)
Gold Loan Scam: ಒಂದಿಲ್ಲೊಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಸಾಲದ ಅಗತ್ಯತೆ ಇದ್ದೇ ಇರುತ್ತದೆ. ಹೀಗೆ ಸಾಲ ಪಡೆಯುವಾಗ ಎಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಗುತ್ತೆ ಎಂದು ಹುಡುಕುತ್ತೇವೆ. ಅಂತಹದರಲ್ಲಿ ಬಡ್ಡಿ ಇಲ್ಲದೆಯೇ ಸಾಲ ಸಿಗುತ್ತೆ ಅಂದ್ರೆ ಜನ ಸಾಲ ಪಡೆಯಲು ಮುಗಿ ಬೀಳ್ತಾರೆ. ಆದರೆ, ಈ ರೀತಿ ಸಾಲ ಪಡೆಯುವ ಮೊದಲು ಹುಷಾರಾಗಿರಿ. 'ಬಡ್ಡಿ ಇಲ್ಲದೆ ಸಾಲ ಕೊಡ್ತೀವಿ ಅಂತ ನಂಬಿಸಿ ಜನರಿಗೆ ಲಕ್ಷ ಲಕ್ಷ ಮೋಸ ಮಾಡಿರುವ ಘಟನೆ ನಡೆದಿದೆ.
ಹೌದು, ಚಿನ್ನ ಅಡಮಾನವಿಟ್ಟು ಸಾಲ ಪಡೆದರೆ ಅದಕ್ಕೆ 11ತಿಂಗಳವರೆಗೆ ಯಾವುದೇ ಬಡ್ಡಿ ಕಟ್ಟಬೇಕಿಲ್ಲ ಎಂದು ಜನರಿಗೆ ಬಡ್ಡಿ ರಹಿತ ಸಾಲದ ರುಚಿ ತೋರಿಸಿದ್ದ ಎಮಿರೆಟ್ ಎಂಬ ಕಂಪನಿ ಇದೀಗ ಚಿನ್ನದ ಜೊತೆಗೇ ಪರಾರಿಯಾಗಿ ಚಿನ್ನ ಅಡಮಾನವಿಟ್ಟು ಸಾಲ ಪಡೆದಿದ್ದವರಿಗೆ ನಾಮ ಹಾಕಿದೆ.
ಎಮಿರೆಟ್ ಎಂಬ ಕಂಪನಿಯು ಚಿನ್ನ ಅಡಮಾನವಿಟ್ರೆ 11 ತಿಂಗಳು ಬಡ್ಡಿ ಇಲ್ಲದೇ ಸಾಲ ಕೊಡುತ್ತಿತ್ತು. ಚಿನ್ನಾಭರಣದ ಮೌಲ್ಯದ 50 ರಿಂದ 60% ಸಾಲ ಕೊಡುತ್ತಿದ್ದ ಈ ಕಂಪನಿಯಲ್ಲಿ ಚಿನ್ನ ಅಡಮಾನವಿಟ್ಟ 11 ತಿಂಗಳವರೆಗೆ ಯಾವುದೇ ಕಾರಣಕ್ಕೂ ಚಿನ್ನ ಬಿಡಿಸಿಕೊಳ್ಳಲು ಅವಕಾಶವಿರಲಿಲ್ಲ.
ಹೇಗೂ ಬಡ್ಡಿ ಇಲ್ಲವಲ್ಲ ಎಂದು ನಂಬಿ ಚಿನ್ನ ಅಡಮಾನವಿಟ್ಟು ಸಾಲ ಪಡೆದಿದ್ದ ಜನರು, 11 ತಿಂಗಳ ನಂತರ ಕಂಪನಿ ಬಳಿ ಹೋಗಿ ನೋಡಿದಾಗ ಅವರ ಚಿನ್ನದ ಜೊತೆ ಆರೋಪಿಗಳು ಪರಾರಿ ಆಗಿರುವ ಬಗ್ಗೆ ಗೊತ್ತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಮೋಸ ಹೋದ ಜನರು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಕಂಪನಿ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ತನಿಖೆ ಆರಂಭಿಸಿದ್ದ ಪೊಲೀಸರು ಘಟನೆ ಸಂಬಂಧಿಸಿದಂತೆ ಸಲಾಮ್, ಅಜಿತ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ವಶ:
1.8 ಕೋಟಿ ಮೌಲ್ಯದ 1 ಕೆಜಿ 450 ಗ್ರಾಂ ಚಿನ್ನಾಭರಣ, ಐದು ಕೆಜಿ ಬೆಳ್ಳಿ, ಚಿನ್ನ ಕರಗಿಸುವ ಯಂತ್ರವನ್ನು ಸಹ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿಗಳು ಬೆಂಗಳೂರು ಮಾತ್ರವಲ್ಲದೇ ಕೇರಳ, ಮಂಗಳೂರಿನಲ್ಲಿ ಇದೇ ರೀತಿ ಹಲವರಿಗೆ ವಂಚಿಸಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.