)
ದಾವಣಗೆರೆ: ಕೋಳಿಗಳು ಸಾಮಾನ್ಯವಾಗಿ ಬಿಳಿ ಅಥವಾ ಕಂದು ಬಣ್ಣದ ಮೊಟ್ಟೆಗಳನ್ನು ಇಡುತ್ತವೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆ ಇಟ್ಟು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.
ಈ ಅಪರೂಪದ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಕೋಳಿಯ ಮಾಲೀಕ ಸೈಯದ್ ನೂರು ಅವರ ಮನೆಗೆ ಜನರು ಈ ವಿಚಿತ್ರ ಮೊಟ್ಟೆಯನ್ನು ಕಣ್ಣಾರೆ ಕಾಣಲು ಆಗಮಿಸುತ್ತಿದ್ದಾರೆ.ಸೈಯದ್ ನೂರು ಕಳೆದ ಎರಡು ವರ್ಷಗಳ ಹಿಂದೆ ಸ್ಥಳೀಯ ಕೋಳಿ ವ್ಯಾಪಾರಿಯೊಬ್ಬರಿಂದ ಈ ನಾಟಿ ಕೋಳಿಯನ್ನು ಖರೀದಿಸಿದ್ದರು. ಈ ಕೋಳಿ ಇದುವರೆಗೂ ಕೇವಲ ಬಿಳಿ ಬಣ್ಣದ ಮೊಟ್ಟೆಗಳನ್ನೇ ಇಡುತ್ತಾ ಬಂದಿತ್ತು. ಆದರೆ, ಕಳೆದ ಎರಡು ದಿನಗಳ ಹಿಂದೆ ಈ ಕೋಳಿ ಇದ್ದಕ್ಕಿದ್ದಂತೆ ನೀಲಿ ಬಣ್ಣದ ಮೊಟ್ಟೆ ಇಟ್ಟಿದ್ದು, ಸೈಯದ್ ನೂರು ಸೇರಿದಂತೆ ಸ್ಥಳೀಯರನ್ನು ಬೆರಗಾಗಿಸಿದೆ. "ನಾನು ಮೊದಲು ನೀಲಿ ಮೊಟ್ಟೆ ನೋಡಿದಾಗ ಆಶ್ಚರ್ಯವಾಯಿತು. ಇದೇನಪ್ಪಾ ಇಂಥದ್ದೊಂದು ವಿಚಿತ್ರವೆಂದು ತೋರಿತು," ಎಂದು ಸೈಯದ್ ನೂರು ಜೀ ಕನ್ನಡ ನ್ಯೂಸ್ಗೆ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಅಹ್ಮದ್ ಖಾನ್ ಕೂಡ ಈ ಘಟನೆಯ ಬಗ್ಗೆ ಮಾತನಾಡಿ, "ಇಂಥದ್ದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಕೋಳಿಯೊಂದು ನೀಲಿ ಮೊಟ್ಟೆ ಇಡುವುದು ನಿಜಕ್ಕೂ ಅಚ್ಚರಿಯ ಸಂಗತಿ," ಎಂದು ಹೇಳಿದ್ದಾರೆ.ಈ ಘಟನೆಯ ಬಗ್ಗೆ ತಿಳಿಯಲು ಸ್ಥಳೀಯ ಪಶುವೈದ್ಯ ರಘು ನಾಯಕ್ ಭೇಟಿ ನೀಡಿ ಕೋಳಿಯನ್ನು ಪರೀಕ್ಷಿಸಿದ್ದಾರೆ. ಅವರು ಈ ಕುರಿತು ವಿವರಿಸುತ್ತಾ, "ಕೋಳಿಯ ಮೆದುಜೀರ್ಣಕಾಂಗದಲ್ಲಿ ಬಿಲಿರುಬಿನ್ ಜೊತೆಗೆ ಬಿಲಿವರ್ಡಿನ್ ಎಂಬ ದ್ರವದಿಂದಾಗಿ ಮೊಟ್ಟೆಯ ಕವಚಕ್ಕೆ ನೀಲಿ ಬಣ್ಣ ಬರುತ್ತದೆ. ಇದು ಕೆಲವೊಮ್ಮೆ ಜಿಲಿಟಿನ್ ಸಮಸ್ಯೆಯಿಂದಾಗಿ ಸಂಭವಿಸುತ್ತದೆ. ಆದರೆ, ಇಂಥ ಬಣ್ಣದ ಮೊಟ್ಟೆಗಳು ಪ್ರತಿಬಾರಿಯೂ ಇಡುವುದಿಲ್ಲ," ಎಂದು ತಿಳಿಸಿದ್ದಾರೆ.
ಈ ವಿಚಿತ್ರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಚಿನ್ನದ ಮೊಟ್ಟೆ ಇಡುವ ಕೋಳಿ" ಕತೆಯನ್ನು ನೆನಪಿಸುವಂತೆ "ನೀಲಿ ಮೊಟ್ಟೆಯ ಕೋಳಿ" ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಈ ಅಪರೂಪದ ಘಟನೆ ದಾವಣಗೆರೆಯ ನಲ್ಲೂರು ಗ್ರಾಮವನ್ನು ಸುದ್ದಿಯ ಕೇಂದ್ರಬಿಂದುವಾಗಿಸಿದೆ.