ಗಣೇಶ ಚತುರ್ಥಿ ವಿಶೇಷ: ಗಣೇಶನಿಂದ ಕಲಿಯಬೇಕಿರುವ ಪಾಠಗಳು

ನಮಗೆ ಜೀವನದ ಒಂದು ದೊಡ್ಡ ವಿಧಾನವನ್ನು ಕಲಿಸಬಹುದಾದ ಕೆಲವು ಜೀವನ ಪಾಠಗಳು ಇಲ್ಲಿವೆ.  

Updated: Sep 13, 2018 , 09:40 AM IST
ಗಣೇಶ ಚತುರ್ಥಿ ವಿಶೇಷ: ಗಣೇಶನಿಂದ ಕಲಿಯಬೇಕಿರುವ ಪಾಠಗಳು

ಗಣೇಶನನ್ನು ವಿದ್ಯಾಗಣಪತಿ, ತೊಂದರೆಗಳನ್ನು ತೊಡೆದು ಹಾಕುವ ವಿಘ್ನ ನಿವಾರಕ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸುವುದು ವಾಡಿಕೆಯಾಗಿದೆ. ಗಣೇಶನ ಕಥೆಯಿಂದ ನಮಗೆ ಕಲಿಯುವುದು ಬಹಳಷ್ಟಿದೆ.

ನಮಗೆ ಜೀವನದ ಒಂದು ದೊಡ್ಡ ವಿಧಾನವನ್ನು ಕಲಿಸಬಹುದಾದ ಕೆಲವು ಜೀವನ ಪಾಠಗಳು ಇಲ್ಲಿವೆ:

ಕರ್ತವ್ಯ ನಿಷ್ಠೆ: 
ಗಣೇಶನಿಗೆ ಆನೆಯ ತಲೆಯು ಹೇಗೆ ಸಿಕ್ಕಿತು ಎನ್ನುವ ಕಥೆಯು ಕರ್ತವ್ಯದ ಪ್ರಾಮುಖ್ಯತೆಯನ್ನು ಕಲಿಸುತ್ತದೆ. ಜನಪ್ರಿಯ ದಂತಕಥೆಯ ಪ್ರಕಾರ, ಹುಟ್ಟಿನಿಂದಲೇ ಗಣಪನ ಮುಖ ಆನೆಯದ್ದಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇದರ ಹಿಂದೆ ಒಂದು ಕಥೆ ಇದೆ. ಒಮ್ಮೆ ಸ್ನಾನಕ್ಕೆ ಹೊರಟ ಪಾರ್ವತಿ ತನ್ನ ಮೈಯ ಬೆವರಿನಿಂದ ಒಬ್ಬ ಬಾಲಕನನ್ನು ಸೃಷ್ಟಿ ಮಾಡಿ ಸ್ನಾನ ಗೃಹದ ಕಾವಲು ಕಾಯಲು ಹೇಳಿ ಒಳಗೆ ಹೊರಟಳು. ಬಾಲಕನು ಕಾವಲು ಕಾಯುತ್ತಿರಲು ಹೊರಗಿನಿಂದ ಬಂದ ಪರಶಿವನನ್ನು ಬಾಲಕನು, ತಾಯಿಯ ಆಜ್ಞೆಯಂತೆ ಅಡ್ಡಗಟ್ಟಿದನು. ತನ್ನ ಮನೆಯಲ್ಲಿ ತನ್ನನ್ನೇ ಅಡ್ಡಗಟ್ಟಿದ ರೋಷಕ್ಕೆ ತ್ರಿಶೂಲದಿಂದ ಬಾಲಕನ ತಲೆಯನ್ನೇ ತೆಗೆದ ಪರಶಿವ. ನಂತರ ವಿಷಯ ತಿಳಿದು ತನ್ನ ಗಣರಿಗೆ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಯಾರದೇ ತಲೆಯನ್ನು ತನ್ನಿರೆಂದು ಹೇಳಲು, ಅವರುಗಳು ಆನೆಯ ತಲೆಯನ್ನು ತಂದುಕೊಟ್ಟರು. ರುಂಡವಿಲ್ಲದ ಮುಂಡಕ್ಕೆ ಆನೆಯ ತಲೆಯ ಜೋಡಿಸಿ, ಪ್ರಾಣ ತುಂಬಲು ಗಣೇಶ ಜನ್ಮ ತಳೆದ.

ಗಣೇಶನ ಆನೆಯ ತಲೆ ಮಾನವ ದೇಹ ಹಿಂದಿರುವ ಅರ್ಥವನ್ನು 'ಮುದ್ಗಲ ಪುರಾಣ"ದಲ್ಲಿ ವಿವರಿಸಿದೆ. ಮಾನವ ದೇಹವು 'ತ್ವಂ" ಎಂದು ಸೂಚಿಸಿದರೆ ಆನೆಯ ತಲೆ 'ತತ್‌" ಎಂದು ಸೂಚಿಸುತ್ತದೆ. 'ತ್ವಂ" ಹಾಗೂ 'ತತ್‌" ಎರಡೂ ಒಂದಾಗಿ ಮೂಡಿ ಆತ್ಮ-ಪರಮಾತ್ಮ ಎರಡೂ ಒಂದೇ ಎನ್ನುವ ಅರ್ಥವನ್ನು ಬಿಂಬಿಸಿದೆ. ಗಣೇಶನ ದೇಹವು 'ತತ್‌ ತ್ವಂ ಅಸಿ" ಎಂಬುದರ ಸಂಕೇತ.

ಗಣೇಶನು ತಲೆಯನ್ನು ಕಳೆದುಕೊಂಡರೂ ತನ್ನ ಕರ್ತವ್ಯ ನಿಷ್ಠೆ ಬಿಡಲಿಲ್ಲ ಎಂಬುದನ್ನು ಈ ಕಥೆಯು ನಮಗೆ ಕಲಿಸುತ್ತದೆ. ಮಗನಾಗಿ ಅವನ ಕರ್ತವ್ಯವನ್ನು ಅವನು ಎಂದಿಗೂ ಕೈಬಿಡಲಿಲ್ಲ.

ಪೋಷಕರಿಗೆ ಗೌರವ:
ಮತ್ತೊಂದು ಜನಪ್ರಿಯ ದಂತಕಥೆ ಇದೆ. ಒಂದು ದಿನ ಕೈಲಾಸ ವಾಸನಾದ ಶಿವ ಮತ್ತು ಮಡದಿ ಪಾರ್ವತಿ ತಮ್ಮಿಬ್ಬರು ಪುತ್ರರಾದ ಗಣೇಶ ಮತ್ತು ಸುಬ್ರಹ್ಮಮಣ್ಯರೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದರು. ಶಿವ-ಪಾರ್ವತಿಯರು ತಮ್ಮಿಬ್ಬರು ಪುತ್ರರಿಗೆ ಎರಡು ಸುಂದರ ಹಣ್ಣನ್ನು ನೀಡಿದ್ದರು. ಇಬ್ಬರಿಗೂ ಅವೆರಡೂ ತಮಗೇ ಸೇರಬೇಕೆಂಬ ಆಸೆಯಿತ್ತು. ಆ ಹಣ್ಣಿನಲ್ಲಿ ವಿಶೇಷವಾದ ಜ್ಞಾನ ಮತ್ತು ಎಂದಿಗೂ ಅಳಿಯದ ವಿಶೇಷತೆಯೊಂದು ಅಡಕವಾಗಿರುವುದೆಂದು ಜನುಮದಾತರು ತಿಳಿಸಿದ್ದರು.

ಆ ಹಣ್ಣನ್ನು ಪಡೆಯಲು ಇಬ್ಬರೂ ಸ್ಫರ್ಧಿಸಬೇಕಾಗಿತ್ತು ಮತ್ತು ಯಾರು ಅದರಲ್ಲಿ ಗೆಲ್ಲುತ್ತಾರೋ ಅವರು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕಾಗಿತ್ತು. ಕಾರ್ತಿಕೇಯನು ತಕ್ಷಣವೇ ತನ್ನ ವಾಹನ ನವಿಲು ಹತ್ತಿ ಪ್ರಪಂಚ ಸುತ್ತಲು ಹೊರಟನು, ಆದರೆ ಗಣೇಶನು ಹಿಂದೆ ಇದ್ದನು. ನಂತರ ಗಣೇಶನು ತನ್ನ ವಾಹನ ಇಲಿಯ ಮೇಲೇರಿ ತನ್ನ ಹೆತ್ತವರ ಸುತ್ತ ಮೂರು ಬಾರಿ ಸುತ್ತಿ ಅವನಿಗೆ, ಅವರೇ ಜಗತ್ತು ಎಂದು ಹೇಳಿದನು.

ಈ ಕಥೆಯು ಮಕ್ಕಳು ಪೋಷಕರಿಗೆ ನೀಡಬೇಕಾದ ಗೌರವ ಮತ್ತು ಪ್ರೀತಿಯ ಪಾಠವನ್ನು ನೀಡುತ್ತದೆ.

ತ್ಯಾಗ: 
ಗಣೇಶನಿಗೆ ಆನೆಯ ತಲೆಯಿದೆ. ಆದರೆ ಅವನ ದಂತಗಳಲ್ಲಿ ಒಂದನ್ನು ಮುರಿಯಲಾಗುತ್ತದೆ. ಮಹಾಭಾರತದ ಮಹಾಕಾವ್ಯವನ್ನು ಬರೆಯುತ್ತಿರುವಾಗ ಇದು ಸಂಭವಿಸಿದೆ ಎಂದು ದಂತಕಥೆಯಲ್ಲಿ ಹೇಳಲಾಗಿದೆ. ಗಣೇಶನು ಮಹಾಭಾರತವನ್ನು ಬರೆಯುವಾಗ ಲೇಖನಿ ಮುರಿದುಹೋಯಿತು. ಆ ಸಂದರ್ಭದಲ್ಲಿ ಪರಿಶ್ರಮಿಯಾಗಿರುವ ಗಣೇಶನು ಬರಹ ಮುಂದುವರಿಸಲು ತನ್ನ ದಂತವನ್ನೇ ಮುರಿದು ಲೇಖನಿಯಾಗಿ ಮಾಡಿಕೊಂಡನು. ಹೀಗಾಗಿ, ಒಳ್ಳೆಯದಕ್ಕಾಗಿ ತ್ಯಾಗ ಮಾಡಲು ಯಾವಾಗಲೂ ಸಿದ್ಧರಾಗಿರಬೇಕು ಎಂಬ ಸಂದೇಶ ರವಾನೆಯಾಯಿತು.

ಕ್ಷಮೆ:
ಗಣೇಶ ಹೆಚ್ಚು ತಿಂದು ದಪ್ಪವಾಗಿರುವ ಬಗ್ಗೆ ಚಂದ್ರನು ಒಮ್ಮೆ ಗಣೇಶನನ್ನು ಅಪಹಾಸ್ಯ ಮಾಡಿದನು. ಇದರಿಂದ ಚಂದ್ರನ ಮೇಲೆ ಕೋಪಗೊಂಡಿದ್ದ ಗಣೇಶನು ಚಂದ್ರ ಇನ್ನು ಮುಂದೆ ಯಾರಿಗೂ ಗೋಚರಿಸದಂತೆ ಶಾಪ ಕೊಟ್ಟನು. ಚಂದ್ರನು ಕ್ಷಮೆಯನ್ನು ಕೇಳಿದಾಗ, ದಯೆತೋರಿದ ಗಣೇಶನು ಅವನನ್ನು ಕ್ಷಮಿಸಿದನು. ಆದರೆ ಅವನು ಶಾಪವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದ ಕಾರಣ, ಅಮಾವಾಸ್ಯೆ ದಿನ ಅಗೋಚರವಾಗುವ ಚಂದ್ರನು ಮರು ದಿನದಿಂದ ಸ್ವಲ್ಪ ಸ್ವಲ್ಪವಾಗಿ ಗೋಚರಿಸುವಂತೆ, ಹುಣ್ಣಿಮೆ ದಿನ ಪೂರ್ಣ ಚಂದ್ರ ಗೋಚರಿಸುವಂತೆ ಹೇಳುವ ಮೂಲಕ ಶಾಪವನ್ನು ಕಡಿಮೆಗೊಳಿಸಿದನು.

ಈ ಕಥೆ ಕ್ಷಮೆ ಪ್ರಾಮುಖ್ಯತೆಯನ್ನು ಕಲಿಸುತ್ತದೆ ಮತ್ತು ತಪ್ಪು ಮಾಡಿದವರನ್ನು ಕ್ಷಮಿಸಬೇಕು ಎಂಬುದನ್ನು ಕಲಿಸುತ್ತದೆ.

ಸಮಾನತೆ:
ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತವೆಂದು ತಿಳಿಯಲಾಗಿದೆ. ಒಂದು ವಿವರಣೆಯ ಪ್ರಕಾರ, ಗಣೇಶನ ದೈವಿಕ ವಾಹನ, ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ಹಾಗಾಗಿ, ಪ್ರತಿಯೊಬ್ಬ ವ್ಯಕ್ತಿಯು ಸಮಾನವಾಗಿ ಗೌರವಿಸಬೇಕೆಂದು ನಾವು ತಿಳಿದುಕೊಳ್ಳಬೇಕು.