)
Post Office Senior Citizen Scheme: ನಿವೃತ್ತಿಯ ನಂತರ ತಮ್ಮ ಆರ್ಥಿಕ ಭದ್ರತೆಯ ಬಗ್ಗೆ ಕಾಳಜಿ ವಹಿಸುವ ಹಿರಿಯ ನಾಗರಿಕರಿಗಾಗಿ ಅಂಚೆ ಕಚೇರಿ ಅತ್ಯುತ್ತಮ ಯೋಜನೆಯನ್ನ ನೀಡುತ್ತಿದೆ. ಈ ಯೋಜನೆಯನ್ನ ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಂದು ಕರೆಯಲಾಗುತ್ತದೆ. ಇದು ಅವರ ಸಂಬಳ ನಿಂತರೂ ವೆಚ್ಚಗಳಿಗಾಗಿ ಸ್ಥಿರ ಮಾಸಿಕ ಆದಾಯವನ್ನ ಒದಗಿಸುತ್ತದೆ. ನಿವೃತ್ತಿಯ ನಂತರ ಗಳಿಸಿದ ಹಣವನ್ನ ಹೂಡಿಕೆ ಮಾಡಲು ಈ ಯೋಜನೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಮಾರ್ಗವಾಗಿದೆ.
ಹೆಚ್ಚಿನ ಬಡ್ಡಿದರ
ಪ್ರಸ್ತುತ ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಶೇ.8.2ರಷ್ಟು ಆಕರ್ಷಕ ಬಡ್ಡಿದರ ಲಭ್ಯವಿದೆ. ಈ ಯೋಜನೆಯಲ್ಲಿ ಕೇವಲ 1,000 ರೂ. ಹೂಡಿಕೆಯೊಂದಿಗೆ ಖಾತೆಯನ್ನ ತೆರೆಯಬಹುದು. ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಬಹುದು.
ನೀವು 30 ಲಕ್ಷ ರೂ. ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತದೆ?
ಈ ಯೋಜನೆಯಲ್ಲಿ ನೀವು ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಿದರೆ ನಿಮಗೆ ಉತ್ತಮ ಆದಾಯ ಸಿಗುತ್ತದೆ. ಇದರಲ್ಲಿ ವಾರ್ಷಿಕ ಬಡ್ಡಿದರ ಶೇ.8.2 ಇರುತ್ತದೆ. ನಿಮಗೆ ವರ್ಷಕ್ಕೆ 2,46,000 ರೂ. ಸಿಗುತ್ತದೆ. ಈ ಯೋಜನೆಯ ಬಡ್ಡಿದರವನ್ನ ತ್ರೈಮಾಸಿಕಕ್ಕೊಮ್ಮೆ ಖಾತೆಗೆ ಜಮಾ ಮಾಡಲಾಗುತ್ತದೆ. ಅಂದರೆ ನಿಮಗೆ ಪ್ರತಿ 3 ತಿಂಗಳಿಗೊಮ್ಮೆ 61,500 ರೂ. ಸಿಗುತ್ತದೆ. ಇದರ ಪ್ರಕಾರ ಹಿರಿಯ ನಾಗರಿಕರು ಪ್ರತಿ ತಿಂಗಳು ಸುಮಾರು 20,500 ರೂ. ಸ್ಥಿರ ಆದಾಯವನ್ನ ಪಡೆಯುತ್ತಾರೆ.
ಅವಧಿ ಮುಕ್ತಾಯ - ತೆರಿಗೆ ವಿನಾಯಿತಿ
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಮುಕ್ತಾಯ ಅವಧಿಯ ನಂತರ ಇನ್ನೂ 3 ವರ್ಷಗಳವರೆಗೆ ವಿಸ್ತರಿಸಲು ಸಹ ಸಾಧ್ಯವಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪ್ರಯೋಜನ ಸಹ ಒದಗಿಸುತ್ತದೆ.
ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನ ಹಿಂಪಡೆಯದಿದ್ದರೆ, ನಿಮ್ಮ ಹಣವು 5 ವರ್ಷಗಳ ನಂತರ ಸುಮಾರು 42 ಲಕ್ಷ ರೂ.ಗಳಿಗೆ ಬೆಳೆಯಬಹುದು. ಆರ್ಥಿಕ ಸ್ಥಿರತೆಗಾಗಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)