EPFO Rules 2025: ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ತನ್ನ ಪಿಎಫ್ ಚಂದಾದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವ ನಿಟ್ಟಿನಲ್ಲಿ ತನ್ನ ಹಲವಾರು ನಿಯಮಗಳನ್ನು ಬದಲಾಯಿಸದೆ. ಇಪಿಎಫ್ಒದ ಈ ಬದಲಾವಣೆಗಳು ಇಪಿಎಫ್‌ಒ ವರ್ಗಾವಣೆ ಪ್ರಮಾಣಪತ್ರ, ಪಿಎಫ್ ಬ್ಯಾಲೆನ್ಸ್, ಪಿಎಫ್ ಬಡ್ಡಿ ಸೇರಿದಂತೆ ಸುಮಾರು 15ರೀತಿಯ ಸೇವೆಗಳನ್ನು ಖಾತೆ ಅಧಿಕಾರಿಗಳ ಮಟ್ಟದಲ್ಲಿಯೇ ಪರಿಹರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸಂಬಂಧ ಕೇಂದ್ರ ಹೆಚ್ಚುವರಿ ನೌಕರರ ಭವಿಷ್ಯ ನಿಧಿ ಆಯುಕ್ತರು ಪಿಎಫ್ ಆಯುಕ್ತರಿಗೆ ಆದೇಶ ಹೊರಡಿಸಿದ್ದಾರೆ.
ಹೌದು, ಈ ಹಿಂದೆ ಪಿಎಫ್ ಚಂದಾದಾರರು ಇಪಿಎಫ್ಒ ಸಂಬಂಧಿತ ತಮ್ಮ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಪದೇ ಪದೇ ಉದ್ಯೋಗ ಭವಿಷ್ಯ ನಿಧಿಗೆ ಸುತ್ತಬೇಕಿತ್ತು. ಆದರೆ, ಇಪಿಎಫ್ಒದ ಹೊಸ ನಿಯಮದಡಿಯಲ್ಲಿ ಪಿಎಫ್ ಚಂದಾದಾರರಿಗೆ ಈ ಸಮಸ್ಯೆಯೇ ಇರುವುದಿಲ್ಲ. ಹೊಸ ನಿಯಮದಿಂದ ಏನೆಲ್ಲಾ ಪ್ರಯೋಜನ ಎಂದು ತಿಳಿಯೋಣ....
ಆನ್‌ಲೈನ್‌ನಲ್ಲೇ ಸಿಗುತ್ತೆ 'ಕೆ' ಪ್ರಮಾಣಪತ್ರ:
ಇಪಿಎಫ್ಒ ಹೊಸ ನಿಯಮದನ್ವಯ ಒಬ್ಬ ಉದ್ಯೋಗಿ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸಿದಾಗ ಅವರ ಹಳೆಯ ಪಿಎಫ್ ಸೇವೆ, ಪಿಎಫ್ ಉಳಿತಾಯ ಸಹ ಹೊಸ ಕಂಪನಿಗೆ ವರ್ಗಾಯಿಸಬೇಕಾಗುತ್ತದೆ. ಆಗ ಮಾತ್ರವೇ, ನಿವೃತ್ತಿ ವೇಳೆಗೆ ಉತ್ತಮ ಮೊತ್ತವನ್ನು ಕಲೆಹಾಕಲು ಸಾಧ್ಯವಾಗುತ್ತದೆ. ಇದಕ್ಕಾಗಿ ಇಪಿಎಫ್ಒ ಆನ್‌ಲೈನ್‌ನಲ್ಲೇ ವರ್ಗಾವಣೆ ಪ್ರಮಾಣ ಪತ್ರವನ್ನು ಒದಗಿಸಲು ಕ್ರಮ ಕೈಗೊಂಡಿದೆ.
ಇಪಿಎಫ್ಒ ಪ್ರಮಾಣಪತ್ರವು, ಪಿಎಫ್ ಬ್ಯಾಲೆನ್ಸ್, ಬಡ್ಡಿ, ಆ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಅವರಿ, ಉದ್ಯೋಗಿಯ ವಿವರವನ್ನು ಒಳಗೊಂಡಿರುತ್ತದೆ.
ಆನ್‌ಲೈನ್‌ನಲ್ಲಿ ವರ್ಗಾವಣೆ ಪತ್ರ ಕೊಳ್ಳಲು ಉದ್ಯೋಗಿ ಏನು ಮಾಡಬೇಕು?
ಇಪಿಎಫ್ಒ ಮೂಲಕ ಪಿಎಫ್ ಖಾತೆದಾರರು ತಮ್ಮ ವರ್ಗಾವಣೆ ಪತ್ರವನ್ನು ಪಡೆಯಲು, ಹೊಸ ಕಂಪನಿಗೆ ಸ್ಥಳಾಂತರಗೊಂಡಾಗ, ಇಪಿಎಫ್ಒ ಪೋರ್ಟಲ್‌ನಲ್ಲಿ 'ಫಾರ್ಮ್ 13' ವರ್ಗಾವಣೆ ಕ್ಲೈಮ್ ಅನ್ನು ಸಲ್ಲಿಸುವುದು ಅವಶ್ಯಕ. ಆಗ ಹೊಸ ಕಂಪನಿಯು ಮೊದಲ ಕೊಡುಗೆಯನ್ನು ಠೇವಣಿ ಮಾಡಿದ ಕೂಡಲೇ ಹಿಂದಿನ ಸೇವೆ, ಉಳಿತಾಯ ಎಲ್ಲವನ್ನೂ ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ. ಆ ನಂತರದಲ್ಲಿ ಇಪಿಎಫ್‌ಒ ಕ್ಷೇತ್ರ ಕಚೇರಿ ಅಥವಾ ಪಿಎಫ್ ಟ್ರಸ್ಟ್ ಪ್ರಮಾಣಪತ್ರವನ್ನು ನೀಡುತ್ತಿತ್ತು.
ಆದರೀಗ ಇಪಿಎಫ್ಒ ನಿಯಮದಲ್ಲಿ ಹೊಸ ಬದಲಾವಣೆಯಿಂದಾಗಿ, ಇಪಿಎಫ್ಒ ವರ್ಗಾವಣೆ ಪ್ರಮಾಣಪತ್ರವು ಎಲ್ಲರಿಗೂ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಸದಸ್ಯರ ಪೋರ್ಟಲ್‌ನಲ್ಲಿರುವ ಆನ್‌ಲೈನ್ ಸೇವೆಗಳ ವಿಭಾಗಕ್ಕೆ ಭೇಟಿ ನೀಡಿ ಕ್ಲೈಮ್ ಟ್ರ್ಯಾಕಿಂಗ್‌ನಲ್ಲಿ 'ಕೆ' ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ.
ಭಾಗಶಃ ಪಾವತಿಗೂ ಹಸಿರು ನಿಶಾನೆ:
ಇಪಿಎಫ್ಒ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಪೂರ್ಣ ಕೊಡುಗೆಯನ್ನು ಸ್ವೀಕರಿಸಲಾಗಿಲ್ಲ ಎಂಬ ಕಾರಣಕ್ಕಾಗಿ ಪಿಎಫ್ ಕ್ಲೈಮ್‌ಗಳನ್ನು ತಿರಸ್ಕರಿಸಲಾಗುವುದಿಲ್ಲ. ಇಪಿಎಫ್ಒ ಹೊಸ ನಿಯಮದಡಿಯಲ್ಲಿ ಇಪಿಎಫ್ ಕಾಯ್ದೆಯ ಪ್ಯಾರಾಗ್ರಾಫ್ 10.11 ಭಾಗ 2 ಎ ಪ್ರಕಾರ ಅಂತಿಮ ಕ್ಲೈಮ್‌ನಲ್ಲಿ ಭಾಗಶಃ ಪಾವತಿಗಳನ್ನು ಮಾಡಲಾಗುತ್ತದೆ. ಅಂತಿಮ ಕ್ಲೈಮ್‌ನಲ್ಲಿ ಭಾಗಶಃ ಪಾವತಿಗಳನ್ನು ಕೂಡ ಕ್ಲೈಮ್ ಮಾಡಲು ಇಪಿಎಫ್ಒ ಗ್ರೀನ್ ಸಿಗ್ನಲ್ ನೀಡಿದೆ. ಉಳಿದ ಪಿಎಫ್ ಕೊಡುಗೆಯ ಮೊತ್ತವನ್ನು ಅಂತಿಮ ಪಾವತಿಯಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ- ನಿವೃತ್ತಿ ಪೂರ್ವ ಪಿಎಫ್ ಹಣ ವಿತ್ ಡ್ರಾ: ಇಪಿಎಫ್‌ಒ ಸದಸ್ಯರಿಗೆ ಜಾಕ್‌ಪಾಟ್
ಇದನ್ನೂ ಓದಿ- ದೀಪಾವಳಿ ಸನಿಹದಲ್ಲಿಯೇ EPFO ಮಹತ್ವದ ನಿರ್ಧಾರ : EPS ಮಾಸಿಕ ಪಿಂಚಣಿಯಲ್ಲಿ ಏಳು ಪಟ್ಟು ಹೆಚ್ಚಳ









