)
ಬೆಂಗಳೂರು : ಈ ದೃಶ್ಯಾವಳಿಳನ್ನ ಒಮ್ಮೆ ನೋಡಿಕೊಂಡು ಬಿಡಿ. ಇದು ಯಾವುದೋ ತಲೆಹೋಗುವ ವಿಷಯಕ್ಕೆ ನಡೆದಿರುವ ಗಲಾಟೆ ಅಲ್ಲಾ. ಬದಲಿಗೆ ಸಿಗರೇಟ್ ವಿಷಯಕ್ಕೆ ನಡೆದಿರುವ ಗಲಾಟೆ. ಇತ್ತಿಚೇಗೆ ನಗರದಲ್ಲಿ ಪುಡಿ ರೌಡಿಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಕೇವಲ ಸಿಗರೇಟ್ ವಿಚಾರಕ್ಕೆ ಬೇಕರಿ ಮಾಲೀಕ ಅಶೋಕ್ ಪೂಜಾರಿ ಎಂಬುವವರ ಮೇಲೆ ಪುಂಡನೊಬ್ಬ ಹಲ್ಲೆ ಮಾಡಿದ್ದಾನೆ. ಸೆಪ್ಟೆಂಬರ್ 15 ರಂದು ಬಳ್ಳಾರಿ ರಸ್ತೆ ಗಂಗಾನಗರದಲ್ಲಿ ರಾತ್ರಿ ನಡೆದ ಘಟನೆ ನಡೆದಿದ್ದು,
ಬೇಕರಿಗೆ ಬಂದು ಆಸಾಮಿಯೊಬ್ಬ ಸಿಗರೇಟ್ ಖರೀದಿಸಿದ್ದಾನೆ. ಸಿಗರೇಟ್ ಕೊಡಲು ತಡವಾಗಿದಕ್ಕೆ ಗಲಾಟೆ ಮಾಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸಹ ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಆದ್ರೆ ಹಲ್ಲೆ ಮಾಡಿರುವ ಆರೋಪಿ ಮಾತ್ರ ಇನ್ನು ಪತ್ತೆಯಾಗಿಲ್ಲ.
ಮತ್ತೊಂದು ಕಡೆ ಬೇಕರಿಯಲ್ಲಿ ಚಿಪ್ಸ್ ಲೇಟಾಗಿ ಕೊಟ್ಟಿದ್ದಕ್ಕೆ ಆಸಾಮಿಯೊಬ್ಬ ಬೇಕರಿಯಲ್ಲಿ ಗಲಾಟೆ ಮಾಡಿಕೊಂಡಿದ್ದಾನೆ. ಬೇಕರಿಯಲ್ಲಿ ಚಿಪ್ಸ್ ಖರೀದಿ ವಿಚಾರಕ್ಕೆ ಗಲಾಟೆಯಾಗಿದೆ ಅಂತ ಹೇಳಲಾಗುತ್ತಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೇಕರಿಗೆ ಬಂದಿದ್ದ ಯುವಕರಿಂದ 2 ನಿಮಿಷ ಮಾತುಕತೆಯ ನಂತರ ಮಾತಿಗೆ ಮಾತು ಬೆಳೆದು ಏಕಾಏಕಿ ಬೇಕರಿಯವರ ಮೇಲೆ ಹಲ್ಲೆ ಮಾಡಿದ್ದಾರೆ. ಬೇಕರಿಯವರು ಮತ್ತು ಯವಕನ ನಡುವೆ ಹೊಡೆದಾಟವಾಗಿದ್ದು ಇಬ್ಬರು ಸಹ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಇನ್ನು ಬೇಕರಿಯವರು ನೀಡಿದ ದೂರಿನ ಆಧಾರದ ಮೇಲೆ ಅಭಿಷೇಕ್ ಎಂಬಾತನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಈ ಘಟನೆಗಳನ್ನು ನೋಡಿದ್ರೆ ಪೊಲೀಸರ ಭಯವಿಲ್ಲದೇ ಪುಂಡರು ವರ್ತಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಆದ್ರೆ ಎಲ್ಲಿಂದಲೋ ಬಂದು ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸೋರು ಏನ್ ಮಾಡಬೇಕು ಅಂತಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನಾದ್ರೂ ಪೊಲೀಸರು ಇಂತಹ ಪುಂಡರ ಹೆಡೆಮುರಿ ಕಟ್ಟಬೇಕಿದೆ. ಇಲ್ಲದಿದ್ರೆ ಇಂತಹ ಘಟನೆಗಳು ಮತ್ತಷ್ಟು ಮರುಕಳಿಸೋದ್ರಲ್ಲಿ ಆಶ್ಚರ್ಯವಿಲ್ಲ.