)
Bengaluru: ರಾಜಧಾನಿ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್ ಬಳಿಯ ಸಂಗೀತ ಸಿಗ್ನಲ್ ಜಂಕ್ಷನ್ನಲ್ಲಿ ಶುಕ್ರವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಆಂಬುಲೆನ್ಸ್ ಒಂದು ಸಿಗ್ನಲ್ನಲ್ಲಿ ನಿಂತಿದ್ದ ಮೂರು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ನಡೆದಿದ್ದು ಹೀಗೆ:
ರಿಚ್ಮಂಡ್ ಸರ್ಕಲ್ ಕಡೆಯಿಂದ ಅತಿ ವೇಗವಾಗಿ ಬಂದ ಕ್ಲೌಡ್ ನೈನ್ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ.
ಸಂಗೀತ ಸಿಗ್ನಲ್ ಬಳಿ ಕೆಂಪು ದೀಪ (ರೆಡ್ ಸಿಗ್ನಲ್) ಇದ್ದ ಕಾರಣ ಬೈಕ್ ಸವಾರರು ರಸ್ತೆಯ ಮೇಲೆ ನಿಂತಿದ್ದರು.
ಈ ವೇಳೆ ಹಿಂದಿನಿಂದ ಅತ್ಯಂತ ವೇಗವಾಗಿ ಬಂದ ಆಂಬುಲೆನ್ಸ್, ಬ್ರೇಕ್ ಹಾಕದೆ ನೇರವಾಗಿ ನಿಂತಿದ್ದ ಮೂರು ಬೈಕ್ಗಳಿಗೆ ಭೀಕರವಾಗಿ ಗುದ್ದಿದೆ.
ಡಿಕ್ಕಿಯಾದ ರಭಸಕ್ಕೆ, ಆಂಬುಲೆನ್ಸ್ ಬೈಕ್ ಸಮೇತ ಸುಮಾರು 200 ಮೀಟರ್ ದೂರದವರೆಗೆ ಸವಾರರನ್ನು ಎಳೆದೊಯ್ದಿದೆ ಎನ್ನಲಾಗಿದೆ.
ಅಂತಿಮವಾಗಿ, ಆಂಬುಲೆನ್ಸ್ ಪಕ್ಕದಲ್ಲಿದ್ದ ಪೊಲೀಸ್ ಚೌಕಿ ಹಾಗೂ ಸಿಗ್ನಲ್ ಕಂಟ್ರೋಲ್ ಯುನಿಟ್ಗೆ ಡಿಕ್ಕಿ ಹೊಡೆದು ನಿಂತಿದೆ.
ಚಾಲಕನ ಅಜಾಗರೂಕತೆ ಮತ್ತು ಸ್ಥಳೀಯರ ಆಕ್ರೋಶ
ಆಂಬುಲೆನ್ಸ್ನಲ್ಲಿದ್ದ ದಾಖಲೆಗಳ ಪ್ರಕಾರ, ವಾಹನದೊಳಗೆ ಯಾವುದೇ ರೋಗಿ ಇರಲಿಲ್ಲ. ಆದರೂ ಚಾಲಕ ರೋಗಿಯನ್ನು ಕರೆದೊಯ್ಯುವವರಂತೆ ಸೈರನ್ ಹಾಕಿಕೊಂಡು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ. ಸಿಗ್ನಲ್ನಲ್ಲಿ ವಾಹನಗಳು ನಿಂತಿರುವುದು ಕಂಡರೂ ಬ್ರೇಕ್ ಹಾಕುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಅಪಘಾತ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಆಂಬುಲೆನ್ಸ್ ಅಪಘಾತವಾಗುತ್ತಿರುವುದು ಇದು ಎರಡನೇ ಬಾರಿ ಎಂದು ಹೇಳಿರುವ ಜನರು, 'ಯಾರೂ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಬರುವ ಇಂತಹ ಚಾಲಕರಿಂದಾಗಿ ಇಂದು ಇಬ್ಬರು ಅಮಾಯಕರ ಪ್ರಾಣ ಹೋಗಿದೆ' ಎಂದು ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಪಗೊಂಡ ಗುಂಪು ಕೊನೆಗೆ ಆಂಬುಲೆನ್ಸ್ ಅನ್ನು ಪಲ್ಟಿ ಮಾಡಿ ತಮ್ಮ ಆಕ್ರೋಶ ಹೊರಹಾಕಿದೆ. ಅಪಘಾತಕ್ಕೆ ಕಾರಣನಾದ ಆಂಬುಲೆನ್ಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.