)
Online Loan: ಸಾಲದ ಸುಳಿಯಿಂದ ಪಾರಾಗಲು ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಆತಂಕಕಾರಿ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಆನ್ಲೈನ್ ಆ್ಯಪ್ಗಳ ಸಾಲದ ಶೂಲಕ್ಕೆ ಸಿಲುಕಿ, ಸಾಲಗಾರರ ಕಾಟ ತಾಳಲಾರದೆ, ವ್ಯಕ್ತಿಯೊಬ್ಬ ತಾನೇ ಕತ್ತು ಸೀಳಿಕೊಂಡು ಕೊ*ಲೆ ಯತ್ನ ಹಾಗೂ ದರೋಡೆಯ ನಾಟಕವಾಡಿದ್ದಾನೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕಿನ ಭೀರಂಗಿವಾಂಡ್ಲಪಲ್ಲಿ ಗ್ರಾಮದ 25 ವರ್ಷದ ಮಲ್ಲಿಕಾರ್ಜುನರೆಡ್ಡಿ ಎಂಬ ಯುವಕನೇ ಈ ನಾಟಕದ ಸೂತ್ರಧಾರಿ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಹಲವಾರು ಆನ್ಲೈನ್ ಆ್ಯಪ್ಗಳ ಮೂಲಕ ಸುಲಭವಾಗಿ ಸಾಲ ಪಡೆದಿದ್ದ. ಆದರೆ, ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗದೆ, ಖಾಸಗಿ ಹಣಕಾಸು ಸಂಸ್ಥೆಗಳಿಂದ ನಿರಂತರ ಒತ್ತಡ ಮತ್ತು ಬೆದರಿಕೆಯನ್ನು ಎದುರಿಸುತ್ತಿದ್ದ.ಈ ಸಾಲದ ವಿಚಾರ ಮನೆಯವರಿಗೆ ತಿಳಿದರೆ ಎಲ್ಲಿ ಮರ್ಯಾದೆ ಹೋಗುವುದೋ ಎಂದು ಹೆದರಿದ ಮಲ್ಲಿಕಾರ್ಜುನರೆಡ್ಡಿ, ಮನೆಯವರಿಂದ ಅನುಕಂಪ ಗಿಟ್ಟಿಸಲು ಒಂದು ಭಯಾನಕ ನಾಟಕವನ್ನೇ ರೂಪಿಸಿದ್ದಾನೆ.
ತಾನು ಇತರರಿಗೆ ನೀಡಿದ್ದ ಸಾಲವನ್ನು ವಸೂಲಿ ಮಾಡಿಕೊಂಡು ಮನೆಗೆ ಬರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಈತ, ನಂತರ ಬಾಗೇಪಲ್ಲಿಗೆ ವಾಪಸ್ ಬರುವ ದಾರಿಯಲ್ಲಿ ನಾಲ್ಕು ದುಷ್ಕರ್ಮಿಗಳು ತನ್ನ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ, ಹಣ ಕಸಿದುಕೊಂಡು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ತನ್ನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾನೆ.ಈ ಸುದ್ದಿಯಿಂದ ಗಾಬರಿಗೊಂಡ ಪೋಷಕರು, ತಕ್ಷಣವೇ ಮಲ್ಲಿಕಾರ್ಜುನರೆಡ್ಡಿಯನ್ನು ಪತ್ತೆಹಚ್ಚಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕತ್ತಿನ ಭಾಗದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನಿಗೆ ಐಸಿಯುನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣ ಉಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ನೇತೃತ್ವದ ಪೊಲೀಸ್ ತಂಡವು ಮಲ್ಲಿಕಾರ್ಜುನರೆಡ್ಡಿಯ ಹೇಳಿಕೆ ಪಡೆದಾಗ, ಅವರ ವರ್ತನೆಯಿಂದ ಅನುಮಾನಗೊಂಡಿದ್ದಾರೆ.
ಪೊಲೀಸರ ತೀವ್ರ ವಿಚಾರಣೆ ವೇಳೆ, ಮಲ್ಲಿಕಾರ್ಜುನರೆಡ್ಡಿ ಸತ್ಯ ಬಾಯ್ಬಿಟ್ಟಿದ್ದಾನೆ. ಯಾವುದೇ ದರೋಡೆ ನಡೆದಿಲ್ಲ, ಯಾರೂ ತನ್ನ ಹಣವನ್ನು ದೋಚಿಲ್ಲ, ಬದಲಾಗಿ ಸಾಲಗಾರರಿಂದ ಪಾರಾಗಲು ಮತ್ತು ಮನೆಯವರ ಅನುಕಂಪ ಪಡೆಯಲು ತಾನೇ ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಆನ್ಲೈನ್ ಸಾಲದ ಸುಲಭದ ಆಮಿಷಕ್ಕೆ ಬಲಿಯಾಗಿ, ಸಾಲದ ಸುಳಿಯಿಂದ ಹೊರಬರಲಾಗದೆ ಯುವಕನೊಬ್ಬ ಪ್ರಾಣಕ್ಕೇ ಸಂಚಕಾರ ತಂದುಕೊಂಡ ಈ ಘಟನೆ, ಎಲ್ಲರಿಗೂ ಒಂದು ಎಚ್ಚರಿಕೆಯ ಪಾಠವಾಗಿದೆ.