Dowry Harassment Case: ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಮನನೊಂದು ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ. ಪೂಜಶ್ರೀ (28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಈಗ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೂರು ವರ್ಷಗಳ ಹಿಂದೆ ಮನೆಯವರ ನಿಶ್ಚಯದಂತೆ ಪೂಜಶ್ರೀ ಮತ್ತು ನಂದೀಶ್ ಮದುವೆಯಾಗಿದ್ದು, ದಂಪತಿಗೆ ಹೆಣ್ಣು ಮಗುವಿದೆ. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ನಂತರ ನಂದೀಶ್‌ಗೆ ಅಕ್ರಮ ಸಂಬಂಧ ಇರುವ ವಿಚಾರ ಪೂಜಶ್ರೀಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಪ್ರಶ್ನೆ ಮಾಡಿದ್ದಕ್ಕೆ ನಂದೀಶ್, ʼನಿಮ್ಮ ತಾಯಿ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾʼ ಎಂದು ಹೇಳಿ ಜಗಳವಾಡಿದ್ದನೆಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಯಾತ್ರೆ
ಎರಡ್ಮೂರು ಬಾರಿ ಹಿರಿಯರ ಸಮ್ಮುಖದಲ್ಲಿ ಇಬ್ಬರ ಮಧ್ಯೆ ರಾಜಿ ಪಂಚಾಯ್ತಿ ನಡೆದಿತ್ತು. ಈ ವೇಳೆ ನಾನು ಪತ್ನಿಗೆ ಕಿರುಕುಳ ನೀಡುವುದಿಲ್ಲವೆಂದು ನಂದೀಶ್ ಭರವಸೆ ನೀಡಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಮೂರು ದಿನಗಳ ಹಿಂದೆ ಮತ್ತೆ ಹೆಂಡತಿ ಜೊತೆಗೆ ಜಗಳ ಮಾಡಿದ್ದ ನಂದೀಶ್ ಹಲ್ಲೆ ಮಾಡಿದ್ದ. ಪತಿಯ ಕಿರುಕುಳ ತಾಳಲಾರದೇ ಪೂಜಶ್ರೀ ತವರು ಮನೆಗೆ ಬಂದಿದ್ದರು. ಈ ವಿಚಾರ ತಿಳಿದು ನಂದೀಶ್ ಅತ್ತೆ ಮನೆಗೆ ಬಂದು ಕಥೆ ಕಟ್ಟಿ ಮತ್ತೆ ಪತ್ನಿಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.
ಆದರೆ ಭಾನುವಾರ ಬೆಳಗ್ಗೆ ಪೂಜಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗೆ ಪೂಜಶ್ರೀ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರಗೆ ರವಾನಿಸಲಾಗಿದೆ.
ಇದನ್ನೂ ಓದಿ: ಸಮಾಜವನ್ನು ಒಡೆಯುವ ಕೆಲಸ ಅಕ್ಷಮ್ಯ-ಜೆಡಿಎಸ್ ವಿರುದ್ಧ ಈಶ್ವರ ಖಂಡ್ರೆ ಟೀಕೆ









