)
Anaya Bangar: ಇತ್ತೀಚೆಗೆ ರಿಯಾಲಿಟಿ ಶೋ 'ರೈಸ್ ಅಂಡ್ ಫಾಲ್'ನಲ್ಲಿ ಕಾಣಿಸಿಕೊಂಡಿರುವ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ತನ್ನ ಲಿಂಗ ಪರಿವರ್ತನೆಯ ಜೀವನಪ್ರಯಾಣ ಮತ್ತು ತಾಯಿಯಾಗುವ ಕನಸನ್ನು ಬಹಿರಂಗಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಗಂಡು ಮಗುವಾಗಿ ಜನಿಸಿದ ಅನಯಾ, ನಂತರ ಲಿಂಗ ಬದಲಾವಣೆ ಮಾಡಿಕೊಂಡು ಇಂದು ಟ್ರಾನ್ಸ್ಜೆಂಡರ್ ಮಹಿಳೆಯಾಗಿ ಬದುಕುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಆರುಷ್ ಭೋಲಾ ಅವರೊಂದಿಗೆ ಮಾತನಾಡಿದಾಗ, ತಮ್ಮ ಭವಿಷ್ಯದ ದೊಡ್ಡ ಆಸೆಯನ್ನು ಅವರು ಹಂಚಿಕೊಂಡರು.
"ನನಗೆ ತಾಯಿಯಾಗಲು ಕೇವಲ ಎರಡು ದಾರಿಗಳಿವೆ. ಮೊದಲನೆಯದು ಮಗುವನ್ನು ದತ್ತು ಪಡೆಯುವುದು, ಎರಡನೆಯದು ಹಾರ್ಮೋನ್ ಚಿಕಿತ್ಸೆಗೆ ಮುಂಚೆಯೇ ನನ್ನ ವೀರ್ಯವನ್ನು ಫ್ರೀಜ್ ಮಾಡಿರುವುದರಿಂದ ಸರೊಗಸಿ ಮೂಲಕ ತಾಯಿಯಾಗುವುದು" ಎಂದು ಅನಯಾ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಇನ್ನೂ ಮುಂದೆ ಹೇಳುವುದೇನಂದರೆ – "ನಾನು ಗರ್ಭಿಣಿಯಾಗಲು ಸಾಧ್ಯವಿಲ್ಲ. ಆದ್ದರಿಂದ, ಸರೊಗಸಿಯ ಮೂಲಕ ನನ್ನ ತಾಯಿಯ ಕನಸು ನನಸಾಗುವುದು ಖಚಿತ. ಈ ಕನಸು ನನಗೆ ತುಂಬಾ ಮಹತ್ವದದ್ದು" ಎಂದು ಭಾವೋದ್ರೇಕದಿಂದ ವಿವರಿಸಿದರು.
ಅನಯಾ ಬಂಗಾರ್ ಸಂಜಯ್ ಬಂಗಾರ್ ಅವರ ಮಗಳು. ಹುಟ್ಟಿನ ಹೆಸರು ಆರ್ಯನ್ ಬಂಗಾರ್. 2024ರಲ್ಲಿ, ಕೇವಲ 23ನೇ ವಯಸ್ಸಿನಲ್ಲೇ ಹಾರ್ಮೋನ್ ಬದಲಾವಣೆ ಚಿಕಿತ್ಸೆಯನ್ನು ಪ್ರಾರಂಭಿಸಿ ತಮ್ಮ ಹೆಸರನ್ನೂ ‘ಆರ್ಯನ್’ ನಿಂದ ‘ಅನಯಾ’ಗೆ ಬದಲಾಯಿಸಿಕೊಂಡರು. ಅವರು ಕ್ರಿಕೆಟ್ ಹಿನ್ನೆಲೆಯಲ್ಲಿಯೇ ಬೆಳೆಯಿದ್ದು, ಕ್ಲಬ್ ಕ್ರಿಕೆಟ್ನಲ್ಲಿ ಕೂಡ ಆಡಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಬಯಕೆಯೂ ಅನಯಾಳಲ್ಲಿದೆ. ಇದರ ಕುರಿತಂತೆ ಅವರು ಈಗಾಗಲೇ ಬಿಸಿಸಿಐ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.