)
ಬೆಂಗಳೂರು: ನಗರದ ಹೆಚ್ಎಸ್ಆರ್ ಲೇಔಟ್ನ 27ನೇ ಕ್ರಾಸ್ನಲ್ಲಿ ಡಿಸೆಂಬರ್ 22 ರ ಸೋಮವಾರ ರಾತ್ರಿ ಸುಮಾರು 1 ಗಂಟೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಡಿದ ಮತ್ತಲ್ಲಿ ವೇಗವಾಗಿ ಆಡಿ ಕಾರು ಚಾಲನೆ ಮಾಡಿದ್ದ ವಿದ್ಯಾರ್ಥಿಯ ಅಡ್ಡಾದಿಡ್ಡಿ ಚಾಲನೆಯೇ ಈ ದುರಂತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟಿರುವ ವ್ಯಕ್ತಿಯನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸಂತೋಷ್ ದೊಡ್ಡಗೌಡರ್ (26) ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಇವರು, ರಾತ್ರಿ ಫುಟ್ಪಾತ್ನಲ್ಲಿ ಊಟ ಮಾಡಿ ಮನೆ ಕಡೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಆಡಿ ಕಾರು ಮೊದಲು ಸಂತೋಷ್ಗೆ ಡಿಕ್ಕಿ ಹೊಡೆದು, ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಗುದ್ದಿದೆ. ಈ ವೇಳೆ ಸಂತೋಷ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.ಇನ್ನೊಂದೆಡೆಗೆ ರಸ್ತೆ ಬದಿ ನಿಂತಿರುವ ವಾಹನಗಳು ಜಕ್ಕಂಗೊಂಡಿವೆ ಎನ್ನಲಾಗಿದೆ.
ಕಾರು ಚಾಲಕನನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಆತನು ಬಿಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇವರ ತಂದೆ ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.ಈ ದುರಂತದ ದೃಶ್ಯಗಳು ಸಿಸಿಟಿವಿ ಅಲ್ಲಿ ಸೆರೆಯಾಗಿದ್ದು, ಚಾಲಕನು ಕುಡಿದು ಗಾಡಿಯನ್ನು ಓಡಿಸುತ್ತಿದ್ದ ಎನ್ನಲಾಗಿದೆ. ಈಗ ಈ ಘಟನೆಯ ಕುರಿತಾಗಿ .ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಬ್ದುಲ್ ರೆಹಮಾನ್ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.