)
Crime News: ಪತ್ನಿಯ ಶೀಲ ಶಂಕಿಸಿ ಕೊಂ*ದಿದ್ದ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಜೀವಾವಧಿ ಸೆರೆವಾಸ ವಿಧಿಸಿ ಆದೇಶಿಸಿದೆ.
ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ನಿವಾಸಿ ಕುಮಾರ್ ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ತಾಯಿಗೆ ಹೊಡೆದು ಕೊಂದ ಬಗ್ಗೆ ಅಪ್ರಾಪ್ತ ಮಗ ದರ್ಶನ್ ಸಾಕ್ಷಿ ನುಡಿದಿರುವುದು ಗಮನಾರ್ಹ.
ಏನಿದು ಪ್ರಕರಣ?
ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ನಿವಾಸಿ ಕುಮಾರ್ 10 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಚಿನ್ನಮ್ಮ ಎಂಬಾಕೆಯನ್ನು ಮದುವೆಯಾಗಿದ್ದನು. ಮದುವೆಯಾದ ನಂತರದ ದಿನಗಳಲ್ಲಿ ಹೆಂಡತಿ ಚಿನ್ನಮ್ಮಳ ಶೀಲದ ಮೇಲೆ ವಿನಾಕಾರಣ ಅನುಮಾನಪಟ್ಟು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದನು. ಇದರಿಂದ ಬೇಸತ್ತ ಚಿನ್ನಮ್ಮ ಮುಳ್ಳೂರಿನಲ್ಲಿರುವ ತನ್ನ ತವರು ಮನೆಗೆ ಹೋಗಿ ವಾಸವಿದ್ದಳು. 2022ರ ಮಾ. 31 ರಂದು ಹೆಂಡತಿ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಚಿನ್ನಮ್ಮಳ ತಂದೆ ಕಾಮ ರಾಜ ನಾಯಕ ಮತ್ತು ತಾಯಿ ರಾಜಮ್ಮಗೆ ತಿಳಿಸಿ ಪತ್ನಿಯನ್ನು ತನ್ನ ಮಗ ದರ್ಶನ್ ಸಮೇತ ಮುಡಿಗುಂಡಕ್ಕೆ ಕರೆತಂದಿದ್ದನು. ಆದರೆ ಬಳಿಕ ಮತ್ತೆ ಪತ್ನಿ ಶೀಲದ ಮೇಲೆ ಅನುಮಾನಪಟ್ಟು ಏ.1 ರ ಬೆಳಗಿನ ಜಾವ ಪತ್ನಿಯ ಜತೆ ಗಲಾಟೆ ತೆಗೆದು ಚಿನ್ನಮ್ಮಳ ಕಪಾಳಕ್ಕೆ ಹೊಡೆದು ಕೆಳಕ್ಕೆ ಬೀಳಿಸಿ ಆಕೆಯ ಎದೆ ಮೇಲೆ ಕುಳಿತು ಕತ್ತು ಹಿಸುಕಿದ್ದನ್ನು ಪುತ್ರ ದರ್ಶನ್ ನೋಡಿದ್ದನು. ಈ ವೇಳೆ, ಕೂಗಿಕೊಂಡ ಮಗ ದರ್ಶನ್ನನ್ನು ಅಪರಾಧಿ ಕುಮಾರ್ ಕೊಠಡಿಗೆ ಕೂಡಿ ಹಾಕಿದ್ದು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಅವರು ಜೀವಾವಧಿ ಸೆರೆವಾಸ ಮತ್ತು ಮತ್ತು 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.