)
ಚಾಮರಾಜನಗರ : ದಂಪತಿಗಳ ಕಲಹ ವಿಕೋಪಕ್ಕೆ ತಿರುಗಿ ಪತ್ನಿ ಮುಂದೆಯೇ ಪತಿ ಕಾವೇರಿ ನದಿಗೆ ಹಾರಿದ ಘಟನೆ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ಶುಕ್ರವಾರ ಸಂಜೆ ನಡೆದಿತ್ತು. ಭಾನುವಾರ ಪತಿಯ ಮೃತದೇಹ ಪತ್ತೆಯಾಗಿದೆ.
ಕೊಳ್ಳೇಗಾಲ ತಾಲೂಕಿನ ಕಜ್ಜಿಹುಂಡಿ ಗ್ರಾಮದ ಮಂಜುನಾಥ್(40) ನದಿಗೆ ಹಾರಿದ್ದ ವ್ಯಕ್ತಿ. ಬೆಳಕವಾಡಿ ಹೊಸಳ್ಳಿ ಗ್ರಾಮದ ರಾಜೇಶ್ವರಿ ಎಂಬವರ ಜೊತೆ ಕಳೆದ 13 ವರ್ಷಗಳ ಹಿಂದೆ ಮದುವೆಯಾಗಿದ್ದ ಮಂಜುನಾಥ್ ದಂಪತಿಗೆ 10 ಮತ್ತು 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಕಜ್ಜಿಹುಂಡಿ ಗ್ರಾಮದಿಂದ ಬೈಕ್ನಲ್ಲಿ ಬೆಳಕವಾಡಿಗೆ ಪತ್ನಿ ರಾಜೇಶ್ವರಿ ಜೊತೆ ತೆರಳುತ್ತಿದ್ದಾಗ ಸಣ್ಣದಾಗಿ ಆರಂಭಗೊಂಡ ಜಗಳ ಏಕಾಏಕಿ ವಿಕೋಪಕ್ಕೆ ತಿರುಗಿ ತಾನು ಸಾಯುತ್ತೇನೆಂದು ಪತಿ ಮಂಜುನಾಥ್ ಸೇತುವೆಯಿಂದ ಕಾವೇರಿ ನದಿಗೆ ಹಾರಿದ್ದರು.
ಸದ್ಯ, ಕಳೆದ ಮೂರು ದಿನಗಳಿಂದ ಮಂಜುನಾಥ್ ನ ಕುರುಹು ನದಿಯಲ್ಲಿ ಪತ್ತೆಯಾಗಿರಲಿಲ್ಲ. ಇಂದು ಕಾವೇರಿ ನದಿಯಲ್ಲಿ ಮಂಜುನಾಥ್ ನ ಶವ ಪತ್ತೆಯಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
ಯುವತಿ ನಾಪತ್ತೆ ಆಗಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ:
ಅನ್ಯ ಕೋಮಿನ ಯುವತಿ ಕಾಣೆಯಾಗಿದ್ದ ವಿಷಯದಲ್ಲಿ ಪೊಲೀಸ್ ಠಾಣೆಗೆ ಪ್ರತಿದೂರು ಸಲ್ಲಿಸಲು ಬಂದಿದ್ದ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿತಕ್ಕೊಳಗಾದ ಘಟನೆ ಶನಿವಾರ ರಾತ್ರಿ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದ ಪೌರ ಕಾರ್ಮಿಕರ ಕಾಲನಿಯ ಆರ್ಮುಗಂ ಗಾಯಾಳು. ಜಾಕೀರ್ ಹಾಗೂ ಆತನ ಸ್ನೇಹಿತ ಮಹದೇವ ಪ್ರಸಾದ್ ಎಂಬವರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 1 ರಿಂದ ಬೇಬಿ ಆಯೇಷಾ ಕಾಣೆಯಾಗಿದ್ದಾಳೆ. ಇದಕ್ಕೆ ಮಹೇಂದ್ರನೇ ಕಾರಣವೆಂದು ಯುವತಿಯ ಸಂಬಂಧಿಕರು ಶಂಕಿಸಿದ್ದಾರೆ. ಇತ್ತ ಗುಂಡ್ಲುಪೇಟೆ ಪಟ್ಟಣದ ಪೌರಕಾರ್ಮಿಕರ ಕಾಲೋನಿಯ ನಿವಾಸಿ, ಮಹೇಂದ್ರ ಸಂಬಂಧಿ ಆರ್ಮುಗಮ್, ಮಹೇಂದ್ರ ಕಾಣೆಯಾಗಿದ್ದಾನೆಂದು ದೂರು ಕೊಡಲು ಠಾಣೆಗೆ ಬಂದಿದ್ದರು. ಈ ವೇಳೆ ಠಾಣೆ ಬಳಿಯೇ ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಚಾಕುವಿನಿಂದ ಆರ್ಮುಗಮ್ ಕುತ್ತಿಗೆಗೆ ಇರಿದಿದ್ದಾರೆ. ಸದ್ಯ ನಾಪತ್ತೆ ಹಾಗೂ ಚಾಕು ಇರಿತ ಸಂಬಂಧ ಪ್ರಕರಣ ದಾಖಲಾಗಿದೆ.