)
Government Schemes: ಶೈಕ್ಷಣಿಕ, ಆರೋಗ್ಯ, ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ನಾಗರೀಕರಿಗಾಗಿ ಹಲವು ಜನಪರ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಇದ್ದರಷ್ಟೇ ಸಾಕಾಗುತ್ತೆ ಎಂದು ನೀವು ಭಾವಿಸಿದರೆ ಅದು ತಪ್ಪು ಕಲ್ಪನೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಲಾಭವನ್ನು ಪಡೆಯಲು ಒಟ್ಟು ಎಂಟು ಬಗೆಯ ಕಾರ್ಡ್ಗಳು ಇರಲೇ ಬೇಕು. ಆ ಕಾರ್ಡ್ಗಳು ಯಾವುವು? ಅವಿಲ್ಲದಿದ್ದರೆ ಏನಾಗುತ್ತದೆ ಎಂದು ತಿಳಿಯೋಣ...
ಸರ್ಕಾರಿ ಯೋಜನೆಗಳ ಪಡೆಯಲು ಈ 8 ಕಾರ್ಡ್ಗಳು ಬೇಕೇ ಬೇಕು:
* ಆಧಾರ್ ಕಾರ್ಡ್:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಿಂದ ನೀಡಲಾಗುವ 12 ವಿಶಿಷ್ಟ ಅಂಕಿಗಳುಳ್ಳ ಕಾರ್ಡ್ ಎಂದರೆ ಆಧಾರ್ ಕಾರ್ಡ್. ಭಾರತ ಸರ್ಕಾರದಿಂದ ದೇಶದ ಪ್ರತಿ ನಾಗರೀಕರಿಗೂ ನೀಡಲಾಗುವ ಈ ಕಾರ್ಡ್ ಒಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಗು ಹುಟ್ಟಿದಾಗಿನಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಪ್ರತಿಯೊಂದು ಕೆಲಸಕ್ಕೂ ಈ ಕಾರ್ಡ್ ಬೇಕೇ ಬೇಕು.
* ಕಿಸಾನ್ ಕಾರ್ಡ್:
ರೈತರಿಗಾಗಿಯೇ ಸಮರ್ಪಿತವಾಗಿರುವ ಕಾರ್ಡ್ ಕಿಸಾನ್ ಕಾರ್ಡ್. ಇದರಲ್ಲಿ ರೈತರ ಜಮೀನಿಗೆ ಸಂಬಂಧಿತ ಪ್ರಮುಖ ಮಾಹಿತಿಗಳನ್ನು ದಾಖಲಿಸಲಾಗಿರುತ್ತದೆ. ಈ ಕಾರ್ಡ್ ಇದ್ದಲ್ಲಿ ಮೋದಿ ಸರ್ಕಾರದಿಂದ ನೀಡಲಾಗುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ ₹6,000 ಆರ್ಥಿಕ ನೆರವು ದೊರೆಯುತ್ತದೆ. ಮಾತ್ರವಲ್ಲ, ಕೃಷಿ ಸಾಲ, ಬೆಳೆ ವಿಮೆ ಇತರ ಕೃಷಿ ಸಂಬಂಧಿತ ಪ್ರಯೋಜನಗಳನ್ನೂ ಪಡೆಯಲು ಈ ಕಾರ್ಡ್ ಅಗತ್ಯವಿದೆ.
* ಶ್ರಮಿಕ್ ಕಾರ್ಡ್:
ಸರ್ಕಾರದಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುವ ಶ್ರಮಿಕ್ ಕಾರ್ಡ್ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಉಚಿತ ಚಿಕಿತ್ಸೆ, ಮದುವೆ ಅನುದಾನ, ಮಕ್ಕಳ ಶಿಕ್ಷಣಕ್ಕೆ ನೆರವಿನ ಜೊತೆಗೆ ಜೀವನ ಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.
* ಇ-ಶ್ರಮ್ ಕಾರ್ಡ್:
ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಇ-ಶ್ರಮ್ ಕಾರ್ಡ್ ಅನ್ನು ಪರಿಚಯಿಸಿದೆ. ಕಾರ್ಮಿಕರಿಗೆ ಅಗತ್ಯ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಕಾರ್ಡ್ನಲ್ಲಿ ಕಾರ್ಮಿಕರ ಸಂಪೂರ್ಣ ಡೇಟಾಬೇಸ್ನ್ನು ರಚಿಸಲಾಗುವುದು. ಇದರಿಂದ ಕಾರ್ಮಿಕರು ಪಿಂಚಣಿ ಆರೋಗ್ಯ ವಿಮೆ, ಕೌಶಲ್ಯ ತರಬೇತಿ, ಉದ್ಯೋಗ ಸಂಬಂಧಿತ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಕಾರಿ ಆಗಿದೆ.
* ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್:
ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್(ಆಭಾ ಕಾರ್ಡ್) ಡಿಜಿಟಲ್ ರೂಪದಲ್ಲಿ ಆರೋಗ್ಯ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಲು ಒದಗಿಸಲಾದ ಕಾರ್ಡ್ ಆಗಿದೆ. ಭಾರತ ಸರ್ಕಾರದಿಂದ ಒದಗಿಸಲಾಗುವ ಆಭಾ ಕಾರ್ಡ್ ಆಯುಷ್ಮಾನ್ ಭಾರತ್ ಯೋಜನೆಯ ಭಾಗವಾಗಿದ್ದು ದೇಶಾದ್ಯಂತ ಎಲ್ಲಾ ನಾಗರೀಕರಿಗೂ ಲಭ್ಯವಾಗುತ್ತದೆ. ಈ ಕಾರ್ಡ್ನಲ್ಲಿ ವ್ಯಕ್ತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು, ನೀಡಿದ ಚಿಕಿತ್ಸೆ, ಔಷಧಿಗಳ ವಿವರಗಳನ್ನು ದಾಖಲಿಸಲಾಗುತ್ತದೆ.
* ಗೋಲ್ಡನ್ ಕಾರ್ಡ್:
ಆಯುಷ್ಮಾನ್ ಭಾರತ್ ಯೋಜನೆಯಡಿ ಈ 'ಗೋಲ್ಡನ್ ಕಾರ್ಡ್' ಅನ್ನು ಒದಗಿಸಲಾಗುತ್ತದೆ. ಇದೊಂದು ಆರೋಗ್ಯ ಕಾರ್ಡ್ ಆಗಿದ್ದು, ಈ ಕಾರ್ಡ್ ಹೊಂದಿರುವ ವ್ಯಕ್ತಿ ದೇಶಾದ್ಯಂತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇದು ವೈದ್ಯಕೀಯ ಶುಲ್ಕ, ಔಷಧೀಯ ಶುಲ್ಕ, ಆಸ್ಪತ್ರೆ ಶುಲ ಎಲ್ಲವನ್ನೂ ಒಳಗೊಂಡಿರುತ್ತದೆ. ವಿಶೇಷವಾಗಿ ದೀರ್ಘಕಾಲಿನ ಕಾಯಿಲೆಗಳ ಚಿಕಿತ್ಸೆ ಪಡೆಯಲು ಇದು ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ ಆರೋಗ್ಯ ಭದ್ರತೆಯನ್ನು ಒದಗಿಸುತ್ತದೆ.
* ಸಂಜೀವನಿ ಕಾರ್ಡ್:
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಜೀವನಿ ಕಾರ್ಡ್ ತುಂಬಾ ಉಪಯುಕ್ತವಾದ ಕಾರ್ಡ್ ಆಗಿದೆ. ಆರೋಗ್ಯ ಸಮಸ್ಯೆಗಳಿಗೆ ತ್ವರಿತ, ಸುಲಭ ಪರಿಹಾರ ಒದಗಿಸುವ 'ಸಂಜೀವಿನಿ ಕಾರ್ಡ್' ವೈದ್ಯಕೀಯ ಸೌಲಭ್ಯ ಕಡಿಮೆ ಇರುವಲ್ಲಿ, ಗ್ರಾಮೀಣ ಭಾಗಗಳಲ್ಲಿ ವರದಾನಕ್ಕಿಂತ ಕಡಿಮೆ ಇಲ್ಲ. ಈ ಕಾರ್ಡ್ ಇದ್ದಲ್ಲಿ ಆನ್ಲೈನ್ ಒಪಿಡಿ (ಔಟ್ಪೇಷೆಂಟ್ ಡಿಪಾರ್ಟ್ಮೆಂಟ್) ಸೌಲಭ್ಯವನ್ನು ಪಡೆಯಬಹುದು. ಸಂಜೀವಿನಿ ಕಾರ್ಡ್ ಮೂಲಕ ಸಾಮಾನ್ಯ ರೋಗಲಕ್ಷಣಗಳ ಸಂದರ್ಭದಲ್ಲಿ ಆನ್ಲೈನ್ನಲ್ಲಿಯೇ ವೈದ್ಯರನ್ನು ಸಂಪರ್ಕಿಸಿ, ಇ-ಪ್ರಿಸ್ಕ್ರಿಪ್ಷನ್ ಪಡೆಯಲು ಇದು ಪ್ರಯೋಜನಕಾರಿ ಆಗಿದೆ.
* ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್(ಎಬಿಸಿ ಕಾರ್ಡ್):
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅಥವಾ ಎಬಿಸಿ ಕಾರ್ಡ್ ಹೆಸರನ್ನು ನೀವು ತುಂಬಾ ವಿರಳವಾಗಿ ಕೇಳಿರಬಹುದು. ಆದರೆ, ಈ ಕಾರ್ಡ್ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕ್ರಮ ಎಂತಲೇ ಹೇಳಬಹುದು. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಕಾರ್ಡ್ ಗಮನಾರ್ಹವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಕಾರ್ಡ್ ಆಗಿದೆ. ಈ ಕಾರ್ಡ್ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಕೋರ್ಸ್ಗಳು, ವಿಶ್ವವಿದ್ಯಾಲಯದ ಕೋರ್ಸ್ಗಳು ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ದಾಖಲಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ಶಿಕ್ಷಣ ವ್ಯವಸ್ಥೆಯನ್ನು ಒದಗಿಸುತ್ತದೆ.