)
Gutka
seize
case
: ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 2.19 ಕೋಟಿ ರೂ. ಮೌಲ್ಯದ ನಕಲಿ ಗುಟ್ಕಾ ಪದಾರ್ಥವನ್ನ ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ 8 ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೀದರ್ನ ಚಿದ್ರಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಾನ್ ಮಸಾಲಾ, ತಂಬಾಕು, ಅಡಕೆ ಸೇರಿ ಗುಟ್ಕಾ ತಯಾರಿಕಾ ಪದಾರ್ಥಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ನಕಲಿ ಗುಟ್ಕಾ ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕುರಿತು ಗಾಂಧಿ ಗಂಜ್ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದ್ದು, 8 ಜನರನ್ನ ಬಂಧಿಸಲಾಗಿದೆ.
ತೆಲಂಗಾಣ ಹೈದರಾಬಾದ್ನ ತಸ್ವೀರ್, ಬೀದರ್ನ ರಿಜ್ವಾನ್, ತನ್ನೀರ್ ಶೇರಿಕಾರ್, ಮಣಿಪುರದ ಥೋಂಬಲ್ ಮೌಜಿಂಗ್ನ ಯಾಸೀನ್, ಬಿಶೇನಪುರ ಕೊಕ್ಕಾದ ಮುಹಮ್ಮದ್ ಸಿರಾಜ್ ಖಾನ್, ಮುಹಮ್ಮದ್ ಷರೀಫ್ ಖಾನ್, ಮುಹಮ್ಮದ್ ರೋಹಿತ್ ಖಾನ್ ಹಾಗೂ ಇಂಫಾಲ್ ನಹರೂಪ್ ಪಂಗೂನ್ ಮುಹಮ್ಮದ್ ಅನಸ್ ಬಂಧಿತರು. ಮಣಿಪುರದ ಇನ್ನಿಬ್ಬರು ಹಾಗೂ ಬೀದರ್ನ ಒಬ್ಬ ಕಾರ್ಮಿಕನ ಪತ್ತೆಗೆ ಹುಡುಕಾಟ ನಡೆದಿದೆ.
ನಕಲಿ ಗುಟ್ಕಾ ಕಂಪನಿ ನಡೆಸುತ್ತಿದ್ದ ಮಾಲೀಕರ ಬಂಧನಕ್ಕಾಗಿಯೂ ಪೊಲೀಸರು ಇದೀಗ ಬಲೆ ಬಿಸಿದ್ದಾರೆ. ಜೋಕರ್, ಎಸ್ಎಕೆ ಹೆಸರಿನ ನಕಲಿ ಗುಟ್ಕಾ ಬ್ರ್ಯಾಂಡ್ ಸೃಷ್ಟಿಸಿ ರಾಜ್ಯ ಮತ್ತು ಅಂತರ್ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಹೃದಯಾಘಾತದಿಂದ ಯುವಕನ ದುರ್ಮರಣ
ಚಿದ್ರಿಯ ಮನೆಯಿಂದ ₹1.76 ಕೋಟಿ ಮೌಲ್ಯದ ಗುಟ್ಕಾ, ಪಾನ್ ಮಸಾಲ ಜಪ್ತಿ ಮಾಡಿದರೆ, ಕೊಳಾರ ಕೈಗಾರಿಕಾ ಪ್ರದೇಶದ ಗೋದಾಮುಗಳಿಂದ ₹43.30 ಲಕ್ಷ ಮೌಲ್ಯದ ಗುಟ್ಕಾ, ಪಾನ್ ಮಸಾಲ ತಯಾರಿಸಲು ಬೇಕಾದ ಕಚ್ಚಾ ವಸ್ತು ಮತ್ತು ರಾಸಾಯನಿಕ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಬೀದರ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.
ಆಗಸ್ಟ್ 3ರಿಂದಲೇ ನಕಲಿ ಗುಟ್ಕಾ ಮಾರಾಟಗಾರರ ಮೇಲೆ ಖಾಕಿಪಡೆ ಹದ್ದಿನ ಕಣ್ಣಿಟ್ಟಿತ್ತು.ನಿರಂತರ 28 ದಿನಗಳ ಪ್ರಯತ್ನದ ಬಳಿಕ ಪೊಲೀಸರು ನಕಲಿ ಗುಟ್ಕಾ ತಯಾರಿಕೆದಾರರ ಹೆಡೆಮುರಿ ಕಟ್ಟಿದ್ದಾರೆ. ಅಂತರ್ ರಾಜ್ಯ ಕೂಲಿ ಕಾರ್ಮಿಕರನ್ನ ಬಳಸಿ ದಂಧೆಕೋರರು ನಕಲಿ ಗುಟ್ಕಾ ಉತ್ಪಾದಿಸುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ.