Student pregnancy case in Yadgir: ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹೆರಿಗೆಯಾಗಿದ್ದ ಪ್ರಕರಣ ಸಂಬಂಧ ಇದೀಗ ಪ್ರಮುಖ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಹಾಸ್ಟೆಲ್ ವಾರ್ಡನ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಶಹಾಪುರ ಪೊಲೀಸರು ಪ್ರಮುಖ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Student pregnancy case
: ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದ ಪ್ರಕರಣ ಸಂಬಂಧ ಇದೀಗ ಪ್ರಮುಖ ಆರೋಪಿಯನ್ನ ಶಹಾಪುರ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ ಪೂಜಾರಿ (30) ಬಂಧಿತ ಆರೋಪಿ. ಸದ್ಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಹಾಸ್ಟೆಲ್ ವಾರ್ಡನ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಪರಮಣ್ಣನನ್ನು ಬಂಧಿಸಿ A1 ಆರೋಪಿಯನ್ನಾಗಿ ಮಾಡಲಾಗಿದೆ. ಬಂಧಿತ ಆರೋಪಿ ಪರಮಣ್ಣ ಅಪ್ರಾಪ್ತೆಯ ಜೊತೆಗೆ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದನೆಂದು ತಿಳಿದುಬಂದಿದೆ.
ಏನಿದು ಘಟನೆ..?
ಯಾದಗಿರಿ ಜಿಲ್ಲೆಯ ಶಹಾಪುರ ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಚಿರಾಡುವ ಶದ್ಧ ಕೇಳಿಬಂದಿತ್ತು. ಹೀಗಾಗಿ ಎಲ್ಲರೂ ಓಡಿ ಹೋಗಿ ನೋಡಿದ್ದಾರೆ. ಅಷ್ಟರಲ್ಲಿ ಓರ್ವ ವಿದ್ಯಾರ್ಥಿನಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ದೃಶ್ಯ ಕಂಡುಬಂದಿತ್ತು. ಕೂಡಲೇ ಸಹಪಾಠಿ ವಿದ್ಯಾರ್ಥಿನಿಯರು ಬಾಲಕಿಗೆ ಹೆರಿಗೆ ಮಾಡಿಸಿದ್ದರು. ಬಳಿಕ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ ಸ್ಟಾಪ್ ನರ್ಸ್ಗೆ ವಿಷಯ ತಿಳಿದಿತ್ತು. ಕೂಡಲೇ ವಿದ್ಯಾರ್ಥಿನಿಯ ತಾಯಿಗೆ ಈ ವಿಷಯವನ್ನ ತಿಳಿಸಲಾಗಿತ್ತು. ಇನ್ನು ನವಜಾತ ಶಿಶುವನ್ನ ಶಹಾಪುರ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿ
ಬಂಧಿತ ಆರೋಪಿ ಪರಮಣ್ಣನಿಗೆ ಈಗಾಗಲೇ ಮದುವೆಯಾಗಿ ಮಗು ಕೂಡ ಇದೆ. ಅಪ್ರಾಪ್ತ ಬಾಲಕಿಗೆ ಜನಿಸಿದ ಮಗುವಿಗೂ ಈತ ಈತನೇ ತಂದೆಯಾಗಿರುವ ವಿಚಿತ್ರ ಘಟನೆ ಇದಾಗಿದೆ. ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿ ಪರಮಣ್ಣ, ತನ್ನ ಟಾಟಾ ಎಸಿ ವಾಹನದಲ್ಲಿ ಕಾರ್ಮಿಕರನ್ನ ಸಾಗಾಟ ಮಾಡುವ ಕೆಲಸ ಮಾಡ್ತಿದ್ದ.
ಇದನ್ನೂ ಓದಿ: ಬೀದರ್ ನಲ್ಲಿ ನಿರಂತರ ಮಳೆಯಿಂದ ಪ್ರವಾಹ ಭೀತಿ
ಅಕ್ಕಪಕ್ಕದ ಊರು ಆಗಿದ್ದರಿಂದ ಇಬ್ಬರ ನಡುವೆ ಪರಿಚಯವಾಗಿತ್ತು. ನಂತರ ಪರಮಣ್ಣನು ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆಗ ಬಾಲಕಿ ಜೊತೆ ಸಲುಗೆಯಿಂದ ಇದ್ದು, ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಜೊತೆಗೆ ಪರಮಣ್ಣನೇ ಗರ್ಭಿಣಿಯಾಗಲು ಕಾರಣವಾಗಿದ್ದಾನೆಂದು ಬಾಲಕಿ ಬಾಯ್ಬಿಟ್ಟಿದ್ದಾಳೆ. ಬಾಲಕಿ ಹೇಳಿಕೆ ಆಧಾರದ ಮೇಲೆ ಪೊಕ್ಸೋ ಹಾಗೂ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮಗು ಸಮೇತ ಅಪ್ರಾಪ್ತೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ ಕೂಡಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮಾಹಿತಿ ಸಿಕ್ಕಿದೆ. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಆಯೋಗವು, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ವಸತಿ ಶಾಲೆಯ ಶೌಚಾಲಯದಲ್ಲಿ ಹೆರಿಗೆ ಆದರೂ ಪ್ರಾಂಶುಪಾಲರಿಗೆ, ವಾರ್ಡನ್ ಹಾಗೂ ಸ್ಟಾಪ್ ನರ್ಸ್ಗೆ ಮಾಹಿತಿ ಇಲ್ಲದ ಕಾರಣಕ್ಕೆ ಮೂವರ ಮೇಲೆ ಪ್ರಕರಣ ದಾಖಲಿಸಿ ಅಮಾನತ್ತು ಮಾಡಲಾಗಿದೆ. ಅಷ್ಟೇ ಅಲ್ಲದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ವಿದ್ಯಾರ್ಥಿನಿಯ ಸಹೋದರನ ಮೇಲೂ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.