)
Bigg Boss OTT winner sana makbul: ಟಿವಿ ನಟಿ ಮತ್ತು ಬಿಗ್ ಬಾಸ್ OTT 3 ವಿಜೇತೆ ಸನಾ ಮಕ್ಬೂಲ್ ಇತ್ತೀಚೆಗೆ ತಾನು ಆಟೋಇಮ್ಯೂನ್ ಹೆಪಟೈಟಿಸ್ನಿಂದ ಬಳಲುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಈಗ ಈ ರೋಗವು ತುಂಬಾ ಗಂಭೀರ ರೂಪವನ್ನು ಪಡೆಯುವ ಹಂತವನ್ನು ತಲುಪಿದೆಯಂತೆ. ಸನಾ ಮಕ್ಬೂಲ್ ಅವರು ಹೆಪಟೈಟಿಸ್ನಿಂದ ಬಳಲುತ್ತಿದ್ದು, ಅವರ ಸ್ಥಿತಿ ಹದಗೆಟ್ಟಿದೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದರು.
ತನ್ನ ಅನಾರೋಗ್ಯದ ಬಗ್ಗೆ ತಿಳಿಸುವಾಗ, ಸನಾ ತನ್ನ ರೋಗನಿರೋಧಕ ವ್ಯವಸ್ಥೆಯು ಈಗ ತನ್ನ ಲಿವರ್ ಮೇಲೆ ಮೊದಲಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ದಾಳಿ ಮಾಡಲು ಪ್ರಾರಂಭಿಸಿದೆ. ತನಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಗಿದೆ, ಇದು ಸಾಮಾನ್ಯ ಸಮಸ್ಯೆಯಲ್ಲ ಅಂತಾ ಹೇಳಿದ್ದರು. ಅನೇಕ ಸಂದರ್ಭಗಳಲ್ಲಿ ಇದು ಮಾರಕವಾಗಬಹುದು. ಆದರೆ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಂತರವೂ ಈ ನಟಿಯ ಬದುಕುವ ಉತ್ಸಾಹ ಕಡಿಮೆಯಾಗಿಲ್ಲ.
ಸನಾ ಮಕ್ಬೂಲ್ ಪ್ರಸ್ತುತ ಶ್ರೀಲಂಕಾದಲ್ಲಿ ರಜೆ ಕಳೆಯುತ್ತಿದ್ದು, ತಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಶ್ರೀಲಂಕಾ ರಜೆಯ ಅನೇಕ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೈಕಿ ಅವರು ಹೊಸ ಸ್ಥಳಗಳಲ್ಲಿ ಆನಂದಿಸುತ್ತಿರುವುದನ್ನು ಕಾಣಬಹುದು. ಸನಾ ಅವರ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಲಿವರ್ ಸಿರೋಸಿಸ್ ಚಿಕಿತ್ಸೆಯ ನಡುವೆ ಗುಣಮಟ್ಟದ ಸಮಯವನ್ನು ಕಳೆಯಲು ಸನಾ ಮಕ್ಬೂಲ್ ಇತ್ತೀಚೆಗೆ ಶ್ರೀಲಂಕಾಕ್ಕೆ ತೆರಳಿದ್ದರು. ಈಗ ಅವರು ಶ್ರೀಲಂಕಾ ಪ್ರವಾಸವನ್ನ ಆನಂದಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಎಲ್ಲೋ ದೋಣಿ ವಿಹಾರವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಕೆಲವು ಸ್ಥಳಗಳಲ್ಲಿ ಅವರು ಬೀಚ್ ಬೇಬಿಯಂತೆ ಪೋಸ್ ನೀಡುವುದನ್ನು ಕಾಣಬಹುದು.
ಸನಾ ಹೀಗೆ ಆನಂದಿಸುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳಿಗೆ ಅನೇಕರು ಪ್ರತಿಕ್ರಿಯಿಸಿದ್ದು, ನಟಿಯನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಫೋಟೋಗಳ ಬಗ್ಗೆ ಕಾಮೆಂಟ್ ಮಾಡುತ್ತಾ ಒಬ್ಬ ಬಳಕೆದಾರರು, 'ಯಾರಾದರೂ ಹೇಗೆ ಇಷ್ಟು ಸುಂದರವಾಗಿರಲು ಸಾಧ್ಯ?' ಎಂದು ಬರೆದರೆ, ಮತ್ತೊಬ್ಬರು, 'ನೀವು ಯಾವಾಗಲೂ ನನ್ನ ನೆಚ್ಚಿನವರು, ಏಕೆಂದರೆ ನೀವು ನಿಜವಾದ ವ್ಯಕ್ತಿತ್ವ ಉಳ್ಳವರು' ಎಂದು ಕಾಮೆಂಟ್ ಮಾಡಿದ್ದಾರೆ.
ನಟಿ ಸನಾ ಮಕ್ಬೂಲ್ ಅವರನ್ನು ಕೆಲವು ಸಮಯದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ್ದ ಈ ನಟಿ, 'ನಾನು ಕೆಲವು ಸಮಯದಿಂದ ಆಟೋಇಮ್ಯೂನ್ ಹೆಪಟೈಟಿಸ್ನಿಂದ ಬಳಲುತ್ತಿದ್ದೇನೆ, ಆದರೆ ಕಳೆದ ಕೆಲವು ದಿನಗಳಿಂದ ನನ್ನ ಸ್ಥಿತಿ ಹದಗೆಟ್ಟಿದೆ. ನನ್ನ ರೋಗನಿರೋಧಕ ಶಕ್ತಿ ನನ್ನ ಲಿವರ್ನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ನನಗೆ ಈಗ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಗಿದೆ. ಆದರೂ ಸಹ ನಾನು ಧೈರ್ಯವಾಗಿರಲು ಪ್ರಯತ್ನಿಸುತ್ತಿದ್ದೇನೆ. ನಾನು ಇಮ್ಯುನೊಥೆರಪಿಯನ್ನು ಪ್ರಾರಂಭಿಸಿದ್ದೇನೆ. ಚೇತರಿಕೆಯತ್ತ ಗಮನ ಹರಿಸುತ್ತಿದ್ದೇನೆ. ಲಿವರ್ ಕಸಿ ತಪ್ಪಿಸಲು ನಾನು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಇಮ್ಯುನೊಥೆರಪಿಯನ್ನು ಪ್ರಾರಂಭಿಸಿದೆ, ಅದು ತುಂಬಾ ತೀವ್ರ ನೋವು ಮತ್ತು ದಣಿವು ನೀಡಿದೆ. ಆದರೆ ನಾನು ಭರವಸೆಯನ್ನ ಕಳೆದುಕೊಂಡಿಲ್ಲʼವೆಂದು ಹೇಳಿದ್ದಾರೆ.
ಸನಾ ಮಕ್ಬೂಲ್ ಟಿವಿ ಉದ್ಯಮದ ಪ್ರಸಿದ್ಧ ನಟಿಯಾಗಿದ್ದು, ಅನೇಕ ಹಿಟ್ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ ಅವರು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ OTT 3ರ ಭಾಗವಾಗಿ ವಿಜೇತರಾದರು. ಅವರೊಂದಿಗೆ ಟಾಪ್ 3ರಲ್ಲಿ ರಣವೀರ್ ಶೋರೆ ಮತ್ತು ರ್ಯಾಪರ್ ನೇಜಿ ಇದ್ದರು. ಈ ಇಬ್ಬರನ್ನೂ ಸೋಲಿಸಿ ಸನಾ ಟ್ರೋಫಿ ಎತ್ತಿ ಹಿಡಿದಿದ್ದರು. ಸನಾರ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಅಪಾರ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದು, ಶೀಘ್ರವೇ ತಮ್ಮ ನೆಚ್ಚಿನ ನಟಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.