)
Actress Samantha: ಸ್ಟಾರ್ ನಾಯಕಿ ಸಮಂತಾ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿರುವಂತಿದೆ. ದಶಕಗಳ ಕಾಲ ನಿರಂತರವಾಗಿ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸೌತ್ ಇಂಡಸ್ಟ್ರಿಯಲ್ಲಿ ಅಗ್ರ ನಾಯಕಿಯಲ್ಲಿ ಒಬ್ಬರು ಎಂದು ಹೆಸರು ಗಳಿಸಿದ ಇವರು ಇದೀಗ ತಮ್ಮ ಜೀವನದಲ್ಲಿ ಹೊಸ ಆದ್ಯತೆಗಳನ್ನು ನಿಗದಿ ಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ನಟಿ ಸಮಂತಾ ʼಇನ್ನು ಮುಂದೆ ಒಂದೇ ಬಾರಿಗೆ ಹಲವು ಸಿನಿಮಾಗಳನ್ನು ಮಾಡುವುದಿಲ್ಲ, ಶೂಟಿಂಗ್ಗಳ ಒತ್ತಡಕ್ಕೆ ಒಳಗಾಗುವುದಿಲ್ಲ. ನನ್ನ ದೇಹ ಏನು ಹೇಳುತ್ತದೋ ಅದನ್ನೇ ಕೇಳುತ್ತೇನೆ. ನನ್ನ ಆರೋಗ್ಯವೇ ನನ್ನ ಮೊದಲ ಆದ್ಯತೆʼ ಎಂದು ಸ್ಪಷ್ಟಪಡಿಸಿದ್ದಾರೆ. ಎಂದರೇ ತಮ್ಮ ವೃತ್ತಿಜೀವನಕ್ಕಿಂತಲೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯವೆಂದು ನಟಿ ಹೇಳಿದ್ದಾರೆ. ‘ಗ್ರಾಜಿಯಾ ಇಂಡಿಯಾ’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಈ ನಿರ್ಧಾರಗಳನ್ನು ಹಂಚಿಕೊಂಡಿದ್ದು, ಅವರ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ʼನಾನು ಮಾಡುವ ಸಿನಿಮಾಗಳ ಸಂಖ್ಯೆ ಮುಖ್ಯವಲ್ಲ. ಆದರೆ ಸಿನಿಮಾಗಳ ಗುಣಮಟ್ಟ ಮುಖ್ಯ. ಈಗ ನಾನು ಉತ್ತಮ ಚಿತ್ರಗಳನ್ನು ಮಾಡಲು ಸಿದ್ಧಳಾಗಿದ್ದೇನೆ.. ಅದಕ್ಕಾಗಿ ಕಡಿಮೆ ಚಿತ್ರಗಳನ್ನು ಮಾಡುತ್ತಿದ್ದೇನೆ..ʼ ಎಂದು ಸಹ ಸ್ಯಾಮ್ ಹೇಳಿಕೊಂಡಿದ್ದಾರೆ..
ಇನ್ನು 2010ರಲ್ಲಿ ‘ಈಮಾಯಾ ಚೆಸಾವೆ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸಮಂತಾ, ಮೊದಲ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದಲೇ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ಜೆಸ್ಸಿ ಪಾತ್ರದ ಮೂಲಕ ಪಡೆದ ಕ್ರೇಜ್ ಇಡೀ ಟಾಲಿವುಡ್ ಯುವಕರ ಹೃದಯವನ್ನು ಗೆದ್ದಿತ್ತು. ಅದಾದ ನಂತರ, ಬೃಂದಾವನಂ, ದೂಕುಡು, ಈಗ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮುಂತಾದ ಹಿಟ್ ಸಿನಿಮಾಗಳ ಮೂಲಕ ಅವರು ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಟಾಲಿವುಡ್ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಅಗ್ರ ನಾಯಕಿಯಾಗಿ ತಾರಾಪಟ್ಟವನ್ನು ಗಳಿಸಿದರು.
ತಮ್ಮ ವೃತ್ತಿಜೀವನ ಉತ್ತುಂಗದಲ್ಲಿದ್ದ ಸಮಯದಲ್ಲಿ ಸಮಂತಾ ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಅವರ ವೈವಾಹಿಕ ಜೀವನ ಹೆಚ್ಚು ಕಾಲ ಮುಂದುವರಿಯಲಿಲ್ಲ. ನಾಲ್ಕು ವರ್ಷಗಳ ಮದುವೆಯ ಬಳಿಕ ವಿಚ್ಛೇದನ ಪಡೆದು, ಇದೀಗ ಸಮಂತಾ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ. ಈಗ ಸಮಂತಾ ಹೆಚ್ಚು ಸಿನಿಮಾಗಳನ್ನು ಮಾಡುವ ಒತ್ತಡದಿಂದ ದೂರ ಉಳಿದು, ತಮ್ಮ ದೇಹ-ಮನಸ್ಸಿಗೆ ಸಮತೋಲನ ನೀಡಲು ಪ್ರಯತ್ನಿಸುತ್ತಿದ್ದಾರೆ. ಫಿಟ್ನೆಸ್, ಆತ್ಮವಿಶ್ವಾಸ ಮತ್ತು ಉತ್ತಮ ಪಾತ್ರಗಳನ್ನು ಆರಿಸಿಕೊಂಡು ಸಿನಿಮಾ ಲೋಕದಲ್ಲಿ ತಮ್ಮ ಪ್ರಭಾವವನ್ನು ಮುಂದುವರೆಸಲು ಅವರು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ, ಸಮಂತಾ ತಮ್ಮ ವೃತ್ತಿಜೀವನದಲ್ಲಿ "ಕ್ಷಣಿಕದ ಪ್ರಗತಿ"ಗಿಂತಲೂ "ಆರೋಗ್ಯಕರ ಬದುಕು"ಗೆ ಆದ್ಯತೆ ನೀಡುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಸ್ವಲ್ಪ ಅಚ್ಚರಿಯಾಯಿತಾದರೂ, ಅವರ ನಿರ್ಧಾರವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ.