)
Silver price in future: ವೇದಾಂತ ಗ್ರೂಪ್ ಕಂಪನಿಯಾದ ಹಿಂದೂಸ್ತಾನ್ ಜಿಂಕ್ನ ಸಿಇಒ ಅರುಣ್ ಮಿಶ್ರಾ ಪ್ರಕಾರ, ʼಈ ವರ್ಷದ ಡಿಸೆಂಬರ್ವರೆಗೆ ಬೆಳ್ಳಿ ಬೆಲೆಗಳು ಔನ್ಸ್ಗೆ ಸುಮಾರು $55ರಂತೆ ಸ್ಥಿರವಾಗಿರುವ ಸಾಧ್ಯತೆಯಿದೆʼ ಎಂದು ಹೇಳಿದ್ದಾರೆ. ಜಾಗತಿಕ ವ್ಯಾಪಾರ ಅಸ್ಥಿರತೆ ಮತ್ತು ಇತರ ಹೂಡಿಕೆ ಆಯ್ಕೆಗಳಲ್ಲಿ ವಿಶ್ವಾಸದ ಕೊರತೆಯಿಂದ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಹೆಚ್ಚಾಗಿ ಮುಖ ಮಾಡುತ್ತಿದ್ದಾರೆʼ ಎಂದು ಅವರು ಅಭಿಪ್ರಾಯಟ್ಟಿದ್ದಾರೆ. ಈ ವೇದಾಂತ ಗ್ರೂಪ್ ಕಂಪನಿಯು ಜಾಗತಿಕವಾಗಿ ಅಗ್ರ ಐದು ಬೆಳ್ಳಿ ಉತ್ಪಾದಕರಲ್ಲಿ ಒಂದಾಗಿದ್ದು, ದೇಶದ ಅತಿದೊಡ್ಡ ಬೆಳ್ಳಿ ಉತ್ಪಾದಕ ಕಂಪನಿಯಾಗಿದೆ.
ಪ್ರತಿ ಔನ್ಸ್ಗೆ $50 ರಿಂದ $55ರ ನಡುವೆ ಸ್ಥಿರ
"ಜನವರಿ ವೇಳೆಗೆ ಬೆಳ್ಳಿಯ ಬೆಲೆ ಔನ್ಸ್ಗೆ $46 ಎಂದು ನಾನು ಅಂದಾಜಿಸಿದ್ದೆ, ಆದರೆ ಆ ಮಟ್ಟವನ್ನ ದಾಟಿದೆ. ಈಗ ಅದರ ಬೆಲೆ ಡಿಸೆಂಬರ್ವರೆಗೆ ಔನ್ಸ್ಗೆ $50 ರಿಂದ $55ರವರೆಗೆ ಸ್ಥಿರವಾಗಿರಬಹುದು. ಇದು ದೀರ್ಘಕಾಲದವರೆಗೆ ಈ ಮಟ್ಟದಲ್ಲಿ ಸ್ಥಿರವಾಗಿರಬಹುದು ಎಂದು ಅಂದಾಜಿಸಲಾಗಿದೆ" ಎಂದು ಹಿಂದೂಸ್ತಾನ್ ಜಿಂಕ್ ಸಿಇಒ ಅರುಣ್ ಮಿಶ್ರಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ದಾಖಲೆಯ ಗರಿಷ್ಠ $54.49 ತಲುಪಿದ್ದ ಬೆಳ್ಳಿ
ಗುರುವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಪ್ರತಿ ಔನ್ಸ್ಗೆ $54.49ರಷ್ಟು ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು, ಆದರೆ ಶುಕ್ರವಾರ ಶೇ.4.36ರಷ್ಟು ಭಾರೀ ಕುಸಿತದೊಂದಿಗೆ ಪ್ರತಿ ಔನ್ಸ್ಗೆ $51.90ಕ್ಕೆ ಮುಕ್ತಾಯವಾಯಿತು. ಜಾಗತಿಕ ವ್ಯಾಪಾರದಲ್ಲಿನ ಪ್ರಕ್ಷುಬ್ಧತೆ ಮತ್ತು ಇತರ ಹೂಡಿಕೆ ಸಾಧನಗಳಲ್ಲಿ ಸ್ಥಿರತೆಯ ಕೊರತೆಯಿಂದ, ಜನರು ಅಮೂಲ್ಯ ಲೋಹಗಳು ಮತ್ತು ಹೂಡಿಕೆಗೆ ಮೂಲ ಲೋಹಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.
ಸತತ ಎರಡು ದಿನಗಳಿಂದ ಬೆಳ್ಳಿ ಬೆಲೆಯಲ್ಲಿ ಕುಸಿತ
ಶನಿವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನ ಬೆಳ್ಳಿ ಬೆಲೆ ಕುಸಿದಿದೆ. ಶನಿವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ₹7,000ರಷ್ಟು ಕುಸಿದು ₹170,000ಕ್ಕೆ ತಲುಪಿದೆ. ಶುಕ್ರವಾರ ಬೆಳ್ಳಿ ಪ್ರತಿ ಕೆಜಿಗೆ ₹177,000ಕ್ಕೆ ಮುಕ್ತಾಯವಾಗಿತ್ತು. ಕಳೆದ ಧಂತೇರಸ್ನಲ್ಲಿ ದಾಖಲಾದ ಪ್ರತಿ ಕೆಜಿಗೆ ₹99,700 ರಿಂದ ₹70,300 ಅಥವಾ ಶೇ.70.51ರಷ್ಟು ಬೆಳ್ಳಿ ಬೆಲೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಳ್ಳಿಯ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಟ್ಟಪಟ್ಟಿದ್ದಾರೆ.