ಚಾಮರಾಜನಗರ: ಹುಲಿ ದಾಳಿ ಉಪಟಳ ನಿಂತಿತು ಎಂಬ ಆಶಾಭಾವ ಮೂಡಿದ ಹೊತ್ತಿನಲ್ಲೇ ರೈತನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಕುಂದಕೆರೆ ಗ್ರಾಮದ ಮಲಿಯಪ್ಪ (60) ಹುಲಿ ದಾಳಿಗೊಳಗಾದ ರೈತ. ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುವಾಗ ಪೊದೆಯಲ್ಲಿ ಅಡಗಿದ್ದ ಹುಲಿ ಏಕಾಏಕಿ ಹಸುವಿನ ಮೇಲೆ ಎಗರಿ ದಾಳಿ ಮಾಡಿದೆ. ಕೂಡಲೇ ಮಲಿಯಪ್ಪ ಹಸು ಬಿಡಿಸಲು ಕೂಗಿಕೊಂಡಾಗ ರೈತನ ಮೇಲೂ ದಾಳಿ ಮಾಡಿದ್ದು, ಕಣ್ಣು, ಹಣೆ ಮತ್ತು ತಲೆ ಹಿಂಬದಿ ಭಾಗಕ್ಕೆ ಕಚ್ಚಿ, ಪರಚಿ ತೀವ್ರವಾಗಿ ಗಾಯಗೊಳಿಸಿದೆ.
ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರ ವಿಚಾರ: ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು..?
ಇದನ್ನ ಗಮನಿಸಿದ ಅಕ್ಕಪಕ್ಕದ ಜಮೀನಿನ ರೈತರ ಕಿರುಚಾಟಕ್ಕೆ ವ್ಯಾಘ್ರ ಸ್ಥಳದಿಂದ ಕಾಲ್ಕಿತ್ತಿದೆ. ಮಾಹಿತಿ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಗಾಯಾಳು ಮಲಿಯಪ್ಪನನ್ನ ಗುಂಡ್ಲುಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಇಂದು ಬೆಳಗ್ಗೆ ಕುಂದಕೆರೆ ಗ್ರಾಮದ ಮಹದೇವೆಗೌಡ ಎಂಬುವವರಿಗೆ ಸೇರಿದ ಮೇಕೆ ಮೇಲೆ ಅದೇ ಹುಲಿ ಬೆಳಗ್ಗೆ 11 ಗಂಟೆಗೆ ದಾಳಿ ನಡೆಸಿ ಕೊಂದು ಹಾಕಿದ್ದು, ಘಟನೆ ನಡೆದ ಎರಡು ಕಿ.ಮೀ ಅಂತರದಲ್ಲಿ ಕರು ಮತ್ತು ರೈತನ ಮೇಲೆ ಮತ್ತೆ ದಾಳಿ ಮಾಡಿದೆ. ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಸದನದಲ್ಲಿಯೂ ಸಿಎಂ ಬದಲಾವಣೆಯ ಸದ್ದು: ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದೇನು?
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕುಂದಕೆರೆ ವಲಯ ವ್ಯಾಪ್ತಿಯ ಕುಂದಕೆರೆ ಗ್ರಾಮದ ಆಸುಪಾಸು ಹಾಡಹಗಲೇ ರೈತನ ಮೇಲೆ ಹುಲಿ ದಾಳಿ ಮಾಡಿರುವುದರಿಂದ ರೈತಾಪಿ ವರ್ಗ ಮತ್ತು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಸಫಾರಿ ಸ್ಥಗಿತವಾದ ನಂತರ ಹುಲಿ ಮತ್ತು ಚಿರತೆ ಉಪಟಳ ಕಡಿಮೆಯಾಗಿತ್ತು. ಇದೀಗ ಬುಧವಾರ ಜಾನುವಾರು ಮತ್ತು ರೈತನ ಮೇಲೆ ಹುಲಿ ದಿಢೀರ್ ದಾಳಿಗೆ ಮುಂದಾಗಿರುವುದರಿಂದ ಆತಂಕ ಮತ್ತೆ ಸೃಷ್ಟಿಯಾಗಿದೆ.









