ಹೆಣ್ಣು ಮಕ್ಕಳ ಮದುವೆಗೆ ಸಿಗುತ್ತೆ 70 ಲಕ್ಷ... ಈ ಸ್ಕೀಮ್‌ಗೆ ಕೇಂದ್ರ ಸರ್ಕಾರವೇ ಕೊಡುತ್ತೆ ಗ್ಯಾರಂಟಿ!

Sukanya Samriddhi Yojana: ಹೆಣ್ಣೆತ್ತವರ ಕಷ್ಟ ಎನ್ನುವ ಮಾತಿದೆ. ಹೌದು, ಈಗಿನ ಶಿಕ್ಷಣ, ಮದುವೆ ಖರ್ಚು, ಕೆರಿಯರ್ ರೂಪಿಸಿಕೊಳ್ಳಲು ಇರುವ ರಿಸ್ಕ್ ಗಳೆಲ್ಲವನ್ನು ನೋಡಿದರೆ ನಿಜ ಎನಿಸುತ್ತದೆ. ಹಾಗೆಯೇ ಪರಿಹಾರವೂ ಇದೆ. ಸರ್ಕಾರ ಅದಕ್ಕೆಂದೇ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ. ಅದ್ಯಾವುದು ಅಂತಾ ತಿಳಿಯಿರಿ.

Written by - Yashaswini V | Last Updated : Dec 12, 2025, 11:02 AM IST
  • ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ 8 ಪ್ರಮುಖ ಅಂಶಗಳಿವೆ. ಅವುಗಳನ್ನು ತಿಳಿಯುವುದು ಅತ್ಯಗತ್ಯ.
  • ಪ್ರತಿ ವರ್ಷ ಕನಿಷ್ಠ 250 ರೂಪಾಯಿ ಪಾವತಿಸಬೇಕು. ಗರಿಷ್ಟ 1,50,000 ರೂಪಾಯಿವರೆಗೆ ಹೂಡಿಕೆ ಮಾಡಬಹುದು.
  • ಈ ಯೋಜನೆಯಿಂದ ಡಬಲ್ ಲಾಭ, ಹೆಣ್ಣು ಮಗಳ ಶಿಕ್ಷಣವೂ ಆಗುತ್ತದೆ. ನಂತರ ಮದುವೆ ಖರ್ಚಿಗೂ ಹಣ ಸಿಗುತ್ತದೆ.
ಹೆಣ್ಣು ಮಕ್ಕಳ ಮದುವೆಗೆ ಸಿಗುತ್ತೆ 70 ಲಕ್ಷ... ಈ ಸ್ಕೀಮ್‌ಗೆ ಕೇಂದ್ರ ಸರ್ಕಾರವೇ ಕೊಡುತ್ತೆ ಗ್ಯಾರಂಟಿ!

Sukanya Samriddhi Yojana: ಹೆಣ್ಣು ಮಕ್ಕಳನ್ನು ಹೊಂದಿರುವ ಅಥವಾ ಹೊಂದಬೇಕು ಎಂದು ಆಶಿಸುವ ಪೋಷಕರ ಪಾಲಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಪೋಷಕರನ್ನು ಅತ್ಯಂತ ಪ್ರೀತಿಯಿಂದ ಪೊರೆಯುವ ಹೆಣ್ಣು ಮಕ್ಕಳು ಎಲ್ಲರಿಗೂ ಬೇಕು. ಆದರೆ ಹೆಣ್ಣು ಮಕ್ಕಳಿದ್ದರೆ ಖರ್ಚು, ರಿಸ್ಕು ಜಾಸ್ತಿ ಎಂಬ ಮನೋಸ್ಥಿತಿ ಇದೆ. ಆದರೆ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ನಿಮಗೆ ಸ್ವಲ್ಪ ನಿರಾಳ ಭಾವವನ್ನು ತರಬಹುದು. ಇದು ಉಳಿತಾಯ ಖಾತೆ ತೆರೆದು ಸಣ್ಣ ಮೊತ್ತವನ್ನು ಕಟ್ಟಿ ಮಗಳು 18 ವರ್ಷ ತುಂಬಿದಾಗ ಇಡಿಗಂಟು ಪಡೆಯುವ ಉಪಯುಕ್ತ ಯೋಜನೆ.

Add Zee News as a Preferred Source

ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ 8 ಪ್ರಮುಖ ಅಂಶಗಳು
* ಹೆಚ್ಚಿನ ಪ್ರಮಾಣದ ಬಡ್ಡಿ: 

ಮೊದಲನೆಯದಾಗಿ ನೀವು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಪ್ರಮಾಣದ ಬಡ್ಡಿ ಸಿಗುತ್ತದೆ. 2024-25ರ ಸಾಲಿನಲ್ಲಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ಶೇಕಡಾ 8.2 ರಷ್ಟು ಬಡ್ಡಿ ದರ ನೀಡುವುದಾಗಿ ಘೋಷಣೆ ಮಾಡಿದೆ. ಇದು ಬೇರೆ ಯಾವುದೇ ಉಳಿತಾಯ ಯೋಜನೆಗಳಿಂತ ಹೆಚ್ಚು ಬಡ್ಡಿ ಸಿಗುವ ಯೋಜನೆಯಾಗಿದೆ.

* ತೆರಿಗೆ ಪಾವತಿಸಬೇಕಾಗಿಲ್ಲ: 
ಎರಡನೆಯದಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡುವ ನಿಮ್ಮ ಹಣಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಾಗಿಲ್ಲ. ಹಾಗೆ ಬಡ್ಡಿಗೂ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಅಷ್ಟೇಯಲ್ಲ, ನಿಮ್ಮ ಮಗಳು 18 ವರ್ಷ ಆದಾಗ ಪಡೆಯುವ ಮೆಚ್ಯುರಿಟಿ ಹಣಕ್ಕೂ ತೆರಿಗೆ ಕಟ್ಟಬೇಕಾಗಿಲ್ಲ. ಅಂದರೆ ಇದು ಸಂಪೂರ್ಣ ತೆರಿಗೆ ಮುಕ್ತ ಯೋಜನೆ.

* ಅವಧಿ: 
ಮೂರನೆಯದಾಗಿ ನೀವು ಹಣ ಕಟ್ಟಬೇಕಾಗಿರುವುದು ಕೇವಲ 15 ವರ್ಷದವರೆಗೆ ಮಾತ್ರ. ಸುಕನ್ಯಾ ಸಮೃದ್ಧಿ ಯೋಜನೆಯ ಅವಧಿ ಇರುವುದು 21 ವರ್ಷದವರೆಗೆ. ಆದರೆ ನೀವು 15 ವರ್ಷದವರೆಗೆ ಕಟ್ಟಿದ ಹಣಕ್ಕೆ 21 ವರ್ಷದ ಲೆಕ್ಕಕ್ಕೆ ಬಡ್ಡಿ ಸಿಗುತ್ತದೆ. ಇದು ಹೂಡಿಕೆ ಕಮ್ಮಿ ಮಾಡಿ ಹೆಚ್ಚು ಲಾಭ ಗಳಿಸುವ ಯೋಜನೆಯಾಗಿದೆ.

ಇದನ್ನೂ ಓದಿ- EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!

* ಶಿಕ್ಷಣದ ಉದ್ದೇಶಕ್ಕಾಗಿ 50% ಹಣ ವಿತ್ ಡ್ರಾ ಮಾಡಬಹುದು:
ನಾಲ್ಕನೆಯದಾಗಿ ನಿಮ್ಮ ಮಗಳು 18 ವರ್ಷದ ಬಳಿಕ ಶಿಕ್ಷಣದ ಉದ್ದೇಶಕ್ಕಾಗಿ ಶೇಕಡಾ 50 ರಷ್ಟು ಹಣವನ್ನು ವಿತ್ ಡ್ರಾ ಮಾಡಬಹುದು. 

* ಮಗಳು 10 ವರ್ಷ ಪೂರೈಸುವುದರೊಳಗೆ ಈ ಖಾತೆ ತೆರೆಯಬಹುದು: 
ಐದನೆಯ ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕು. ನಿಮ್ಮ ಮಗಳು 10 ವರ್ಷ ಪೂರೈಸುವುದರೊಳಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತರೆದಿರಬೇಕು. 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆ ಅನ್ವಯವಾಗುತ್ತದೆ.

* ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು:
ಆರನೇಯ ಸಂಗತಿ ಕೂಡ ಬಹಳ ಪ್ರಮುಖವಾದುದ್ದೇ. ಒಂದು ಕುಟುಂಬದಲ್ಲಿ ಅಥವಾ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಲು ಅವಕಾಶ. ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಖಾತೆ ತೆರೆಯಲು ಅವಕಾಶ. ಉದಾಹರಣೆಗೆ ದಂಪತಿಗಳಿಗೆ ಮೂವರು ಅಥವಾ ಅದಕ್ಕಿಂತ ಹೆಚ್ಚಿನ ಹೆಣ್ಣು ಮಕ್ಕಳಿದ್ದರೆ ಅವರು ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಬಹುದು.

* ಕನಿಷ್ಠ 250 ರೂಪಾಯಿ ಹೂಡಿಕೆ:
ಏಳನೆಯದಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ತಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಬಯಸುವ ದಂಪತಿಗಳು ಪ್ರತಿ ವರ್ಷ ಕನಿಷ್ಠ 250 ರೂಪಾಯಿ ಪಾವತಿ ಮಾಡಬೇಕು. ಗರಿಷ್ಟ 1,50,000 ರೂಪಾಯಿವರೆಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ ಕನಿಷ್ಠ 250 ರೂಪಾಯಿಗಳನ್ನಾದರೂ ಕಟ್ಟದಿದ್ದರೆ ಖಾತೆ ನಿಷ್ಕ್ರಿಯವಾಗುತ್ತದೆ. ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. 

* 15 ವರ್ಷದವರೆಗೆ ಹೂಡಿಕೆ: 
ಎಂಟನೆಯದಾಗಿ ಪ್ರತಿ ವರ್ಷ 1,50,000 ರೂಪಾಯಿ ಹಣ ಕಟ್ಟಿದರೆ 15 ವರ್ಷದವರೆಗೆ ನೀವು 22,50,000 ರೂಪಾಯಿಗಳನ್ನು ಮಾತ್ರ ಹೂಡಿಕೆ ಮಾಡಿರುತ್ತೀರಿ. ಆದರೆ ನಿಮಗೆ ಸಿಗುವ ಮೆಚ್ಯೂರಿಟಿ ಹಣ ಮಾತ್ರ 70 ಲಕ್ಷ ರೂಪಾಯಿ. 

ಇದನ್ನೂ ಓದಿ- ಹಿರಿಯ ನಾಗರಿಕರಿಗಾಗಿ ಬೊಂಬಾಟ್‌ ಯೋಜನೆ: ಇಲ್ಲಿ ಪ್ರತಿ ತಿಂಗಳು ಸಿಗುತ್ತೆ ₹20,000

ತಿಂಗಳಿಗೆ ಎಷ್ಟು ರೂಪಾಯಿ ಕಟ್ಟಬೇಕು?
ನಿಮ್ಮ ಮಗಳಿಗೆ 18 ವರ್ಷ ತುಂಬಿದಾಗ 70 ಲಕ್ಷ ದುಡ್ಡು ಬರಬೇಕು ಎಂದರೆ ನೀವು ಪ್ರತಿ ವರ್ಷ 1,50,000 ರೂಪಾಯಿಯನ್ನು ಕಟ್ಟಬೇಕು. ಪ್ರತಿ ವರ್ಷ 1,50,000 ಎಂದರೆ ಪ್ರತಿ ತಿಂಗಳು ನೀವು 12,500 ರೂಪಾಯಿ ಕಟ್ಟಬೇಕು.

ಡಬಲ್ ಲಾಭ ಏನು?
ಶಿಕ್ಷಣದ ಉದ್ದೇಶಕ್ಕಾಗಿ ಮಗಳಿಗೆ 18 ವರ್ಷ ತುಂಬಿದಾಗ ಶೇಕಡಾ 50ರಷ್ಟು ಹಣವನ್ನು ಪಡೆಯಬಹುದು. 21 ವರ್ಷದ ಬಳಿಕ ಪೂರ್ತಿ ಹಣವೂ ಬಡ್ಡಿ ಸಮೇತ, ತೆರಿಗೆ ಕಡಿತವಾಗದೆ ಬರುತ್ತದೆ. ಇದರಿಂದ ನಿಮ್ಮ ಹೆಣ್ಣು ಮಗಳ ಶಿಕ್ಷಣವೂ ಆಗುತ್ತದೆ. ನಂತರ ಮದುವೆ ಖರ್ಚಿಗೂ ಹಣ ಸಿಗುತ್ತದೆ. ಮದುವೆಗೆ ಹಣ ಪಡೆಯಲು ವಿವಾಹಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಬೇಕು. ಅಲ್ಲಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಶುರುಮಾಡಿದ್ದ ಖಾತೆ ಅಂತಿಮಗೊಳ್ಳುತ್ತದೆ. 
 
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯುವುದು ಹೇಗೆ?
>> ಸಮೀಪ ಇರುವ ಅಂಚೆ ಕಚೇರಿ ಅಥವಾ ನ್ಯಾಷನಲ್ ಬ್ಯಾಂಕ್‌ಗಳಿಗೆ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಜಿ ಪಡೆಯಿರಿ. 
>> ನಿಮ್ಮ ಆದಾಯ, ಉಳಿತಾಯದ ಸಾಮರ್ಥ್ಯಕ್ಕೆ ಅನುಗುಣವಾಗಿ ತಿಂಗಳಿಗೆ ಎಷ್ಟು ರೂಪಾಯಿ ಕಟ್ಟಬಹುದು ಎನ್ನುವುದನ್ನು ನಿರ್ಧರಿಸಿ, ಅರ್ಜಿಯಲ್ಲಿ ಉಲ್ಲೇಖಿಸಿ.
>> ಅರ್ಜಿ ಭರ್ತಿ ಮಾಡಿ, ಅರ್ಜಿ ಜೊತೆಯಲ್ಲಿ ಬೇಕಾದ ದಾಖಲೆಗಳನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು?
* ಜನನ ಪ್ರಮಾಣ ಪತ್ರ (Birth Certificate)
* ಪೋಷಕರ ಆಧಾರ್ ಕಾರ್ಡ್ (Aadhar Card)
* ಅರ್ಜಿ ನಮುನೆ (Form -1A)
* ಮಗು ಮತ್ತು ಪೋಷಕರ ಫೋಟೋ 
* ಠೇವಣಿ ಮೊತ್ತ (ಅರ್ಜಿಯಲ್ಲಿ ನಮೂದಿಸಿರುವಷ್ಟು)
* ಪಾಸ್ ಬುಕ್ ಪ್ರತಿ ಮತ್ತು ಖಾತೆ ಸಂಖ್ಯೆ 

ಪೋಷಕರು ತಿಳಿಯಲೇಬೇಕಾದ ಕೆಲವು ಸಂಗತಿಗಳು: 
>> ಸುಕನ್ಯಾ ಸಮೃದ್ಧಿ ಯೋಜನೆಗೆ ನೀಡುವ ಬಡ್ಡಿ ದರ ಸರ್ಕಾರದ ಮಾರ್ಗಸೂಚಿ ಅನ್ವಯ ಮೂರು ತಿಂಗಳಿಗೊಮ್ಮೆ ಬದಲಾಗುವ ಸಾಧ್ಯತೆ ಇರುತ್ತದೆ. 
>> ಈ ಯೋಜನೆಯಿಂದ ಹೆಚ್ಚು ಲಾಭ ಗಳಿಸಬೇಕು ಎಂದರೆ ಪ್ರತಿ ತಿಂಗಳು ಸಣ್ಣ ಸಣ್ಣ ಮೊತ್ತ ಪಾವತಿಸುವುದಕ್ಕಿಂತ ವರ್ಷದಲ್ಲಿ ಒಮ್ಮೆ (ಆರಂಭದಲ್ಲಿ) ದೊಡ್ಡ ಮೊತ್ತ ಕಟ್ಟಬೇಕು. ಆಗ ಹೆಚ್ಚು ಬಡ್ಡಿ ಸಿಗುತ್ತದೆ.
>> ಮಗಳಿಗೆ 10 ವರ್ಷ ಆಗುವವರೆಗೆ ತಡಮಾಡದೆ ಆಕೆ ಹುಟ್ಟಿದಾಗಲೇ ಖಾತೆ ಆರಂಭಿಸಿದರೆ ಹೆಚ್ಚು ಲಾಭ. ಇದರಿಂದ ಆಕೆ 18 ವರ್ಷ ಪೂರೈಸಿದಾಗ ಉನ್ನತ ಶಿಕ್ಷಣಕ್ಕೂ ಹಣ ಸಿಗುತ್ತದೆ ಮತ್ತು ಆಕೆಯ ಮದುವೆಗೆ ದುಡ್ಡು ಸಿಗುತ್ತದೆ.
>> ಸೆಕ್ಷನ್ 80C ಅಡಿ ನೀವು ವರ್ಷಕ್ಕೆ 1,50,000 ರೂಪಾಯಿ ಹಣ ಪಾವತಿ ಮಾಡಿ 21 ವರ್ಷದ ಬಳಿಕ 70 ಲಕ್ಷ ರೂಪಾಯಿ ಪಡೆದರೂ ತೆರಿಗೆ ಪಾವತಿಸಬೇಕಾಗಿಲ್ಲ.
ಇದು ಹಣ ಉಳಿತಾಯ ಮಾಡಲೆಂದು ರೂಪಿಸಿರುವ ಯೋಜನೆ ಮಾತ್ರವಲ್ಲ, ಹೆಣ್ಣು ಸುರಕ್ಷತೆಗಾಗಿ ಮಾಡಿರುವಂಥದ್ದು.
 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News