)
ಬೆಂಗಳೂರು : ಈ ಪೋಟೊದಲ್ಲಿರುವ ದಂಪತಿಯ ಹೆಸರು ಪೂನಂ ಸಿಂಗ್ ಮತ್ತು ರವೀಂದರ್ ಸಿಂಗ್. ಉತ್ತರ ಪ್ರದೇಶದ ಗೀರಕ್ ಪುರ ಮೂಲದ ಈ ದಂಪತಿ ಒಂದು ವರ್ಷದ ಹಿಂದೆಯಷ್ಟೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಮೊದಲಿಗೆ ಒಂದಷ್ಟು ದಿನ ಚೆನ್ನಾಗಿಯೇ ಇದ್ದ ಅವರ ದಾಂಪತ್ಯ ಜೀವನದಲ್ಲಿ ಇದ್ದಕ್ಕಿದ್ದಂತೆ ವೈಷಮ್ಯ ಶುರುವಾಗಿತ್ತು. ಸಣ್ಣಪುಟ್ಟ ವಿಚಾರಕ್ಕೆ ದಂಪತಿ ಗಲಾಟೆ ಮಾಡಿಕೊಳ್ಳುತ್ತಿದ್ದು, ನಿನ್ನೆ ಅದೇ ಗಲಾಟೆ ತಾರಕಕ್ಕೇರಿ ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ.
ವರ್ತೂರು ವ್ಯಾಪ್ತಿಯ ಉದಯ ನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಗಂಡ ರವೀಂದರ್ ಸಿಂಗ್ ಕಾರ್ಪೆಂಟರ್ ಆಗಿ ಕೆಲಸ ಮಾಡ್ತಿದ್ರೆ, ಪೂನಂ ಸಿಂಗ್ ಗೃಹಿಣಿಯಾಗಿದ್ದರು. ನಿನ್ನೆ ಬೆಳಗ್ಗೆ ಪೂನಂ ಸಿಂಗ್ ಮತ್ತು ರವೀಂದರ್ ಸಿಂಗ್ ನಡುವೆ ಗಲಾಟೆಯಾಗಿದೆ. ಕುಡಿದ ಅಮಲಿನಲ್ಲಿ ಇದ್ದ ರವೀಂದರ್ ಸಿಂಗ್ ಪತ್ನಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ತೀವ್ರ ಪೆಟ್ಟು ಬಿದ್ದು ಪೂನಂ ಸಿಂಗ್ ಮನೆಯಲ್ಲೆ ಸಾವನ್ನಪ್ಪಿದ್ದಾಳೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳ ಮುಂದೆ ತಾಯಿಯ ದಾರುಣ ಸಾವಾಗಿದೆ ಎನ್ನಲಾಗಿದೆ. ಬಳಿಕ ಮಧ್ಯಾಹ್ನ ಪೂನಂ ಚಿಕ್ಕಪ್ಪ ಮನೆಗೆ ಬಂದಾಗ ರೂಂನ ಬೆಡ್ ಮೇಲೆ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಅಂತಿದ್ರು, ಕುಟುಂಬದವರು ಗಂಡನೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಅಂತಾ ದೂರು ನೀಡಿದ್ದಾರೆ.
ಮಹಿಳೆಯ ಅನುಮಾನಸ್ಪದ ಸಾವಿನ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಕೇಸ್ ದಾಖಲಿಸಿ ಆರೋಪಿ ಗಂಡ ರವೀಂದರ್ ಸಿಂಗ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದೇನೇ ಇರಲಿ ಕೆಲಸ ಹುಡುಕಿಕೊಂಡು ಊರಲ್ಲದ ಊರಿಂದ ಬೆಂಗಳೂರಿಗೆ ಬಂದಿದ್ದ ದಂಪತಿ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದ್ದು, ವಿಪರ್ಯಾಸವೇ ಸರಿ.