ತಿರುವನಂತಪುರ: ಕರ್ನಾಟಕದಲ್ಲಿ ಹಿಂದೂಗಳಿಗೆ ಯುಗಾದಿ ಹೊಸ ವರ್ಷವಾದರೆ, ಮಲಯಾಳಂ ಕ್ಯಾಲೆಂಡರ್ ಪ್ರಕಾರ ಕೇರಳದಲ್ಲಿ ವಿಶು ಹಬ್ಬವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಇದನ್ನು ಸೌರಮಾನ ಯುಗಾದಿ ಎಂದೂ ಕೂಡ ಕರೆಯುತ್ತಾರೆ. ಈ ಹಬ್ಬವನ್ನು ತಮಿಳುನಾಡಿನಲ್ಲಿ ಪುಟ್ಟಂಡೂ, ಬಂಗಾಳದಲ್ಲಿ ಪಾಯ್ಲಾ ಬೋಯಿಷಾಕ್, ಅಸ್ಸಾಂನಲ್ಲಿ ಬೊಹಾಗ್ ಬಿಹು ಮತ್ತು ಪಂಜಾಬ್ನಲ್ಲಿ ಬೈಸಾಖಿ ಎಂದು ಆಚರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ವಿಶು ಆಚರಣೆಗೂ ಒಂದು ದಿನದ ಮೊದಲು ಅಥವಾ ವಿಶು ಆಚರಣೆ ದಿನದ ಬೆಳಗಿನ ಜಾವ ಕೃಷ್ಣನ ವಿಗ್ರಹವನ್ನಿಟ್ಟು ಅದರ ಸುತ್ತಲೂ ಧಾನ್ಯಗಳು, ಸೌತೆಕಾಯಿ, ಕುಂಬಳಕಾಯಿ, ತೆಂಗಿನಕಾಯಿ, ಮಾವಿನ ಹಣ್ಣು, ಹಲಸಿನ ಹಣ್ಣು ಸೇರಿದಂತೆ ಹಲವು ಬಗೆಯ ಹಣ್ಣು, ತರಕಾರಿಗಳು, ಹೊನ್ನೇ ಮರದ ಹೂಗಳು, ನಾಣ್ಯಗಳು, ಹೊಸ ಬಟ್ಟೆ ಇವುಗಳೆಲ್ಲವನ್ನು "ಲೋಹ"ದ ಪಾತ್ರೆಯಲ್ಲಿರಿಸಿ 'ವಿಶು ಕಣಿ' ಅನ್ನು ತಯಾರಿಸುತ್ತಾರೆ.  ಕುಟುಂಬದ ಹಿರಿಯರು ಅಥವಾ ಮಹಿಳೆಯರು ಇದರ ಮುಂದೆ ದೀಪ ಬೆಳಗಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.


ವಿಶು ಹಬ್ಬದ ದಿನದಂದು ಮುಂಜಾನೆ ಎದ್ದೊಡನೆ ನಿತ್ಯ ಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ದೇವರ ಮುಂದೆ ದೀಪ ಬೆಳಗಿಸಿ ನಂತರ ತಮ್ಮ ಪ್ರೀತಿಪಾತ್ರರ ಜೊತೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ವೇಳೆ ಕೈಲಾಗದವರಿಗೆ ಹಣ ಅಥವಾ ತಮ್ಮ ಕೈಲಾದ ಸಹಾಯ ಮಾಡುವ ಸಂಪ್ರದಾಯವೂ ಉಂಟು.



ಹಬ್ಬದ ದಿನ ಮಹಿಳೆಯರು ಸಾಂಪ್ರದಾಯಿಕ ಕಸಾವು ಸೀರೆ(ಗೋಲ್ಡನ್ ಬಾರ್ಡರ್ ಇರುವ ಕ್ರೀಮ್ ಅಥವಾ ಬಿಳಿ ಬಣ್ಣದ ಆಫ್ ಸೀರೆ) ಉಟ್ಟು ಆಭರಣಗಳನ್ನು ಧರಿಸುತ್ತಾರೆ. ಪುರುಷರು ಧೋತಿ ಶರ್ಟ್ ಧರಿಸುತ್ತಾರೆ.


ವಿಶು ಹಬ್ಬದೂಟ ಕೂಡ ಅತ್ಯಂತ ಪ್ರಮುಖವಾಗಿದೆ. ವಿಶು ಹಬ್ಬದಂದು ವಿಶೇಷ ಭಕ್ಷ್ಯ ತಯಾರಿಸಲಾಗುತ್ತದೆ. ಅದು 26 ಬಗೆಯ ವಿಭಿನ್ನ ತಿನಿಸುಗಳನ್ನು ಒಳಗೊಂಡಿದೆ.