)
Aishwarya Rai News: ಇತ್ತೀಚಿನ ವರ್ಷಗಳಲ್ಲಿ ವಿತ್ ಔಟ್ ಮೇಕಪ್ ಸೌಂದರ್ಯಕ್ಕೆ ಸಾಯಿ ಪಲ್ಲವಿ ಹೆಸರು ಪ್ರಖ್ಯಾತಿ. ನ್ಯಾಚುರಲ್ ಬ್ಯುಟಿ ಬಗ್ಗೆ ಮಾತನಾಡಬೇಕು ಎಂದರೆ ಸಾಯಿ ಪಲ್ಲವಿ ಹೆಸರನ್ನು ಹೇಳಲೇಬೇಕು. ಆದರೆ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಮೇಕಪ್ ಇಲ್ಲದೆಯೂ ತೆರೆ ಮೇಲೆ ಕಮಾಲ್ ಮಾಡಿದ್ದಾರೆ ಎನ್ನುವುದು ಗೊತ್ತೆ? ಬಹುತೇಕ ಜನರಿಗೆ ಗೊತ್ತಿಲ್ಲ. ಐಶ್ವರ್ಯ ರೈ ಮೇಕಪ್ ಇಲ್ಲದೆ ನಟಿಸಿದ್ದ ಆ ಹಾಡು ಇವತ್ತಿಗೂ ಕ್ಲಾಸಿಕ್ ಆಗಿದೆ. ಅದರ ಬಗೆಗಿನ ಈ ಸ್ಟೋರಿ ಓದಿ.
2005ರಲ್ಲಿ ಬಿಡುಗಡೆಯಾದ ಬಂಟಿ ಔರ್ ಬಬ್ಲಿ ಸಿನಿಮಾದ ಐಕಾನಿಕ್ ಹಾಡು ಕಜರಾ ರೇ… ಸಿಕ್ಕಾಪಟ್ಟೆ ಹಿಟ್ ಆಯಿತು. ಆ ಹಾಡಿನಲ್ಲಿ ಐಶ್ವರ್ಯ ರೈ ಸೊಂಟಕ್ಕೆ, ಆಕೆಯ ನೋಟಕ್ಕೆ, ಮೈಮಾಟಕ್ಕೆ ಮರುಳಾಗದವರೇ ಇಲ್ಲ. ಕಜರಾ ರೇ… ಹಾಡಿನ ಸಾಹಿತ್ಯ ಮತ್ತು ಸಂಗೀತವೂ ಅದ್ಭುತವಾಗಿದ್ದವು ಎನ್ನುವುದರಲ್ಲಿ ಅನುಮಾನ ಇಲ್ಲ. ಆದರೆ ಅವನ್ನು ಮೀರಿಸಿ ಪ್ರೇಕ್ಷಕರನ್ನು ರಂಜಿಸಿದ್ದು ಐಶ್ವರ್ಯ ರೈ ದೇಹಸಿರಿ. ಆ ಸೌಂದರ್ಯ.
ವಿಶೇಷ ಎಂದರೆ, ಆಶ್ಚರ್ಯವಾಗುವ ವಿಷಯ ಎಂದರೆ ಐಶ್ವರ್ಯ ರೈ ಕಜರಾ ರೇ ಹಾಡಿಗೆ ಮೇಕಪ್ ಹಾಕಿರಲಿಲ್ಲ. ಹಾಗಂತಾ ಐಶ್ವರ್ಯ ರೈ ಮೇಕಪ್ ಬೇಡ ಎಂದಿರಲಿಲ್ಲ. ಎಂದಿನಂತೆ ಮೇಕಪ್ ಹಾಕಿಕೊಂಡು ಡ್ಯಾನ್ಸ್ ಮಾಡಲು ಸಿದ್ಧರಾಗಿದ್ದರು. ಆದರೆ ಬಂಟಿ ಔರ್ ಬಬ್ಲಿ ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ, ಐಶ್ವರ್ಯ ರೈ ನ್ಯಾಚುರಲ್ ಆಗಿಯೇ ಇರಬೇಕು. ಆಕೆಯ ನಿಜವಾದ ಸೌಂದರ್ಯವೇ ಅನಾವರಣಗೊಳ್ಳಬೇಕು. ನ್ಯಾಚುರಲ್ ಬ್ಯೂಟಿ ಕಜರಾ ರೇ ಹಾಡಿಗೆ ಮೆರುಗು ನೀಡಲಿದೆ ಎಂದಿದ್ದರಂತೆ.
ಇನ್ನೂ ವಿಶೇಷ ಎಂದರೆ ಐಶ್ವರ್ಯ ರೈಗೆ ಬಹುತೇಕ ಸಿನಿಮಾಗಳಲ್ಲಿ ಮೇಕಪ್ ಮಾಡಿರುವವರು ಮಿಕ್ಕಿ ಕಾಂಟ್ರಾಕ್ಟರ್. ಐಶ್ವರ್ಯ ಮತ್ತು ಮಿಕ್ಕಿ ಕಾಂಟ್ರಾಕ್ಟರ್ ಅವರು ಲೆಹ್ರೆನ್ ರೆಟ್ರೋ ಸಿನಿಮಾದ ವೇಳೆಯೇ ವಿತ್ ಔಟ್ ಮೇಕಪ್ ದೃಶ್ಯಗಳನ್ನು ಮಾಡುವ ಬಗ್ಗೆ ಯೋಚನೆ ಮಾಡಿದ್ದರಂತೆ. ಐಶ್ವರ್ಯ ರೈ ಕೂಡ ಮೇಕಪ್ ಇಲ್ಲದ ಲುಕ್ ತೆರೆಯ ಮೇಲೆ ಹೇಗಿರುತ್ತದೆ ಎಂಬುದನ್ನು ನೋಡಲು ಕುತೂಹಲದಿಂದ ಇದ್ದರು. ಹಾಗಾಗಿ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿದ್ದೇ ತಡ ಕಜರಾ ರೇ ಡ್ಯಾನ್ಸ್ ವೇಳೆ ಮೇಕಪ್ ಮಾಡುವುದು ಬೇಡ ಎಂದು ಡಿಸೈಡ್ ಮಾಡಲಾಯಿತಂತೆ. ಈ ವಿಷಯವನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸೆಲೆಬ್ರಿಟಿ ಮೇಕಪ್ ಕಲಾವಿದ ಮಿಕ್ಕಿ ಕಾಂಟ್ರಾಕ್ಟರ್ ಹೇಳಿಕೊಂಡಿದ್ದಾರೆ.
ಬಹಳ ಹಿಂದೆಯೇ ಮೇಕಪ್ ಇಲ್ಲದ ಲುಕ್ ನೋಡಲು ಕಾತರರಾಗಿದ್ದ ನಾನು ಮತ್ತು ಐಶ್ವರ್ಯ ರೈ ಆ ದಿನಕ್ಕಾಗಿ ಕಾಯುತ್ತಿದ್ದೆವು. ಕಜರಾ ರೇ ಹಾಡಿನಲ್ಲಿ ಆ ಸನ್ನಿವೇಶ ಒದಗಿಬಂತು ಎಂದು ಮಿಕ್ಕಿ ಕಾಂಟ್ರಾಕ್ಟರ್ ಹೇಳಿಕೊಂಡಿದ್ದಾರೆ. ಕಜರಾ ರೇ ಹಾಡಿನಲ್ಲಿ ಐಶ್ವರ್ಯ ರೈ ಗ್ಲಾಮರಸ್ ಆಗಿ ಕೂಡ ಕಾಣಿಸಬೇಕಾಗಿತ್ತು. ಜೊತೆಗೆ ನ್ಯಾಚುರಲ್ ಲುಕ್ ಕೂಡ ಬೇಕಾಗಿತ್ತು. ಅದರಿಂದ ಕಪ್ಪು ಕಾಜಲ್, ಮಸ್ಕರಾ ಮತ್ತು ಲಿಪ್ ಗ್ಲಾಸ್ ಮಾತ್ರ ಹಾಕಲಾಗಿತ್ತು ಎಂದು ತಿಳಿಸಿದ್ದಾರೆ.
ಐಶ್ವರ್ಯಾ ರೈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಿಕ್ಕಿ ಕಾಂಟ್ರಾಕ್ಟರ್, ಸಾಮಾನ್ಯವಾಗಿ ಐಶ್ವರ್ಯ ಹೆಚ್ಚು ಪ್ರಶ್ನೆಗಳನ್ನು ಕೇಳುವುದಿಲ್ಲ, ಆಕೆಗೆ ಕೆಲವು ಜನರ ಮೇಲೆ ವಿಶ್ವಾಸವಿದೆ. ಅವರು ಏನು ಹೇಳುತ್ತಾರೋ ಅದನ್ನು ಮಾಡುತ್ತಾಳೆ. ನಾನು ಮತ್ತು ಆಕೆ ಒಳ್ಳೆಯ ಸ್ನೇಹಿತರಾಗಿರುವುದರಿಂದ ಆಕೆ ನಾನು ಏನೇ ಹೇಳಿದರೂ ಮಾಡುತ್ತಾಳೆ. ನಾನು ಯಾವಾಗಲೂ ಆಕೆಗೆ ಒಳ್ಳೆಯದಾಗುವ ಸಲಹೆಗಳನ್ನೇ ನೀಡಿದ್ದೇನೆ. ಆಕೆಗೆ ಆಕೆಯ ಸೌಂದರ್ಯ, ಸ್ವಂತಿಕೆ ಮತ್ತು ಪ್ರತಿಭೆ ಬಗ್ಗೆ ಬಹಳ ವಿಶ್ವಾಸವಿದೆ. ಹಾಗಾಗಿ ಆಕೆ ಎಂದೂ ಭಯ ಪಡುವುದಿಲ್ಲ ಎಂದಿದ್ದಾರೆ.
ವಿಶೇಷವೆಂದರೆ ಕಜರಾ ರೇ ಹಾಡಿನಲ್ಲಿ ಐಶ್ವರ್ಯ ರೈ ಜೊತೆಗೆ ಅವರ ಮಾವ ಅಮಿತಾಬ್ ಬಚ್ಚನ್ ಹಾಗೂ ಅವರ ಪತಿ ಅಭಿಷೇಕ್ ಬಚ್ಚನ್ ಕೂಡ ಹೆಜ್ಜೆ ಹಾಕಿದ್ದರು.