ಭೀಮನ ಅಮಾವಾಸ್ಯೆ ವ್ರತ ಮಾಡುವುದು ಏಕೆ ಗೊತ್ತಾ!

ಪ್ರತಿ ವರ್ಷ ಆಷಾಢದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ 'ಭೀಮನ ಅಮಾವಾಸ್ಯೆ' ಹಬ್ಬವನ್ನು ಆಚರಿಸಲಾಗುತ್ತದೆ.

Last Updated : Aug 11, 2018, 09:36 AM IST
ಭೀಮನ ಅಮಾವಾಸ್ಯೆ ವ್ರತ ಮಾಡುವುದು ಏಕೆ ಗೊತ್ತಾ! title=

ಹಿಂದೂ ಸಂಪ್ರದಾಯದಲ್ಲಿ ಪತಿಯನ್ನೇ ಪರದೈವ ಎನ್ನಲಾಗುತ್ತದೆ. ಪತಿಯ ಆರೋಗ್ಯ ವೃದ್ಧಿಗಾಗಿ ಸತಿಯು ಹಲವಾರು ವ್ರತಗಳನ್ನು ಕೈಗೊಳ್ಳುವುದು ರೂಢಿ. ಅವುಗಳಲ್ಲೇ ಒಂದು ಈ 'ಭೀಮನ ಅಮಾವಾಸ್ಯೆ'. ಇದನ್ನು ಜ್ಯೋತಿರ್ಭೀಮೇಶ್ವರನ ವ್ರತ ಎಂದೂ ಕೂಡ ಕರೆಯುವುದುಂಟು. ಈ ವರ್ಷ ಆಗಸ್ಟ್ 11 ರಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುವುದು. ಈ ವರ್ಷ ಅಂದೇ ಸೂರ್ಯಗ್ರಹಣ ಕೂಡಾ ಇದೆ.

ಪ್ರತೀ 15 ದಿನಕ್ಕೊಮ್ಮೆ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತಾ ಇರುತ್ತದೆ. ಇವೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ. ಅದರಲ್ಲೂ ಪ್ರತಿ ವರ್ಷ ಆಷಾಢದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ 'ಭೀಮನ ಅಮಾವಾಸ್ಯೆ' ಹಬ್ಬವನ್ನು ಆಚರಿಸಲಾಗುತ್ತದೆ.

ಭೀಮನ ಅಮಾವಾಸ್ಯೆ ವ್ರತವನ್ನು ಏಕೆ ಮಾಡಬೇಕು?
ಯಾವುದೇ ಆಚರಣೆಯಾಗಿರಲಿ ಅದರ ಹಿಂದಿನ ಅರ್ಥ ತಿಳಿದಿದ್ದರೆ ಹಬ್ಬ ಮತ್ತು ಆಚರಣೆಯು ಹೆಚ್ಚು ಫಲಪ್ರದವಾಗಿರುತ್ತದೆ ಎನ್ನುತ್ತಾರೆ ಹಿರಿಯರು. ಆಷಾಢ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆಯಂದು ಭೀಮನ ಅಮವಾಸ್ಯೆ ವ್ರತವನ್ನು ಮಾಡುತ್ತಾರೆ. ಮಹಿಳೆಯರು ಮತ್ತು ಹುಡುಗಿಯರು ತನ್ನ ಸಹೋದರ ಮತ್ತು ಪತಿಯ ಆರೋಗ್ಯ, ಆಯುಷ್ಯ ಹಾಗೂ ಅವರ ಅಭಿವೃದ್ಧಿಗಾಗಿ ಈ ವ್ರತವನ್ನು ಮಾಡುತ್ತಾರೆ.

ಈ ದಿನ ಮದುವೆಯಾಗಿರುವ ಮುತ್ತೈದೆಯರು ಮತ್ತು ಮದುವೆಯಾಗದ ಮಹಿಳೆಯರು/ಯುವಕಿಯರು ಶಿವ-ಪಾರ್ವತಿಯರಲ್ಲಿ ತಮ್ಮ ಕುಟುಂಬದಲ್ಲಿರುವ ಪುರುಷರ ಆಯುಷ್, ಆರೋಗ್ಯ, ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಅವಿವಾಹಿತ ಯುವತಿಯರು ಉತ್ತಮ ಪತಿ ಸಿಗಲಿ ಎಂದು ಪ್ರಾರ್ಥಿಸುತ್ತಾರೆ.

ಭೀಮನ ಅಮಾವಾಸ್ಯೆಯ ಪೌರಾಣಿಕ ಹಿನ್ನೆಲೆ:
ಸ್ಕಂದ ಪುರಾಣದಲ್ಲಿ ಈ ವ್ರತದ ಹಿನ್ನಲೆಯನ್ನು ಹೇಳಲಾಗಿದೆ. ಬಹಳ ವರ್ಷಗಳ ಹಿಂದೆ ರಾಜನೊಬ್ಬ ತನ್ನ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದನು. ಆದರೆ ರಾಜನ ಮಗ ಅಕಾಲಿಕ ಸಾವಿಗೀಡಾದನು. ಆದರೂ ರಾಜ ತನ್ನ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸಿ ಘೋಷಣೆ ಹೊರಡಿಸಿದನು. ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಧನ ಸಂಪತ್ತನ್ನು ಕೊಡುವುದಾಗಿ ಘೋಷಿಸಿದನು. 

ಒಬ್ಬ ಬಡ ಬ್ರಾಹ್ಮಣನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಮುಂದೆ ಬಂದನು, ಮದುವೆ ವಿಜೃಂಭಣೆಯಿಂದ ನೆರವೇರಿತು. ಆ ದಿನ ಅಮಾವಾಸ್ಯೆ. ಮದುವೆಯ ಸಮಾರಂಭ ಮುಗಿದ ಮೇಲೆ ರಾಜನ ಮಗನ ದೇಹವನ್ನು ಸುಡಲು ಭಾಗೀರಥಿ ನದಿ ತೀರಕ್ಕೆ ತೆಗೆದುಕೊಂಡು ಬಂದು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾಗ ಗುಡುಗು ಸಿಡಿಲಿನ ಸಹಿತ ಕುಂಭದ್ರೋಣ ಮಳೆ ಪ್ರಾರಂಭವಾಯಿತು. ನೆರೆದಿದ್ದ ಜನರು ಹೆದರಿಕೊಂಡು ಆ ದೇಹವನ್ನು ಮತ್ತು ಆ ಅಮಾಯಕ ಹುಡುಗಿಯನ್ನು ಬಿಟ್ಟು ಓಡಿ ಹೋದರು. 

ಅಂದು ಜ್ಯೋತಿರ್ಭೀಮೇಶ್ವರನ ವ್ರತದ ದಿನ ಎಂಬುದು ಆ ಹುಡುಗಿಗೆ ನೆನಪಾಯಿತು. ತನ್ನ ತಾಯಿಯು ಪ್ರತಿ ವರ್ಷ ಆ ವ್ರತವನ್ನು ಆಚರಿಸುವುದು ನೆನಪಾಗಿ ಕೂಡಲೇ ನದಿಯಲ್ಲಿ ಸ್ನಾನ ಮಾಡಿ ಎರಡು ಮಣ್ಣಿನ ಹಣತೆಯನ್ನು ಮಾಡಿ, ಅಲ್ಲೇ ಇದ್ದ ಮರದ ಬೇರಿನಿಂದ ಬತ್ತಿಯನ್ನು ಮಾಡಿ ಅದಕ್ಕೆ ನೀರನ್ನು ಹಾಕಿ, ಮಣ್ಣಿನಿಂದ ಭಂಡಾರವನ್ನು ಮಾಡಿ ಅದರಿಂದಲೇ ಪೂಜೆಯನ್ನು ಮಾಡಿದಳು. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಶಿವ-ಪಾರ್ವತಿಯು ಭಂಡಾರವನ್ನು ಹೊಡೆದು ನಿನಗೆ ಏನು ವರ ಬೇಕು ಎಂದಾಗ ಸತ್ತ ತನ್ನ ಪತಿಯನ್ನು ಬದುಕಿಸಿಕೊಡಿ ಎಂದು ಆ ಹುಡುಗಿ ಬೇಡಿಕೊಂಡಳು. ಶಿವ-ಪಾರ್ವತಿ ಕೂಡಲೇ ಆಕೆಯ ಬೇಡಿಕೆಗೆ ಅಸ್ತು ಎಂದು ಪತಿಯನ್ನು ಬದುಕಿಸಿದರು. 

ಈ ಘಟನೆಯ ನಂತರ ಈ ಜ್ಯೋತಿರ್ಭೀಮೇಶ್ವರನ ವ್ರತ ಪ್ರಸಿದ್ಧಿಯಾಯಿತು. ಮನೋನಿಯಾಮಕ ರುದ್ರದೇವರ  ಮತ್ತೊಂದು ಹೆಸರು ಭೀಮ ಎಂಬುದರಿಂದ ಈ ವ್ರತವನ್ನು ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. 

Trending News