)
Vishal Sai Dhansika marriage : ಕಾಲಿವುಡ್ ನಟ ವಿಶಾಲ್ ತಮ್ಮ 48ನೇ ಹುಟ್ಟುಹಬ್ಬದಂದು (ಆಗಸ್ಟ್ 29) ಸಾಯಿ ಧನ್ಸಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ದಂಪತಿಗಳ ನಿಶ್ಚಿತಾರ್ಥ ಸಮಾರಂಭವು ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆಯಿತು. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಹಲವಾರು ಚಲನಚಿತ್ರ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದರು.
ಎಲ್ಲವೂ ಯೋಜನೆಯಂತೆ ನಡೆದಿದ್ದರೆ, ವಿಶಾಲ್ ಮತ್ತು ಧನ್ಸಿಕಾ ಅವರ ಮದುವೆ ಮೊದಲೇ ನಡೆಯುತ್ತಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ, ವಿವಾಹವನ್ನು ಮುಂದೂಡಿದ್ದರು. ಇದರ ನಡುವೆ ವಿಶಾಲ್ ತಮ್ಮ ಮದುವೆ ಇನ್ನೆರಡು ತಿಂಗಳಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕಲಾವಿದರ ಸಂಘದ ಭವನದಲ್ಲಿ ತಮ್ಮ ಮದುವೆಯನ್ನು ಆಚರಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು. ವಿಶಾಲ್ ಅವರು ಮದುವೆಯಾಗುತ್ತಿರುವುದಕ್ಕೆ ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ.
ಧನ್ಸಿಕಾ ಬಗ್ಗೆ ಮಾತನಾಡಿದ ವಿಶಾಲ್, ಧನ್ಸಿಕಾ ತುಂಬಾ ಒಳ್ಳೆಯ ಹೃದಯದವರು. ನನ್ನ ಜೀವನದಲ್ಲಿ ಅವರಂತಹ ಸಂಗಾತಿ ಸಿಕ್ಕಿದ್ದು ನನ್ನ ಅದೃಷ್ಟ. ನಾವು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು ರೆಡಿಯಾಗಿದ್ದೇವೆ ಎಂದು ಹೇಳಿದರು. ಅಷ್ಟೇ ಅಲ್ಲ, ಮದುವೆಯ ನಂತರವೂ ಧನ್ಸಿಕಾ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತಾರೆ ಎಂದು ವಿಶಾಲ್ ಸ್ಪಷ್ಟಪಡಿಸಿದರು.
ಈ ಮಧ್ಯೆ, ಸಾಯಿ ಧನ್ಸಿಕಾ ಅವರೊಂದಿಗಿನ ವಿವಾಹದ ಹಿನ್ನೆಲೆಯಲ್ಲಿ ವಿಶಾಲ್ ಸಿನಿಮಾಗಳ ವಿಷಯದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮದುವೆಯ ನಂತರ ನಟಿಯರೊಂದಿಗೆ ಪ್ರಣಯ ದೃಶ್ಯಗಳಲ್ಲಿ, ವಿಶೇಷವಾಗಿ ಲಿಪ್ ಕಿಸ್ ದೃಶ್ಯಗಳಲ್ಲಿ ನಟಿಸದಿರಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ದೇವರು ನನಗೆ ಧನ್ಸಿಕಾಳಂತಹ ದೇವತೆಯನ್ನು ಕಳುಹಿಸಿದ್ದಾನೆ ಎಂದು ವಿಶಾಲ್ ತಮ್ಮ ಭಾವಿ ಪತ್ನಿಯ ಬಗ್ಗೆ ಹೇಳಿರುವ ಮಾತುಗಳು ಪ್ರಸ್ತುತ ನೆಟ್ನಲ್ಲಿ ವೈರಲ್ ಆಗುತ್ತಿವೆ. ವಿಶಾಲ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಶಾಲ್-ಧನ್ಸಿಕಾ ಅವರ ಮದುವೆ ಅಕ್ಟೋಬರ್ನಲ್ಲಿ ನಡೆಯುವ ಸಾಧ್ಯತೆ ಇದೆ.
ವಿಶಾಲ್ ಈ ಹಿಂದೆ ಹಲವು ಬಾರಿ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರವೇ ಮದುವೆಯಾಗುವುದಾಗಿ ಹೇಳಿದ್ದರು. ವಿಶಾಲ್ ಸುಮಾರು ಒಂಬತ್ತು ವರ್ಷಗಳಿಂದ ನೋಡಿಕೊಳ್ಳುತ್ತಿರುವ ಈ ಯೋಜನೆ ಈಗ ಪೂರ್ಣಗೊಂಡಿದೆ. ಆದ್ದರಿಂದ, ಶೀಘ್ರದಲ್ಲೇ ಮದುವೆ ದಿನಾಂಕವನ್ನು ಜೋಡಿ ಘೋಷಿಸಲಿದೆ ಎಂದು ಹೇಳಲಾಗುತ್ತಿದೆ.