close

News WrapGet Handpicked Stories from our editors directly to your mailbox

ಇಂದು ವಿಶ್ವ ಇಡ್ಲಿ ದಿನ: ವಿವಿಧ ಬಗೆಯ ಇಡ್ಲಿ ತಯಾರಿಸೋದು ಹೇಗೆ?

ಇಂದು ವಿಶ್ವ ಇಡ್ಲಿ ದಿನ. ಪ್ರತಿ ವರ್ಷ ಮಾರ್ಚ್.30ರಂದು ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತದೆ.

Updated: Mar 30, 2018 , 06:01 PM IST
ಇಂದು ವಿಶ್ವ ಇಡ್ಲಿ ದಿನ: ವಿವಿಧ ಬಗೆಯ ಇಡ್ಲಿ ತಯಾರಿಸೋದು ಹೇಗೆ?

ಇಂದು ವಿಶ್ವ ಇಡ್ಲಿ ದಿನ. ಪ್ರತಿ ವರ್ಷ ಮಾರ್ಚ್.30ರಂದು ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತದೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿಯನ್ನು ಬೆಳಗಿನ ತಿಂಡಿಯಾಗಿ ಬಳಸಲಾಗುತ್ತದೆ. ಆರೋಗ್ಯಭರಿತವೂ, ರುಚಿಕರವೂ ಆಗಿರುವ ಇಡ್ಲಿಯನ್ನು ಇಷ್ಟಪಡದವರೇ ಇಲ್ಲ. ಇಡ್ಲಿ ಜೊತೆಗೆ ಸಾಂಬಾರ್ ಮತ್ತು ಚಟ್ನಿ ಸೂಪರ್ ಕಾಂಬಿನೇಶನ್.

ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸಾದ ಇಡ್ಲಿಗೆ ದೊಡ್ಡ ಇತಿಹಾಸವೇ ಇದೆ. ಇಡ್ಲಿ ಭಾರತದ ಮೂಲದ್ದು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಇಡ್ಲಿಯನ್ನು ಭಾರತೀಯರಿಗಿಂತ ಮೊದಲು ಇಂಡೋನೇಷ್ಯಾದಲ್ಲಿ ಎಂದು ಚರಿತ್ರಾ ಪುಟಗಳು ಹೇಳುತ್ತವೆ. ವಿಶ್ವ ಇಡ್ಲಿ ದಿನವನ್ನು ಮೊದಲಿಗೆ ಆರಂಭಿಸಿದ್ದು ಚೆನ್ನೈನ ಇನಿಯವಣ್‌ ಎಂಬವರು. 

ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದ ಇನಿಯವಣ್ ಆಟೋಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಇಡ್ಲಿ ತಯಾರಿಸುವ ಮಹಿಳೆಯೊಬ್ಬರ ಪರಿಚಯವಾಗಿ, ನಂತರ ಅವರ ಪ್ರೇರಣೆಯಿಂದ ದೊಡ್ಡ ಇಡ್ಲಿ ತಯಾರಿಸಲು ಆರಂಭಿಸಿದರಂತೆ. ಹೀಗೆ ಪ್ರಯೋಗಗಳನ್ನು ನಡೆಸುತ್ತಾ 2000 ವಿಧದ ಇಡ್ಲಿಗಳನ್ನು ತಯಾರಿಸಿ ಇನಿಯವಣ್ ದಾಖಲೆ ಸೃಷ್ಟಿಸಿದ್ದರು. ಈತನ ಈ ಪ್ರಯೋಗಗಳನ್ನು ಗೌರವಿಸಿ ಅಮೆರಿಕದ ವಿವಿಯೊಂದು ಇವರಿಗೆ ಗೌರವ ಡಾಕ್ಟರೇಟ್‌ನ್ನೂ ನೀಡಿತ್ತು. ಅವರೊಂದಿಗೆ ಕೈ ಜೋಡಿಸಿದ ತಮಿಳುನಾಡು ಕ್ಯಾಟರಿಂಗ್‌ ಎಂಪ್ಲಾಯ್ಸ್‌ ಯೂನಿಯನ್‌ನ ಅಧ್ಯಕ್ಷ ರಾಜಾಮಣಿ ಅಯ್ಯರ್‌ ಅವರು ಮಾರ್ಚ್‌ 30 ರಂದು ಈ ದಿನ ಆಚರಿಸಲು ನಿರ್ಧರಿಸಿದರು. ಅಂದಿನಿಂದ ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲ, ಇದು ಇನಿಯವಣ್ ಅವರ ಜನ್ಮದಿನವೂ ಹೌದು. 

ಇಡ್ಲಿ ಮೇಳ
ವಿಶ್ವ ಇಡ್ಲಿ ದಿನದ ಅನಗವಾಗಿ ಬೆಂಗಳೂರಿನ ಹೆಬ್ಬಾಳದ ಹೊವಾರ್ಡ್ ಜಾನ್ಸನ್ ಹೋಟೆಲ್ ಇಂದು(ಮಾ.30) ಇಡ್ಲಿ ಮೇಳ ಆಯೋಜಿಸಿದೆ. ಈ ಮೇಳದಲ್ಲಿ ಕರ್ನಾಟಕದ ತಟ್ಟೆ ಇಡ್ಲಿ, ತಮಿಳುನಾಡಿನ ಮಲ್ಲಿಗೈ ಹೂ ಇಡ್ಲಿ, ಆಂಧ್ರ ಪ್ರದೇಶದ ಗುಂಟೂರು ಇಡ್ಲಿ ಹಾಗೂ ಕೇರಳದ ವಾಲೈ ಎಲೈಐ ಇಡ್ಲಿಗಳು ದೊರೆಯಲಿವೆ.

ಅಷ್ಟೇ ಅಲ್ಲದೆ, ಜೇಡಿಮಣ್ಣಿನ ಮಡಿಕೆಯ ಆವಿಯಿಂದ ತಯಾರಾದ ಮಡಿಕೆ ಇಡ್ಲಿ, ಹಾವರ್ಡ್‌ ಜಾನ್ಸನ್‌ ಕ್ಲಬ್‌ ಇಡ್ಲಿ, ಹೈದರಾಬಾದ್‌ ಶೈಲಿಯ ಇಡ್ಲಿ ದಮ್‌ ಬಿರಿಯಾನಿ, ಮಿಲ್ಲೆಟ್‌ ಸ್ಟಫ್ಡ್‌ ಇಡ್ಲಿ, ಸಿಹಿ ಇಡ್ಲಿಗಳನ್ನೂ ಇಡ್ಲಿ ಪ್ರಿಯರು ಸವಿಯಬಹುದು.

ವಿವಿಧ ಬಗೆಯ ಇಡ್ಲಿ ತಯಾರಿಸುವುದು ಹೇಗೆ?
ಮಸಾಲ ಇಡ್ಲಿ
ಬೇಕಾಗುವ ಸಾಮಗ್ರಿ: ಇಡ್ಲಿಹಿಟ್ಟು – 1 ಬಟ್ಟಲು, ಹೆಚ್ಚಿಕೊಂಡ ಈರುಳ್ಳಿ – 1 ಕಪ್, ಹಸಿಮೆಣಸಿನ ಕಾಯಿ – 4, ಕರಿಬೇವಿನ ಎಸಳು – 3, ಎಣ್ಣೆ – ಅರ್ಧ ಕಪ್, ಸಾಸಿವೆ – 1 ಚಮಚ, ಜೀರಿಗೆ- 1 ಚಮಚ. ಇಂಗು – ಅರ್ಧ ಚಮಚ ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಜೀರಿಗೆ, ಇಂಗು ಸೇರಿಸಿ ಹುರಿದುಕೊಳ್ಳಿ. ನಂತರ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೖೆ ಮಾಡಿ. ಈ ಒಗ್ಗರಣೆಯೊಂದಿಗೆ ಉಪ್ಪು, ಕರಿಬೇವು ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಇಡ್ಲಿ ಹಿಟ್ಟಿನೊಂದಿಗೆ ಬೆರೆಸಿ, ಇಡ್ಲಿ ಪ್ಲೇಟ್​ನಲ್ಲಿ ಸ್ವಲ್ಪ ಎಣ್ಣೆ ಸವರಿ ಇಡ್ಲಿಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸಿ. ಇದಕ್ಕೆ ಚಟ್ನಿ ಬೇಕೆಂದಿಲ್ಲ. ತುಪ್ಪ ಅಥವಾ ಮೊಸರು ಹಾಕಿಕೊಂಡು ಹಾಗೆಯೇ ಸೇವಿಸಬಹುದು.

ಬಟಾಣಿ ಇಡ್ಲಿ
ಬೇಕಾಗುವ ಸಾಮಗ್ರಿ: ರವೆ 2 ಕಪ್, ಹಸಿ ಬಟಾಣಿ -1 ಕಪ್, ಮೊಸರು- ಅರ್ಧ ಕಪ್, ಕೊತ್ತಂಬರಿ ಸೊಪು್ಪ – ಅರ್ಧ ಕಪ್, ಹಸಿ ಮೆಣಸಿನಕಾಯಿ ಹೋಳುಗಳು- 2ಚಮಚ. ಶುಂಠಿ ತುರಿ- 1 ಚಮಚ. ಕ್ಯಾರೆಟ್ ತುರಿ- 2 ಚಮಚ, ತೆಂಗಿನ ತುರಿ- ಸ್ವಲ್ಪ. ರುಚಿಗೆ ತಕ್ಕ ಉಪ್ಪು.

ತಯಾರಿಸುವ ವಿಧಾನ: ಬಟಾಣಿಯನ್ನು ಸ್ವಲ್ಪ ಬೇಯಿಸಿಕೊಳ್ಳಿ. ಈಗ ರವೆಯನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ, ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್, ಅರ್ಧ ಬೇಯಿಸಿದ ಬಟಾಣಿ, ಕ್ಯಾರೆಟ್ ತುರಿ, ತೆಂಗಿನತುರಿ, ಕೊತ್ತಂಬರಿಸೊಪ್ಪು, ಮೊಸರು ಹಾಕಿ ಕಲಸಿ, 10-15 ನಿಮಿಷ ಇಡಿ. ಈ ಮಿಶ್ರಣವನ್ನು ಇಡ್ಲಿ ಪಾತ್ರೆಗೆ ಬೇಯಿಸಿದರೆ ಬಟಾಣಿ ಇಡ್ಲಿ ರೆಡಿ. 

ಮಸಾಲ ರವೆ ಇಡ್ಲಿ
ಬೇಕಾಗುವ ಸಾಮಗ್ರಿ: ರವೆ – 2 ಕಪ್, ಮೊಸರು – 1 ಕಪ್, ಕರಿಬೇವು – 2 ಎಸಳು, ಶುಂಠಿ – 1 ಚಮಚ, ಕಡ್ಲೆ ಬೇಳೆ – 1 ಚಮಚ, ಕಾಯಿ ತುರಿ- 2ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಪ್ಯಾನ್ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಣ್ಣ ಉರಿಯಲ್ಲಿ ರವೆಯನ್ನು ಕೆಂಪಾಗುವರೆಗೂ ಹುರಿದುಕೊಂಡು ಬೌಲ್'ಗೆ ಹಾಕಿಕೊಳ್ಳಿ. ಅದೇ ಪ್ಯಾನ್​ನಲ್ಲಿ ಮತ್ತೆ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಗೋಡಂಬಿ ಹುರಿದುಕೊಂಡು ರವೆಯೊಂದಿಗೆ ಸೇರಿಸಿ. ಮತ್ತಷ್ಟು ಎಣ್ಣೆ ಬಿಸಿ ಮಾಡಿ ಸಾಸಿವೆ, ಕಡ್ಲೆಬೇಳೆ, ಕರಿಬೇವು, ಇಂಗು ಒಗ್ಗರಣೆ ಮಾಡಿಕೊಂಡು ರವೆಯೊಂದಿಗೆ ಬೆರೆಸಿಕೊಳ್ಳಿ. ರವೆಯೊಂದಿಗೆ ಮೊಸರು, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ, ಶುಂಠಿ, ಉಪ್ಪು, ಅಗತ್ಯವಿದ್ದಷ್ಟು ನೀರು ಬೆರೆಸಿ ಹಿಟ್ಟು ತಯಾರಿಸಿ ಅರ್ಧ ಗಂಟೆ ಬಿಡಿ. ಇಡ್ಲಿಪ್ಲೇಟಿ​ಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟು ಹಾಕಿ 10 ನಿಮಿಷ ಹಬೆಯಲ್ಲಿ ಬೇಯಿಸಿ. ಬಿಸಿ ಬಿಸಿ ಮಸಾಲೆ ರವೆ ಇಡ್ಲಿಯನ್ನು ಚಟ್ನಿ ಅಥವಾ ಬೇಳೆಸಾಂಬಾರ್​ನೊಂದಿಗೆ ಸೇವಿಸಿ.

ಇಡ್ಲಿ ಜೊತೆ ಸವಿಯಲು ವಿಶೇಷ ಪುದಿನಾ ಚಟ್ನಿ
ಇಡ್ಲಿ ಕಾಯಿ ಚಟ್ನಿ ಒಳ್ಳೆ ಕಾಂಬಿನೇಶನ್. ಆದರೆ ರವೆ ಅಥವಾ ಮಸಾಲೆ ಇಡ್ಲಿಗೆ ಕಾಯಿ ಚಟ್ನಿಗಿಂತಲೂ ಪುದಿನಾ ಚಟ್ನಿ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿ: ಪುದಿನಾ ಸೊಪ್ಪು– 2 ಮುಷ್ಟಿ, ಈರುಳ್ಳಿ– 2, ಹಸಿಮೆಣಸಿನಕಾಯಿ– 4, ಹುಣಸೇ ಹಣ್ಣು – ಸ್ವಲ್ಪ, ಬೆಳ್ಳುಳ್ಳಿ – 4 ಎಸಳು, ಜೀರಿಗೆ- 1ಚಮಚ, ಎಳ್ಳು – ಅರ್ಧ ಚಮಚ, ರುಚಿಗೆ ಉಪ್ಪು.

ಮಾಡುವ ವಿಧಾನ: ಪುದಿನಾ ಸೊಪ್ಪನ್ನು ತೊಳೆದು, ಒಗ್ಗರಣೆಯಲ್ಲಿ ಹುರಿಯಿರಿ. ಹುರಿಯುವಾಗಲೇ ಈರುಳ್ಳಿ ಹೆಚ್ಚಿ ಅದಕ್ಕೆ ಹಾಕಿ. ಇದಕ್ಕೆ ಹಸಿಮೆಣಸಿನಕಾಯಿ, ಎಳ್ಳು, ಜೀರಿಗೆ ಹಾಕಿ ಹುರಿಯಿರಿ. ಹುರಿದ ಈ ಮಿಶ್ರಣವನ್ನು ನೀರು ಹಾಕದೇ ರುಬ್ಬಿ. ನೀರು ಹಾಕದೇ ಇರುವುದರಿಂದ ಇದನ್ನು ಬಹಳ ದಿನ ಇಡಬಹುದು.