BOMB THREAT TO SCHOOLS: ಸ್ಫೋಟಕಗಳನ್ನ ತುಂಬಿ ಶಾಲಾ ತರಗತಿಗಳಲ್ಲಿ ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬನಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿ ಭಾಗದ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.

BOMB THREAT TO SCHOOLS: ಸಿಲಿಕಾನ್ ಸಿಟಿ ಬೆಂಗಳೂರಿನ ಶಾಲೆಗಳಿಗೆ ಮತ್ತೊಮ್ಮೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬರೋಬ್ಬರಿ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿರುವ ಘಟನೆ ನಡೆದಿದೆ. Roadkill333atomic@mail.com ಎಂಬ ಐಡಿಯಿಂದ ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿ ಭಾಗದ ಶಾಲೆಗಳಿಗೆ ಬೆದರಿಕೆ ಸಂದೇಶವನ್ನ ಕಳುಹಿಸಲಾಗಿದೆ. ಮೇಲ್ ಗಮನಿಸುತ್ತಿದ್ದಂತೆ ಶಾಲೆಗಳಲ್ಲಿ ಆತಂಕ ಪರಿಸ್ಥಿತಿ ಎದುರಾಗಿದ್ದು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ತೆರಳಿ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ʼಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ಸ್ಫೋಟಕ ತುಂಬಿ ಶಾಲಾ ತರಗತಿಗಳಲ್ಲಿ ಇರಿಸಲಾಗಿದೆ. ನಾನು ಈ ಪ್ರಪಂಚದಿಂದ ಪ್ರತಿಯೊಬ್ಬರನ್ನೂ ಅಳಿಸಿ ಹಾಕುತ್ತೇನೆ. ಈ ಸುದ್ದಿಯನ್ನು ಕಂಡ ಬಳಿಕ ನಾನು ಸಂತೋಷವಾಗಿ ನಗುತ್ತೇನೆ. ಮಕ್ಕಳು ಅಂಗವಿಕಲರಾಗೋದನ್ನ ಪೋಷಕರು ನೋಡಬೇಕು.. ನೀವೆಲ್ಲರೂ ಕಷ್ಟ ಅನುಭವಿಸಲು ಅರ್ಹರು ಆಗಿದ್ದೀರಿ.. ನನಗೆ ನಿಜಕ್ಕೂ ನನ್ನ ಜೀವನವೇ ಇಷ್ಟವಿಲ್ಲ. ಈ ಸುದ್ದಿ ಕೇಳಿದ ನಂತರ ನಾನೂ ಸಹ ನನ್ನ ಕೈ ನಾಡಿ, ಕುತ್ತಿಗೆ ಕೊಯ್ದುಕೊಂಡು ಅತ್ಮಹತ್ಯೆಗೆ ಶರಣಾಗುತ್ತೇನೆ" ಎಂದು ಅಪರಿಚಿತ ವ್ಯಕ್ತಿಯೊಬ್ಬ ಮೇಲ್ ಮಾಡಿದ್ದಾನೆ.
ʼʼನನಗೆ ನಿಜವಾಗಿಯೂ ಮನೋವೈದ್ಯರು ಸಹಾಯ ಮಾಡಿಲ್ಲ, ಕಾಳಜಿ ವಹಿಸಿಲ್ಲ. ಯಾರೂ ಎಂದಿಗೂ ಕಾಳಜಿ ವಹಿಸುವುದೂ ಇಲ್ಲ. ನೀವು ಅಸಹಾಯಕ ಮತ್ತು ಅಜ್ಞಾನಿ ಮಾನವರಿಗೆ ಔಷಧೋಪಚಾರ ಮಾಡುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ಆ ಔಷಧಗಳು ನಿಮ್ಮ ಅಂಗಗಳನ್ನು ಹಾಳುಮಾಡುತ್ತವೆ ಅಥವಾ ಅವು ಅಸಹ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಮನೋವೈದ್ಯರು ನಿಮಗೆ ಎಂದಿಗೂ ಹೇಳುವುದಿಲ್ಲ. ನೀವು ಜನರಿಗೆ ಮಾನಸಿಕ ಔಷಧಗಳು ಸಹಾಯ ಮಾಡುತ್ತವೆ ಎಂದು ಭಾವಿಸುವಂತೆ ಮಾಡುತ್ತೀರಿ. ಆದರೆ ಅದು ಹಾಗೆ ಮಾಡುವುದಿಲ್ಲವೆಂಬುದಕ್ಕೆ ನಾನು ಜೀವಂತ ಸಾಕ್ಷಿ ನೀಡುತ್ತೇನೆ. ನೀವೆಲ್ಲರೂ ಇದಕ್ಕೆ ಅರ್ಹರು, ನೀವು ನನ್ನಂತೆಯೇ ಬಾಳಲು ಅರ್ಹರು. ದಯವಿಟ್ಟು ಈ ಮೇಲ್ ಸಂದೇಶದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿ'' ಎಂದು ರೋಡ್ಕಿಲ್ ಎಂಬ ಹೆಸರಿನೊಂದಿಗೆ ಮೇಲ್ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ 7.45ರ ಸಮಯದಲ್ಲಿ ನಮಗೆ ಮೇಲ್ ಬಂದಿದೆ. ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ತಕ್ಷಣ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಬಂದು ತಪಾಸಣೆ ಮಾಡಿದ್ದಾರೆ, ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಯಾರೋ ಮಾನಸಿಕವಾಗಿ ತೊಂದರೆಗೊಳಗಾಗಿರುವ ವ್ಯಕ್ತಿ ಮೇಲ್ ಮಾಡಿರುವಂತಿದೆ. ಸದ್ಯ ಪರೀಕ್ಷೆಗಳು ಮುಂದುವರೆದಿವೆʼ ಎಂದು ಸೇಂಟ್ ಜರ್ಮನ್ ಅಕಾಡೆಮಿ ಸ್ಕೂಲ್ನ ಪ್ರಿನ್ಸಿಪಾಲ್ ಮೋನಿಕಾ ಆಂಟನಿ ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಸಂದೇಶ ಬಂದಿರುವ ಮೇಲ್ ಡೊಮೈನ್ ಬ್ರಿಟೀಷ್ ಇಂಡಿಯನ್ ಓಷನ್ ಟೆರಿಟರಿಯ ಮೂಲದ್ದಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪೋಲಿಸ್ ಇಲಾಖೆಯ ಮತ್ತೊಂದು ಕರ್ಮಕಾಂಡ ಬಯಲಿಗೆ
ಬೆಂಗಳೂರಿನ ಯಾವ ಶಾಲೆಗಳಿಗೆ ಬಾಂಬ್ ಬೆದರಿಕೆ?
* ಎಂ.ಎಸ್.ಧೋನಿ ಗ್ಲೋಬಲ್ ಸ್ಕೂಲ್
* ಸೈಂಟ್ ಜರ್ಮನ್ ಅಕಾಡೆಮಿ
* ಬಿ.ಎಸ್.ಇಂಟರ್ ನ್ಯಾಷನಲ್ ಸ್ಕೂಲ್
* ಮಾರ್ಟಿನ್ ಲೂಥರ್ ಸ್ಕೂಲ್
* ಬಿಷಪ್ ಕಾಟನ್ ಕಬ್ಬನ್ ಪಾರ್ಕ್
* ಬೆಂಗಳೂರು ಭವನ
* ಚಾಮರಾಜ ಪೇಟೆಯ ವಿಸ್ಡಮ್ ಸ್ಕೂಲ್
ದೆಹಲಿಯ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ!!
ದೆಹಲಿಯ 20ಕ್ಕೂ ಹೆಚ್ಚು ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕ ಮೂಡಿಸಿದೆ. ದೆಹಲಿ ಪೊಲೀಸರು ಮತ್ತು ಇತರ quick-response ಅಧಿಕಾರಿಗಳು ಶೋಧ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಮತ್ತು ಅಗ್ನಿಶಾಮಕ ದಳದವರು ವಿವಿಧ ಶಾಲೆಗಳಿಗೆ ಧಾವಿಸಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದಾರೆ.
ಇಲ್ಲಿಯವರೆಗೆ ಸೌತ್ ಡೆಲ್ಡ್ನ ಸಮ್ಮರ್ಫೀಲ್ಡ್ ಇಂಟರ್ನ್ಯಾಷನಲ್ ಸ್ಕೂಲ್, ಪಿತಾಂಪುರದ ಮ್ಯಾಕ್ಸ್ಫೋರ್ಟ್ ಜೂನಿಯರ್ ಸ್ಕೂಲ್ ಮತ್ತು ಗುರುನಾನಕ್ ಸ್ಕೂಲ್, ದ್ವಾರಕಾದ ಸೇಂಟ್ ಥಾಮಸ್ ಸ್ಕೂಲ್, ಜಿಡಿ ಗೋಯೆಂಕಾ ಸ್ಕೂಲ್ ಮತ್ತು ದ್ವಾರಕಾ ಇಂಟರ್ನ್ಯಾಷನಲ್ ಸ್ಕೂಲ್, ಪಶ್ಚಿಮ ವಿಹಾರ್ನ ರಿಚ್ಮಂಡ್ ಸ್ಕೂಲ್ ಮತ್ತು ರೋಹಿಣಿಯ ಆರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಸೆಕ್ಟರ್ 3ರಲ್ಲಿರುವ ಎಂಆರ್ಜಿ ಸ್ಕೂಲ್, ಸೆಕ್ಟರ್ 24ರಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಸಾವರಿನ್ ಪಬ್ಲಿಕ್ ಸ್ಕೂಲ್ ಮತ್ತು ಹೆರಿಟೇಜ್ ಪಬ್ಲಿಕ್ ಸ್ಕೂಲ್, ಸೆಕ್ಟರ್ 9ರಲ್ಲಿರುವ ಐಎನ್ಟಿ ಪಬ್ಲಿಕ್ ಸ್ಕೂಲ್, ಸೆಕ್ಟರ್ 3ರಲ್ಲಿರುವ ಅಭಿನವ್ ಪಬ್ಲಿಕ್ ಸ್ಕೂಲ್ಗೂ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ.