)
Nafisa Ali Cancer
: 'ಪಾರ್ಚ್ಡ್' ಚಿತ್ರದಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನ ಆಕರ್ಷಿಸಿದ ತನ್ನಿಷ್ಠಾ ಚಟರ್ಜಿ ಇತ್ತೀಚೆಗೆ ಅಭಿಮಾನಿಗಳಿಗೆ ತಾವು 4ನೇ ಹಂತದ ಆಲಿಗೋ ಮೆಟಾಸ್ಟಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದೀಗ ಮತ್ತೊಬ್ಬ ಹಿರಿಯ ನಟಿ ತಾವು ಕ್ಯಾನ್ಸರ್ನಿಂದ ಬಳಲುತ್ತಿರುವ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಧರ್ಮೇಂದ್ರ ಅವರಂತಹ ತಾರೆಯರೊಂದಿಗೆ ತೆರೆ ಹಂಚಿಕೊಂಡಿರುವ ಹಿರಿಯ ನಟಿ ನಫೀಸಾ ಅಲಿ 4ನೇ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ನಫೀಸಾ ಒಂದು ಪೋಸ್ಟ್ ಅನ್ನ ಹಂಚಿಕೊಂಡಿದ್ದು, ಅದರಲ್ಲಿ ಅವರು ಮತ್ತೆ ಕ್ಯಾನ್ಸರ್ಗೆ ತುತ್ತಾಗಿರುವ ಬಗ್ಗೆ ತಿಳಿಸಿದ್ದಾರೆ. ನಟಿಗೆ ಈಗ ಕೀಮೋಥೆರಪಿ ಕೂಡ ಪ್ರಾರಂಭವಾಗಿದೆ. ಏಕೆಂದರೆ ಈಗ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಈ ಪೋಸ್ಟ್ನಲ್ಲಿ ನಟಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ನಟಿ ಪೋಸ್ಟ್ ಕಂಡು ಅವರ ಅಸಖ್ಯಾಂತ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ.
ನಫೀಸಾ ಅಲಿಗೆ ಮತ್ತೆ ಕ್ಯಾನ್ಸರ್ ಪತ್ತೆ
ನಫೀಸಾ ಅಲಿ ತಮ್ಮ ಪೋಸ್ಟ್ನಲ್ಲಿ ಮಕ್ಕಳನ್ನ ಹೇಗೆ ಸಮಾಧಾನಪಡಿಸಿದೆ ಎಂಬುದರ ಬಗ್ಗೆ ವಿವರಿಸಿದ್ದಾರೆ. ʼನೀವು ಇಲ್ಲದಿರುವಾಗ ನಾವು ಯಾರ ಬಳಿಗೆ ಹೋಗಬೇಕು?ʼ ಎಂದು ʼಒಂದು ದಿನ ನನ್ನ ಮಕ್ಕಳು ನನ್ನನ್ನ ಕೇಳಿದರು. ನಾನು ಅವರಿಗೆ ಹೇಳಿದೆ- ʼನೀವು ಪರಸ್ಪರ ಹೊಂದಾಣಿಕೆಯಿಂದ ಇರಿ, ಇದುವೇ ನನಗೆ ನೀವು ಕೊಡುವ ದೊಡ್ಡ ಉಡುಗೊರೆ. ಒಂದೇ ರೀತಿಯ ಪ್ರೀತಿ ಮತ್ತು ನೆನಪುಗಳನ್ನ ಹಂಚಿಕೊಳ್ಳುವ ಸಹೋದರ-ಸಹೋದರಿಯರೇ, ಪರಸ್ಪರ ರಕ್ಷಿಸಿಕೊಳ್ಳಬೇಕು. ನಿಮ್ಮ ಸಂಬಂಧವು ಜೀವನದ ಯಾವುದೇ ಸವಾಲುಗಳಿಗಿಂತ ಹೆಚ್ಚು ಬಲವಾಗಿರುತ್ತದೆʼ ಎಂಬುದನ್ನ ನೆನಪಿಡಿ ಅಂತಾ ಹೇಳಿದೆ.
ನನಗೆ ಜೀವನ ತುಂಬಾ ಇಷ್ಟ: ನಫೀಸಾ ಅಲಿ
ನಫೀಸಾ ಅಲಿ ಅವರ ಈ ಪೋಸ್ಟ್ನ ಶೀರ್ಷಿಕೆಯು ಅವರ ಅಭಿಮಾನಿಗಳನ್ನ ಭಾವುಕರನ್ನಾಗಿಸುತ್ತಿದೆ. ಪೋಸ್ಟ್ ಹಂಚಿಕೊಳ್ಳುವಾಗ, ಅವರು ʼಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಿದೆ. ನಾನು ಪಿಇಟಿ ಸ್ಕ್ಯಾನ್ ಮಾಡಿಸಿಕೊಂಡೆ. ಈಗ ನಾನು ಕಿಮೊಥೆರಪಿಗೆ ಮರಳಿದ್ದೇನೆ, ಏಕೆಂದರೆ ನನ್ನ ಶಸ್ತ್ರಚಿಕಿತ್ಸೆ ಇನ್ಮುಂದೆ ಸಾಧ್ಯವಿಲ್ಲ. ನನ್ನನ್ನ ನಂಬಿರಿ, ನಾನು ಈ ಜೀವನವನ್ನ ತುಂಬಾ ಪ್ರೀತಿಸುತ್ತೇನೆʼ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಸ್ಕ್ಯಾನ್ ಚಿತ್ರ ಹಂಚಿಕೊಂಡ ನಟಿ
ನಫೀಸಾ ಅಲಿ ಫೇಸ್ಬುಕ್ನಲ್ಲಿ ಕೂಡ ಪೋಸ್ಟ್ ಮೂಲಕ ತಮಗೆ ಕ್ಯಾನ್ಸರ್ ಮರುಕಳಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ತಮ್ಮ ಸ್ಕ್ಯಾನ್ ಮತ್ತು ತಮ್ಮ ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ಕ್ಯಾನ್ಸರ್, ಅದರ ವಿರುದ್ಧ ಹೋರಾಡುವುದು, ಮುಂದುವರಿಯುವುದು ಮತ್ತು ಬದುಕುಳಿಯುವಿಕೆಯ ಪ್ರಮಾಣದ ಬಗ್ಗೆ ಮಾತನಾಡಿದ್ದಾರೆ. ಅವರ ಈ ಪೋಸ್ಟ್ ಅವರ ಕ್ಯಾನ್ಸರ್ 4ನೇ ಹಂತವನ್ನು ತಲುಪಿದೆ ಎಂಬ ಸುಳಿವನ್ನ ನೀಡುತ್ತದೆ. ಪ್ರಸ್ತುತ ಇದನ್ನು ಹೊರತುಪಡಿಸಿ ಅವರು ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ.
ಕ್ಯಾನ್ಸರ್ ಸೋಲಿಸಿದ್ದ ನಫೀಸಾ ಅಲಿ
ನಫೀಸಾ ಅಲಿಗೆ ಕ್ಯಾನ್ಸರ್ ಇರುವುದು ಇದೇ ಮೊದಲಲ್ಲ.. ಅವರು ಈ ಹಿಂದೆ ಕೂಡ ಮಾರಕ ಕಾಯಿಲೆಯ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದರು. 2018ರಲ್ಲಿ ಅವರಿಗೆ ಮೊದಲು 3ನೇ ಹಂತದ ಪೆರಿಟೋನಿಯಲ್ ಮತ್ತು ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ 2019ರಲ್ಲಿ ಅವರನ್ನ ಕ್ಯಾನ್ಸರ್ ಮುಕ್ತ ಎಂದು ಘೋಷಿಸಲಾಯಿತು. ಆ ಸಮಯದಲ್ಲಿ ಅವರ ಹೋರಾಟದ ಬಗ್ಗೆ ಮಾತನಾಡುತ್ತಾ, "ಕ್ಯಾನ್ಸರ್ ಸಂಪೂರ್ಣವಾಗಿ ಗುಣಮುಖವಾಗಿದೆಯೇ ಎಂದು ತಿಳಿಯಲು ಐದು ವರ್ಷಗಳು ಬೇಕಾಗುತ್ತದೆ" ಎಂದು ಹೇಳಿದ್ದರು. ಈಗ ಅವರು ಮತ್ತೊಮ್ಮೆ ಕ್ಯಾನ್ಸರ್ಗೆ ತುತ್ತಾಗಿದ್ದು, ಖಿನ್ನತೆಗೆ ಒಳಗಾಗಿದ್ದಾರೆ. ಅವರ ಅಭಿಮಾನಿಗಳು ಧೈರ್ಯವಾಗಿರು ಎಂದು ಕಾಮೆಂಟ್ ಮೂಲಕ ನಟಿಯ ಚೇತರಿಕೆಗೆ ಶುಭ ಹಾರೈಸಿದ್ದಾರೆ.