ಚಾಮರಾಜನಗರ : ಸಂಜೆ ಮನೆಯಿಂದ ತೆರಳಿದ್ದ ವ್ಯಕ್ತಿ ಮಾರನೇ ದಿನ ಪತ್ತೆಯಾಗಿದ್ದು ಮಾತ್ರ ಶವವಾಗಿ. ಜೀವನದ ಸಂಧ್ಯಾಕಾಲದಲ್ಲಿದ್ದ ವೃದ್ದನನ್ನು ಮಿಸುಕಾಡದಂತೆ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಡೆಡ್ಲಿ ಗ್ಯಾಂಗ್ ಕೊನೆಗೂ ಬಂಧನವಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಗೂರಿನಲ್ಲಿ ಬದುಕು ಕಟ್ಟಿಕೊಂಡು ವಾಸವಾಗಿದ್ದ 73 ವರ್ಷದ ಎಚ್.ಎಂ.ಸ್ವಾಮಿ ಕೊಲೆಯಾದ ದುರ್ದೈವಿ. ಸಾಲದ ಹಣ ಕೊಡ್ತಿನಿ ಬಾ ಎಂದು ಕರೆಸಿಕೊಂಡ ತೊಂಡವಾಡಿ ಗ್ರಾಮದ ಪರಶಿವಮೂರ್ತಿ ಹಾಗೂ ಈತನಿಗೆ ಸಾಥ್ ಕೊಟ್ಟ ಸಿದ್ದರಾಜು ಮತ್ತು ಮಹೇಶ್ ಎಂಬವರು ಜೈಲುಪಾಲಾಗಿದ್ದಾರೆ.
ವೃದ್ಧ ಸ್ವಾಮಿಯು ಜೀವನೋಪಾಯಕ್ಕಾಗಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅದೇ ರೀತಿ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪರಶಿವನಿಗೂ 20 ಸಾವಿರ ಸಾಲ ಕೊಟ್ಟಿದ್ದರು. ಸ್ವಾಮಿ ಅವರಿಗೆ ಚಿನ್ನದ ಮೇಲಿನ ಮೋಹವೂ ಇತ್ತು. ನಾಲ್ಕು ಉಂಗುರ, ಬ್ರೇಸ್ ಲೆಟ್, ಸರ ಹೀಗೆ ಒಟ್ಟು 105 ಗ್ರಾಂ ಚಿನ್ನಾಭರಣ ಧರಿಸುತ್ತಿದ್ದರು. ಮೈತುಂಬಾ ಸಾಲ ಮಾಡಿಕೊಂಡಿದ್ದ ಪರಶಿವ ವೃದ್ದನ ಮೇಲಿನ ಚಿನ್ನ ಕಂಡು ಪ್ಲಾನ್ ಮಾಡಿ ಸಿದ್ದರಾಜು, ಮಹೇಶ್ ಜೊತೆ ಪಿತೂರಿ ನಡೆಸಿ ಕೊಲೆ ಮಾಡಿದ್ದಾರೆ.
ನವೆಂಬರ್ 10 ರ ಸಂಜೆ ಮೈಸೂರಿನಿಂದ ಊರಿಗೆ ಬಂದಿದ್ದ ಸ್ವಾಮಿ ಅವರಿಗೆ ಬಡ್ಡಿ ಹಣವನ್ನು ಕೊಡುತ್ತೇನೆ ಬನ್ನಿ ಎಂದು ಪೋನ್ ಮಾಡಿ ಕರೆಸಿಕೊಂಡ ಪರಶಿವನ ಗ್ಯಾಂಗ್ ತನ್ನ ಆಟೋದಲ್ಲಿ ಸೋಮಹಳ್ಳಿ, ತೊಂಡವಾಡಿ, ಕಮರಹಳ್ಳಿ ಕಡೆಯೆಲ್ಲಾ ಸುತ್ತಾಡಿಸಿ ಬಳಿಕ ಕಮರಹಳ್ಳಿಯ ಸಮೀಪದ ರಸ್ತೆಬದಿ ಸ್ವಾಮಿ ಕುತ್ತಿಗೆಗೆ ಟವೆಲ್ ಬಿಗಿದು ಕೊಂದು ನಿರ್ಜನ ಪ್ರದೇಶದಲ್ಲಿ ಬೀಸಾಡಿದ್ದರು.
ಮನೆಯಿಂದ ತೆರಳಿದ್ದ ಪತಿ ಕಾಣದೇ ಮಾರನೆ ದಿನ ಬೆಳಗ್ಗೆ ಶವವಾಗಿ ಬಿದ್ದಿದ್ದನ್ನು ಕಂಡ ಪತ್ನಿ ಅಮ್ಮಯ್ಯಭಾಯಿ ಬೇಗೂರು ಠಾಣೆಗೆ ದೂರು ಕೊಟ್ಟಿದ್ದರು. ತನ್ನ ಪತಿ ಸದಾ ಕುತ್ತಿಗೆಯಲ್ಲಿ ಧರಿಸುತ್ತಿದ್ದ ಹುಲಿಯುಗುರಿನ ಚಿನ್ನದ ಸರ ಹಾಗೂ ಕೈಬೆರಳಿನಲ್ಲಿ ಧರಿಸುತ್ತಿದ್ದ ಚಿನ್ನದ ಉಂಗುರಗಳು ಕಾಣೆಯಾಗಿದ್ದು ಸಂಶಯಾಸ್ಪದವಾಗಿದೆ ಎಂದು ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಬೇಗೂರು ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ಸಿಬ್ಬಂದಿ
ಸ್ವಾಮಿಗೆ ಅವರಿಗೆ ಮಾಡಿದ್ದ ಕಡೇ ಫೋನ್ ಕಾಲ್ ನ್ನು ಬೆನ್ನತ್ತಿ ಹೋದಾಗ ಪರಶಿವನ ಗ್ಯಾಂಗ್ ತಗ್ಲಾಕಿಕೊಂಡಿದೆ.
ಆರೋಪಿಗಳಿಂದ ಚಿನ್ನ ಗಿರವಿಗಿಟ್ಟಿದ ಚೀಟಿ, ಎರಡು ಲಕ್ಷ ಹತ್ತು ಸಾವಿರ ನಗದು, ಚಿನ್ನದ ಬ್ರೇಸ್ ಲೆಟ್ ಹಾಗೂ ಉಂಗುರ ವಶಕ್ಕೆ ಪಡೆದು ಆರೋಪಿಗಳನ್ನು ಬೇಗೂರು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವೃದ್ಧನ ಕೊಂದು ಬಚಾವಾಗಬಹುದು ಎಂದುಕೊಂಡಿದ್ದ ಪರಶಿವನ ಗ್ಯಾಂಗ್ ತಗ್ಲಾಕಿಕೊಂಡಿದೆ. ಹಣ, ಚಿನ್ನಕ್ಕಾಗಿ ವೃದ್ಧನ ಕೊಂದ ಈ ಕಿರಾತಕರು ಮನುಷ್ಯ ಕುಲದಲ್ಲಿ ಹುಟ್ಟಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು ತೀರಿಸಲಾಗದಷ್ಟು ಸಾಲ ಮಾಡಿಕೊಂಡು ಕೊನೆಗೇ ವೃದ್ಧನ ಜೀವ ತೆಗೆದಿರುವುದು ನಿಜಕ್ಕೂ ಘೋರ ಅಪರಾಧವಾಗಿದೆ.
ಇದನ್ನೂ ಓದಿ :ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್ ಪುಲ್ ಸೈಲೆಂಟ್! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
ಇದನ್ನೂ ಓದಿ : ಕಬ್ಬಿಗೆ ಏಕರೂಪ ಬೆಲೆ ಪಡೆಯುವುದರಲ್ಲಿ ರೈತರ ಕೈ ಮೇಲು









