)
Crime News: ಆಸ್ತಿ ವಿಚಾರವಾಗಿ ನಡೆದ ಕೌಟುಂಬಿಕ ಕಲಹದಲ್ಲಿ ಹೆಲ್ಲೆಗೆ ಒಳಗಾಗಿ ಎರಡೂ ಕೈ-ಕಾಲು ಮುರಿದುಕೊಂಡು, ಗಾಯಗೊಂಡಿರುವ ವ್ಯಕ್ತಿಯೋರ್ವ ನ್ಯಾಯಕ್ಕಾಗಿ ಆ್ಯಂಬುಲೆನ್ಸ್ ಸಹಿತವೇ ಬಾಗಲಕೋಟೆ ನಗರದ ಎಸ್ಪಿ ಕಚೇರಿಗೆ ಬಂದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ. ಹೆಂಡತಿ ಮತ್ತವರ ಕಡೆಯವರೇ ಗಂಡನನ್ನು ಈ ಸ್ಥಿತಿಗೆ ತಂದಿರುವುದಾಗಿ ಆರೋಪಿಸಲಾಗಿದೆ.
ಬೀಳಗಿ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಕಲ್ಮೇಶ ಜೋಗಿ ಎನ್ನುವ ವ್ಯಕ್ತಿಯೇ ಹಲ್ಲೆಗೆ ಒಳಗಾಗಿ ಕೈಕಾಲು ಮುರಿದುಕೊಂಡ ವ್ಯಕ್ತಿ. ತನ್ನ ಹೆಂಡತಿ ಮಹಾದೇವಿ, ಆಕೆಯ ತಮ್ಮ ಶಂಕರ ಜಿಡ್ಡಿಮನಿ ಕಡೆಯಿಂದ ಹಲ್ಲೆ ಮಾಡಿಸಿದ್ದಾಳೆಂದು ಆರೋಪಿಸಿದ್ದಾನೆ.ಇನ್ನು ಹೆಂಡತಿ ಇಷ್ಟೊಂದು ಕ್ರೂರ ಮಟ್ಟಕ್ಕೆ ಇಳಿಯಲು ಕಾರಣ ಕೇವಲ ಆಸ್ತಿ ಎನ್ನೋದು ಗಾಯಾಳು ಹಾಗೂ ಸಂಬಂಧಿಗಳ ಆರೋಪವಾಗಿದೆ.
ನಾಲ್ಕು ಎಕರೆ ಆಸ್ತಿಗಾಗಿ ಹೆಂಡತಿ ಮಹಾದೇವಿ ತನ್ನ ತವರು ಮನೆಯವರನ್ನ ಕರೆಯಿಸಿ ಹೊಡೆಸುತ್ತಿದ್ದಾರೆಂದು ಪತಿ ಕಲ್ಮೇಶ ಜೋಗಿ ಆರೋಪಿಸಿದ್ದಾರೆ. ತಾವು ಹೇಳಿದಲ್ಲಿ ಸಹಿ ಮಾಡುವಂತೆ ಒತ್ತಡ ಹೇರಿದ ಹಿನ್ನೆಲೆ ಗಲಾಟೆ ನಡೆದಿದ್ದು, ಈ ವೇಳೆ ಹೆಂಡತಿ ಕಡೆಯವರು ತನ್ನ ಕೈ ಕಾಲುಗಳನ್ನು ಮುರಿದಿರುವುದಾಗಿ ಕಲ್ಮೇಶ್ ಹೇಳಿದ್ದಾರೆ.
ಕಳೆದ ಸೆ.4 ರಂದು ಘಟನೆ ನಡೆದಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಕಲ್ಮೇಶ ಈಗ ಪ್ರಜ್ಞೆ ಬಂದ ಬಳಿಕ ಎಸ್ಪಿ ಅವರ ಬಳಿ ನ್ಯಾಯ ಕೇಳಲು ಬಂದಿದ್ದಾಗಿ ಗಾಯಾಳುವಿನ ಸಹೋದರಿ ಯಮುನಾಬಾಯಿ ಹೇಳಿದ್ದಾರೆ.
ಕೇವಲ ಕಲ್ಮೇಶನ ಹೆಂಡತಿ ಮಹದೇವಿಯ ತಮ್ಮ ಮಾತ್ರ ನನ್ನ ಸಹೋದರನ ಮೇಲೆ ಹಲ್ಲೆ ಮಾಡಿಲ್ಲ, ಅವರ ಸಂಬಂಧಿಕರೂ ಹಲ್ಲೆ ಮಾಡಿದ್ದು, ಮಹದೇವಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಯಿಸಬೇಕೆಂದು ಎಸ್ಪಿ ಅವರಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಒಟ್ಟಾರೆ ಆದರ್ಶ ಸತಿಪತಿಗಳಾಗಿ ಬಾಳಿ ಬದುಕಬೇಕಾದ ದಂಪತಿಗಳ ಬಾಳಲ್ಲಿ ಆಸ್ತಿ ವಿಚಾರ ವಿವಾದವನ್ನ ಭುಗಿಲೆಬ್ಬಸಿದೆ. ನ್ಯಾಯಕ್ಕಾಗಿ ಪತಿ ಆ್ಯಂಬುಲೆನ್ಸ್ ನಲ್ಲಿ ಪೊಲೀಸ್ ಠಾಣೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.