)
Chowdeshwari Temple Stolen: ದೇವರಿಗೆ ಪೂಜೆ ಸಲ್ಲಿಸಿ, ಭಕ್ತರ ವಿಶ್ವಾಸ ಗಳಿಸಬೇಕಾದ ಪೂಜಾರಿಯೇ ದೇವರ ಆಭರಣಗಳನ್ನು ಕದ್ದು, ಕಳ್ಳತನದ ನಾಟಕವಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುತೂಹಲಕಾರಿ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿರಿಯಲಚೇನಹಳ್ಳಿ ಗ್ರಾಮದ ಪ್ರಸಿದ್ಧ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಸಲ್ಲಿಸುತ್ತಿದ್ದ ಪೂಜಾರಿಯೇ ದೇವರ ಆಭರಣಗಳನ್ನು ಕದ್ದು ಕಳ್ಳತನದ ನಾಟಕವಾಡಿರುವ ಘಟನೆ ನಡೆದಿದೆ.
ದೇವರ ಆಭರಣ ಕಳ್ಳತನ... ಪೂಜಾರಿಯ ವರ್ತನೆಯಿಂದ ಅನುಮಾನ..!
ದೇವಸ್ಥಾನದ ಪೂಜಾರಿಯಾಗಿದ್ದ ಚಿಕ್ಕಮಲ್ಲೇಶಪ್ಪ, ದೇವಿಯ ಆಭರಣಗಳನ್ನು ಕಳ್ಳತನ ಮಾಡಿ, ಯಾರೋ ಕಳ್ಳರು ಬಂದು ದೋಚಿದ್ದಾರೆಂದು ಕಥೆ ಕಟ್ಟಿದ್ದ. ಪೂಜಾರಿಯ ವರ್ತನೆಯಿಂದ ಅನುಮಾನಗೊಂಡ ಗ್ರಾಮದ ಆಡಳಿತಾಧಿಕಾರಿಗಳು, ಕೂಡಲೇ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು, ಪೂಜಾರಿಯನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ.
ಪೊಲೀಸರ ತನಿಖೆಯಿಂದ ಪ್ರಕರಣ ಬೆಳಕಿಗೆ:
ಪೊಲೀಸ್ ತನಿಖೆಯ ವೇಳೆ ಪೂಜಾರಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕೃತ್ಯದಲ್ಲಿ ಆತನಿಗೆ ಸಹಕರಿಸಿದ ಕೇಶವಾರ ಗ್ರಾಮದ ನವೀನ್ ಕುಮಾರ್ (30) ಮತ್ತು ಪುರ ಗ್ರಾಮದ ಲತಾ (45) ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳ್ಳತನವಾಗಿದ್ದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರೆದಿದೆ. ದೇವರನ್ನು ಕಾಯಬೇಕಾದವನೇ ಇಂತಹ ಕೃತ್ಯ ಎಸಗಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.