)
Hubballi: ಹೆಂಡತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವ ಮನನೊಂದು ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ. ಫಕ್ಕಿರೇಶ್ ಗುರುಸಿದ್ದಪ್ಪ ರೋಗನ್ನವರ (40) ಆತ್ಮಹ*ತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ಈತ ವೃತ್ತಿಯಲ್ಲಿ ಚಾಲಕನಾಗಿದ್ದಾನೆ.
ಕಳೆದ 12 ವರ್ಷಗಳ ಹಿಂದೆ ಈತ ಕುಂದಗೋಳ ತಾಲೂಕಿನ ರಾಮಗೇರಿ ಗ್ರಾಮದ ಮಂಜವ್ವ ಅಲಿಯಾಸ್ ಎಲ್ಲವ್ವ ಎಂಬಾಕೆಯನ್ನ ಮದುವೆಯಾಗಿದ್ದ. ಈ ದಂಪತಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಸಹ ಪತ್ನಿ ಮಂಜವ್ವ ಮತ್ತೊರ್ವನ ಜೊತೆಗೆ ಅನೈತಿಕ ಸಂಬಂಧವನ್ನ ಹೊಂದಿದ್ದಾಳೆಂದು ಆರೋಪಿಸಲಾಗಿದೆ.
ಈ ವಿಷಯ ಫಕ್ಕಿರೇಶನಿಗೆ ಗೊತ್ತಾಗಿ ಕುಡಿತದ ಚಟಕ್ಕೆ ದಾಸನಾಗಿದ್ದನಂತೆ. ಇದನ್ನೆ ಬಂಡವಾಳ ಮಾಡಿಕೊಂಡ ಪತ್ನಿ ಮಂಜವ್ವ ಗಂಡನಿಗೆ ಕುಡಿದು ಬರುತ್ತಾನೆ ಅಂತಾ ನಿತ್ಯ ಕಿರುಕುಳ ಕೊಟ್ಟಿದ್ದಾಳೆ. ಈ ಬಗ್ಗೆ ಅನೇಕ ಬಾರಿ ಜಗಳವಾಗಿ ಸಂದಾನಗಳು ಆಗಿದ್ದವಂತೆ.
ಕಳೆದ ವಾರವೂ ಸಹಿತ ಫಕ್ಕಿರೇಶ್ ಮತ್ತು ಮಂಜವ್ವನ ನಡುವೆ ಜಗಳವಾಗಿ ಸಂದಾನವಾಗಿದೆ. ಇದಾದ ಕೆಲವು ದಿನಗಳಲ್ಲಿ ಫಕ್ಕಿರೇಶ ನೇಣಿಗೆ ಶರಣಾಗಿದ್ದಾನೆ. ಇದೀಗ ಮೃತನ ಕುಟುಂಬಸ್ಥರು ತನ್ನ ಮಗನ ಸಾವಿಗೆ ಆತನ ಪತ್ನಿ ಮಂಜವ್ವ, ಅತ್ತೆ ಸಿದ್ದವ್ವ, ಮಾವ ಹವಳೆಪ್ಪ ನೇರ ಕಾರಣವೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೆ ಆರ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ನರಕ ದರ್ಶನ
ಹೆಂಡತಿಯ ಅನೈತಿಕ ಸಂಬಂಧ ಮತ್ತು ಅತ್ತೆ-ಮಾವರ ಕಿರುಕುಳದಿಂದ ಮನನೊಂದು ಫಕ್ಕಿರೇಶ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಆತನ ಪೋಷಕರು ಆಗ್ರಹಿಸಿದ್ದಾರೆ. ಸದ್ಯ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ಕೊಟ್ಟಿದ್ದು, ಮೃತನ ಶವವನ್ನ ಕಿಮ್ಸ್ಗೆ ರವಾನಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.