Gold Price Hike: ಬಹುಶಃ ನಿರಂತರವಾಗಿ ಏರಿಕೆಯಾಗುತ್ತಿರುವ ಪ್ರಪಂಚದ ಏಕೈಕ ವಸ್ತು ಚಿನ್ನ ಎನಿಸುತ್ತದೆ. ಹಾಗೆಯೇ ದುಡ್ಡಿನ ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಜನ ಇಷ್ಟಪಡುವ ವಸ್ತು ಕೂಡ ಚಿನ್ನ ಎನಿಸುತ್ತದೆ. ಅಲ್ಲದೆ ಹೂಡಿಕೆಗೆ ಜನ ಅತ್ಯಂತ ಹೆಚ್ಚು ನಂಬುವುದು ಕೂಡ ಬಂಗಾರವನ್ನು ಎನಿಸುತ್ತದೆ. ಇಲ್ಲದಿದ್ದರೆ ಚಿನ್ನ ಈ ಪರಿ ಏರಿಕೆಯಾಗುತ್ತಿತ್ತೆ? ಬಹಳ ಹಿಂದಿನ ಮಾತು ಬಿಡಿ, 2025ರ ಡಿಸಂಬರ್ ವೇಳೆಗೆ 24 ಕ್ಯಾರಟ್ ಚಿನ್ನ 10 ಗ್ರಾಂಗೆ 1,30,000 ರೂಪಾಯಿ ಇತ್ತು. 2026ರಲ್ಲಿ ಇದೇ 24 ಕಾರಟ್ 10 ಬಂಗಾರದ ಬೆಲೆ 1.60,000 ರೂಪಾಯಿ ಆಗುವ ಸಾಧ್ಯತೆ ಇದೆ ಎಂದರೆ ಎಷ್ಟರ ಮಟ್ಟಿಗೆ ಏರಿಕೆಯಾಗುತ್ತಿದೆ ಎನ್ನುವುದನ್ನು ನೋಡಿ.
2026ರಲ್ಲಿ 24 ಕಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,60,000 ರೂಪಾಯಿ ಆಗುತ್ತದೆ ಎನ್ನುವುದು ಅಂದಾಜಲ್ಲ. ಬದಲಿಗೆ ಮಾರುಕಟ್ಟೆ ತಜ್ಞರ ಅಭಿಪ್ರಾಯ. ಮಾರುಕಟ್ಟೆಯನ್ನು ಅರೆದು ಕುಡಿದಿರುವವರು ಹೀಗೆ ಹೇಳುತ್ತಾರೆ ಎಂದರೆ ಗ್ರಾಹಕರು ಯೋಚನೆ ಮಾಡಲೇಬೇಕು. ಹಾಗೆಯೇ ಇದು ಈಗಾಗಲೇ ಬಂಗಾರವನ್ನು ಕೊಂಡುಕೊಂಡಿರುವವರಿಗೆ ಅಥವಾ ಬಂಗಾರದ ಮೇಲೆ ಹೂಡಿಕೆ ಮಾಡಿರುವವರಿಗೆ ಸಿಹಿ ಸುದ್ದಿ. ಹಾಗೆಯೇ ಇನ್ನು ಚಿನ್ನ ಕೊಳ್ಳಬೇಕು ಎಂದುಕೊಂಡಿರುವವರಿಗೆ ಕಹಿ ಸುದ್ದಿ.
ಅಂತಾರಾಷ್ಟ್ರೀಯ ತಜ್ಞರ ಅಭಿಪ್ರಾಯ ಏನು?
ಚಿನ್ನದ ಬೆಲೆ ಗಗನಮುಖಿ ಆಗಿರುವ ಬಗ್ಗೆ ಬಡ ಗ್ರಾಹಕ ಮಾತ್ರ ಚಿಂತಿತವಾಗಿಲ್ಲ. ಚಿನ್ನದ ಮೇಲೆ ನೂರಾರು ಕೋಟಿ ರೂಪಾಯಿ ಸುರಿದು ವ್ಯಾಪಾರ ಮಾಡುತ್ತಿರುವವರ ತಲೆ ಕೂಡ ಗಿರ್ ಎಂದು ತಿರುಗತೊಡಗಿದೆ. ಏಕೆಂದರೆ ಗೋಲ್ಡ್‌ಮನ್ ಸ್ಯಾಚ್, ಬ್ಯಾಂಕ್ ಆಫ್ ಅಮೇರಿಕ ಹಾಗು ಇನ್ನಿತರ ಅಮೇರಿಕಾದ ಮುಂಚೂಣಿ ಹಣಕಾಸು ಸಂಸ್ಥೆಗಳು 2026ರಲ್ಲಿ ಒಂದು ಔನ್ಸ್ ಬಂಗಾರದ ದರ 5,000 ಡಾಲರ್ (ರೂಪಾಯಿಗಳಲ್ಲಿ 4.2 ಲಕ್ಷ) ತಲುಪಬಹುದು ಎಂದು ಭವಿಷ್ಯ ನುಡಿದಿವೆ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ 10ಗ್ರಾಂ 24 ಕಾರಟ್ ಚಿನ್ನದ ಬೆಲೆ 1,50,000 ರೂಪಾಯಿಗಳಿಂದ 1,60,000 ರೂಪಾಯಿವರೆಗೆ ಹೆಚ್ಚಳ ಆಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಚಿನ್ನದ ಬೆಲೆ ಕುರಿತು ಬಾಬಾ ವಂಗಾ ಭವಿಷ್ಯವಾಣಿ.. 2026ರಲ್ಲಿ ಕೈಗೆಟುಕುವ ಬೆಲೆಗೆ ಸಿಗಲಿದ್ಯಾ ಬಂಗಾರ!
ಚಿನ್ನದ ಬೆಲೆ ಇಷ್ಟೊಂದು ಏರಿಕೆಯಾಗಲು ಏನು ಕಾರಣ?
ಮೊದಲನೆಯದಾಗಿ ಅಮೇರಿಕಾದ ಇತ್ತೀಚೆಗಿನ ಆರ್ಥಿಕ ನಿಲುವು. ಅಲ್ಲಿನ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಕಮ್ಮಿ ಮಾಡಿರುವುದರಿಂದ ಜನ ಬ್ಯಾಂಕಿನಲ್ಲಿ ಹಣ ಇಡುವ ಬದಲು ಬಂಗಾರವನ್ನು ಕೊಳ್ಳುವುದರ ಕಡೆ ಮನಸ್ಸು ಮಾಡಿದ್ದಾರೆ. ಸಹಜವಾಗಿ ಚಿನ್ನದ ಬೆಲೆ ಆಕಾಶದ ಕಡೆ ನೋಡುತ್ತಿದೆ.
ಎರಡನೆಯದಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳಿಂದ ಹಲವು ದೇಶಗಳಲ್ಲಿ ರಾಜಕೀಯ ಅಸ್ಥಿರ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಜಾಗತಿಕವಾಗಿ ಅಶಾಂತ ಪರಿಸ್ಥಿತಿ ಹೆಚ್ಚಾಗುತ್ತಿದೆ. ಪರಿಣಾಮವಾಗಿ ಜನ ಚಿನ್ನವನ್ನು ಮಾತ್ರ ಸುರಕ್ಷಿತ ಹೂಡಿಕೆಯ ಮಾರ್ಗ ಎಂಬ ನಿಲುವಿಗೆ ಬಂದಿದ್ದಾರೆ.
ಇದನ್ನೂ ಓದಿ- ಚಿನ್ನಾಭರಣ ಖರೀದಿಸಲು ಕೇವಲ ಹಣವಿದ್ದರೆ ಸಾಲದು, ಸರ್ಕಾರದ ಈ ಪ್ರಮುಖ ನಿಯಮ ಪಾಲಿಸಲೇಬೇಕು!
ಮೂರನೆಯದಾಗಿ ಭಾರತ, ಚೀನಾ ಮತ್ತಿತರ ರಾಷ್ಟ್ರಗಳ ದೇಶಿಯ ಸೆಂಟ್ರಲ್ ಬ್ಯಾಂಕುಗಳು ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸತೊಡಗಿವೆ. ಇದು ಕೂಡ ಬಂಗಾರದ ಬೆಲೆ ಬಾನಿನತ್ತ ಸಾಗಲು ಕಾರಣವಾಗಿದೆ.
2026ರಲ್ಲಿ ಯಾವಾಗ ಎಷ್ಟು ಹೆಚ್ಚಾಗಬಹುದು.
ಮಾರುಕಟ್ಟೆ ತಜ್ಞರು ಬಂಗಾರದ ಬೆಲೆ 2026ರ ಆರಂಭದಲ್ಲಿ ಎಷ್ಟು ಇರಬಹುದು? ಎಷ್ಟು ಹೆಚ್ಚಾಗಬಹುದು? ಹಾಗೆಯೇ 2026ರ ಮಧ್ಯ ಭಾಗದಲ್ಲಿ ಏನಾಗಬಹುದು? 2026ರ ಡಿಸಂಬರ್ ವೇಳೆಗೆ ಎಷ್ಟು ಹೆಚ್ಚಾಗಬಹುದು ಎಂಬ ಅಂದಾಜನ್ನೂ ಮಾಡಿದ್ದಾರೆ. ತಜ್ಞರ ಪ್ರಕಾರ 2025ರ ಡಿಸಂಬರ್ ವೇಳೆಗೆ 10 ಗ್ರಾಂ 24 ಕಾರಟ್ ಚಿನ್ನದ ಬೆಲೆ 1,30,000 ರೂಪಾಯಿಗಳಿಂದ 1,31,000 ರೂಪಾಯಿವರೆಗೆ ಇರುವ ಬಂಗಾರದ ಬೆಲೆ 2026 ಆರಂಭದಲ್ಲೂ ಹಾಗೆಯೇ ಇರುತ್ತದೆ. ನಿಧಾನವಾಗಿ ಏರುಮುಖವಾಗುತ್ತದೆ. 2026ರ ಜೂನ್ ವೇಳೆಗೆ ಅದು 1,40,000 ರೂಪಾಯಿಗಳಿಂದ 1,45,000 ರೂಪಾಯಿವರೆಗೆ ಹೆಚ್ಚಾಗುತ್ತದೆ. 2026ರ ಡಿಸಂಬರ್ ವೇಳೆಗೆ ಅದು 1,50,000 ರೂಪಾಯಿಗಳಿಂದ 1,60,000 ರೂಪಾಯಿವರೆಗೆ ಏರಿಕೆಯಾಗಬಹುದು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರುಪೇರು, ಡಾಲರ್ ಮೌಲ್ಯ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಜನ ಏನು ಮಾಡಬೇಕು?
ಬೆಲೆ ಏರಿಕೆ ಎಷ್ಟೇ ಆದರೂ ಜನ ವಿವಾಹ ಹಾಗು ಇನ್ನಿತರ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡಲೇಬೇಕು. ಅದರಿಂದ ಮುಂದೆ ಕಮ್ಮಿ ಆಗಬಹುದು ಎಂದು ಕಾಯುತ್ತಾ ಕುಳಿತುಕೊಳ್ಳುವುದಕ್ಕಿಂತ ದುಡ್ಡಿದ್ದರೆ ಈಗಲೇ ಖರೀದಿ ಮಾಡಿಬಿಡಿ ಎನ್ನುತ್ತಾರೆ ತಜ್ಞರು. ಇನ್ನು ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೂ ತಜ್ಞರು ಒಂದು ಕಿವಿ ಮಾತು ಹೇಳಿದ್ದಾರೆ. ನೇರವಾಗಿ ಬಂಗಾರವನ್ನು ಖರೀದಿ ಮಾಡುವ ಬದಲು ಗೋಲ್ಡ್ ಐಟಿಎಫ್ (Gold ETF)ಮೇಲೆ ಬಂಡವಾಳ ಹೂಡುವುದು ಬುದ್ದಿವಂತಿಕೆ ಎನ್ನುತ್ತಾರೆ.









