ಪ್ರೇಮಲೋಕ ಸೃಷ್ಟಿಸಿದ ಕನಸುಗಾರನಿಗೆ ಗೌರವ ಡಾಕ್ಟರೇಟ್
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಇನ್ನು ಮುಂದೆ ಡಾ. ರವಿಚಂದ್ರನ್.
ಬೆಂಗಳೂರು: ಸಿ.ಎಂ.ಆರ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಪ್ರೇಮಲೋಕ ಸೃಷ್ಟಿಸಿದ ಕನಸುಗಾರ ವಿ. ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ನಗರದಲ್ಲಿ ಭಾನುವಾರ ನಡೆದ ಸಿಎಂಆರ್ ವಿಶ್ವವಿದ್ಯಾನಿಲಯದ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಮೂವರಿಗೆ ಡಾಕ್ಟರೇಟ್, 216 ವಿದ್ಯಾರ್ಥಿಗಳಿಗೆ ಪದವಿ ಹಾಗೂ 198 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಧಾನ ಮಾಡಿದರು.
ಸಿನಿಮಾ ಕ್ಷೇತ್ರದಲ್ಲಿ 3 ದಶಕಗಳಿಂದ ಕಲಾ ಸೇವೆ ಮಾಡಿರುವ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, "ನನ್ನ 31 ವರ್ಷಗಳ ಕಲಾ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ಸಂತಸ ತಂದಿದೆ. ಸಿನಿಮಾ ಕ್ಷೇತ್ರದಲ್ಲಿ ನಾನು ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ತಂದೆಯವರ ಕನಸಾಗಿತ್ತು. ಹಾಗಾಗಿ ಈ ಗೌರವವನ್ನು ನನ್ನ ತಂದೆ ವೀರಸ್ವಾಮಿ ಅವರಿಗೆ ಅರ್ಪಿಸುತ್ತೇನೆ" ಎಂದು ತಿಳಿಸಿದರು.
ಬಳಿಕ ಮಾತನಾಡಿದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗುಣಾತ್ಮಕ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯಗಳು ಬರಬೇಕು ಎಂದು ಅಭಿಪ್ರಾಯಪಟ್ಟರು. ಮನೆ ಕಟ್ಟಲು ತಳಪಾಯ ಹೇಗೆ ಮುಖ್ಯವೋ, ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ ಎಂದರು.