್ತೆ ರಿಯಾಯಿತಿ ನೀಡಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ. ಹಿರಿಯ ನಾಗರಿಕರ ರೈಲು ಟಿಕೆಟ್ಗಳ ಮೇಲಿನ ಶುಲ್ಕ ರಿಯಾಯಿತಿಯನ್ನು ಶೀಘ್ರದಲ್ಲೇ ಮತ್ತೆ ಲಭ್ಯವಾಗುವ ನಿರೀಕ್ಷೆಯಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸ್ಥಗಿತಗೊಳಿಸಲಾದ ಈ ಸೌಲಭ್ಯವನ್ನು ಈಗ ಮತ್ತೆ ಆರಂಭಿಸಲಾಗುವುದು.
ಶುಕ್ರವಾರ ಈ ಬಗ್ಗೆ ರಾಜ್ಯಸಭೆಯಲ್ಲಿ ಉತ್ತರಿಸುತ್ತಾ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆಯ ಸ್ಥಾಯಿ ಸಮಿತಿಯು ಹಿರಿಯ ನಾಗರಿಕರಿಗೆ ದರ ರಿಯಾಯಿತಿಯನ್ನು ಮತ್ತೊಮ್ಮೆ ಪರಿಶೀಲಿಸಲು ಮತ್ತು ಕನಿಷ್ಠ ಸ್ಲೀಪರ್ ಮತ್ತು ಥರ್ಡ್ ಎಸಿ (3 ಎಸಿ) ಕ್ಲಾಸ್ ಟಿಕೆಟ್ ಮೇಲೆ ರಿಯಾಯಿತಿಯನ್ನು ಪುನಃಸ್ಥಾಪಿಸಲು ಶಿಫಾರಸು ಮಾಡಿದೆ ಎಂದು ಹೇಳಿದರು. "ರೈಲ್ವೆಯ ಸ್ಥಾಯಿ ಸಮಿತಿಯು ಕನಿಷ್ಠ ಸ್ಲೀಪರ್ ಮತ್ತು ಥರ್ಡ್ ಎಸಿ ವಿಭಾಗಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡುವುದನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದೆ" ಎಂದು ರೈಲ್ವೆ ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ರೈಲ್ವೆ ಎಲ್ಲಾ ರೀತಿಯ ದರ ರಿಯಾಯಿತಿಗಳನ್ನು ನಿಲ್ಲಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ರೈಲ್ವೆಯ ಪ್ರಸ್ತುತ ಸಬ್ಸಿಡಿ ಎಷ್ಟು? :
ರೈಲ್ವೆ ಈಗಾಗಲೇ ಎಲ್ಲಾ ಪ್ರಯಾಣಿಕರಿಗೆ ಸರಾಸರಿ ಶೇಕಡಾ 45 ರಷ್ಟು ಸಬ್ಸಿಡಿಯನ್ನು ನೀಡುತ್ತಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಅಂದರೆ, ಪ್ರಯಾಣದ ವೆಚ್ಚ 100 ಆಗಿದ್ದರೆ, ಪ್ರಯಾಣಿಕರ ಮೇಲೆ 55 ರೂ.ಮಾತ್ರ ವಿಧಿಸಲಾಗುತ್ತದೆ. 2023-24 ರಲ್ಲಿ, ರೈಲ್ವೆ ಟಿಕೆಟ್ಗಳಲ್ಲಿ ಪ್ರಯಾಣಿಕರಿಗೆ 60,466 ಕೋಟಿ ಸಬ್ಸಿಡಿ ನೀಡಿದೆ.
ಈಗ ಯಾವ ಪ್ರಯಾಣಿಕರು ರಿಯಾಯಿತಿ ಪಡೆಯುತ್ತಿದ್ದಾರೆ? :
ಹಿರಿಯ ನಾಗರಿಕರು ಪ್ರಸ್ತುತ ಯಾವುದೇ ರಿಯಾಯಿತಿಯನ್ನು ಪಡೆಯುತ್ತಿಲ್ಲ. ಆದರೆ, ರೈಲ್ವೆ ಇನ್ನೂ 4 ವರ್ಗದ ದಿವ್ಯಾಂಗ ಪ್ರಯಾಣಿಕರು, 11 ವರ್ಗದ ರೋಗಿಗಳು ಮತ್ತು 8 ವರ್ಗದ ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡುತ್ತಿದೆ.
ಯಾವಾಗ ಹೊರ ಬೀಳಲಿದೆ ನಿರ್ಧಾರ ?:
ಈ ನಿರ್ಧಾರ ಪ್ರಕಟಿಸಲು ಸರ್ಕಾರವು ಇನ್ನೂ ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ. ಮೂಲಗಳ ಪ್ರಕಾರ, ನೀತಿ ನಿರೂಪಣಾ ಮಟ್ಟದಲ್ಲಿ ಈ ಶಿಫಾರಸಿನ ಕುರಿತು ಚರ್ಚೆ ಶೀಘ್ರದಲ್ಲೇ ಪ್ರಾರಂಭವಾಗಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಹಿರಿಯ ನಾಗರಿಕರು ಮತ್ತೊಮ್ಮೆ ವಿನಾಯಿತಿಯ ಪ್ರಯೋಜನವನ್ನು ಪಡೆಯಬಹುದು.