)
FIR On Shah Rukh Khan Deepika Padukone : ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಕಾರು ಕಂಪನಿಗೆ ಪ್ರಚಾರ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಸ್ಥಾನದ ಭರತ್ಪುರ ನಿವಾಸಿ ಕೀರ್ತಿ ಸಿಂಗ್ ಎಂಬ 50 ವರ್ಷದ ವ್ಯಕ್ತಿಯ ದೂರಿನ ಮೇರೆಗೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಸುಮಾರು 7 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ವ್ಯಕ್ತಿ ನೀಡಿದ ದೂರಿನಲ್ಲಿ ದೋಷಯುಕ್ತ ಹುಂಡೈ ಅಲ್ಕಾಜರ್ ಕಾರನ್ನು ಉದ್ದೇಶಪೂರ್ವಕವಾಗಿ ಮಾರಾಟ ಮಾಡಲಾಗಿದ್ದು, ಇದು ಅವರ ಕುಟುಂಬದವರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ, ಕಾರನ್ನು ವಂಚನೆಯಿಂದ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿಷಯದಲ್ಲಿ ಕೀರ್ತಿ ಸಿಂಗ್ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದರ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಮಥುರಾ ಗೇಟ್ ಪೊಲೀಸ್ ಠಾಣೆಯಲ್ಲಿ ಅರ್ಜಿಯ ಮೂಲಕ ಪ್ರಕರಣ ದಾಖಲಿಸಲಾಗಿದೆ. ಕೀರ್ತಿ ಅವರು 2022 ರಲ್ಲಿ ಹುಂಡೈ ಅಲ್ಕಾಜರ್ ಖರೀದಿಸಿರುವುದಾಗಿ ಹೇಳಿದ್ದಾರೆ. ಅವರು ಈ ಕಾರನ್ನು ಸಾಲದ ಮೇಲೆ ತೆಗೆದುಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಕಾರಿನಲ್ಲಿ ಉತ್ಪಾದನಾ ದೋಷಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ಕಾರಿನ ವೇಗವನ್ನು ಹೆಚ್ಚಿಸಲು ಆಕ್ಸಿಲರೇಟರ್ ಒತ್ತಿದಾಗ ಕಾರಿನ ಆರ್ಪಿಎಂ ಹೆಚ್ಚಾಗುತ್ತದೆ ಮತ್ತು ಕಾರು ಅಲುಗಾಡಲು ಪ್ರಾರಂಭಿಸುತ್ತದೆ. ಆದರೆ ಕಾರಿನ ವೇಗ ಹೆಚ್ಚಾಗುವುದಿಲ್ಲ ಎಂದು ದೂರುದಾರರು ಹೇಳುತ್ತಾರೆ. ಇದು ಅವರ ಮತ್ತು ಅವರ ಕುಟುಂಬದವರೆ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.
ಯಾರ ವಿರುದ್ಧ ಎಫ್ಐಆರ್?
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರಲ್ಲದೆ ಕಂಪನಿಗೆ ಸಂಬಂಧಿಸಿದ ಜನರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ಕಿಮ್ ಅನ್ಸೊ (ಸಿಇಒ, ಹುಂಡೈ ಮೋಟಾರ್ ಇಂಡಿಯಾ), ತರುಣ್ ಗರ್ಗ್ (ಪೂರ್ಣ ಸಮಯದ ನಿರ್ದೇಶಕ ಮತ್ತು ಸಿಇಒ), ನಿತಿನ್ ಶರ್ಮಾ (ಎಂಡಿ, ಮಾಲ್ವಾ ಆಟೋ ಸೇಲ್ಸ್ ಕುಂಡ್ಲಿ), ಪ್ರಿಯಾಂಕಾ ಶರ್ಮಾ (ನಿರ್ದೇಶಕಿ, ಮಾಲ್ವಾ ಆಟೋ ಸೇಲ್ಸ್ ಕುಂಡ್ಲಿ) ಮತ್ತು ಇನ್ನೊಬ್ಬರು ಸೇರಿದ್ದಾರೆ.
ಈ ಕಾರನ್ನು ಬುಕ್ ಮಾಡಲು ಮೊದಲು 51000 ರೂ. ಪಾವತಿಸಿದ್ದಾಗಿ ಕೀರ್ತಿ ಹೇಳಿದ್ದಾರೆ. ನಂತರ, 10 ಲಕ್ಷ 3 ಸಾವಿರ 699 ರೂ. ಸಾಲವನ್ನು ತೆಗೆದುಕೊಂಡು ಉಳಿದ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ. ಅವರು ಈ ಕಾರನ್ನು 23 ಲಕ್ಷ 97 ಸಾವಿರ 353 ರೂ.ಗೆ ಖರೀದಿಸಿದರು. ಕಾರಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಯಾವುದೇ ಸಮಸ್ಯೆ ಇದ್ದರೆ ನಾವು ಜವಾಬ್ದಾರರು ಎಂದು ಡೀಲರ್ ಹೇಳಿದ್ದರು ಎಂದು ಕೀರ್ತಿ ಹೇಳಿಕೊಂಡಿದ್ದಾರೆ.
ಶಾರುಖ್-ದೀಪಿಕಾ ವಿರುದ್ಧ ಎಫ್ಆಐರ್ ದಾಖಲಾಗಿದ್ದು ಏಕೆ?
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಈ ಕಾರು ಕಂಪನಿಯ ಬ್ರಾಂಡ್ ಅಂಬಾಸಿಡರ್ಗಳಾಗಿದ್ದು ಕಂಪನಿಯ ದೋಷಪೂರಿತ ಕಾರುಗಳ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಅವರು ಮಾಡಿದ್ದಾರೆ. ಆದ್ದರಿಂದ ಅವರಿಬ್ಬರೂ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ಕೀರ್ತಿ ಸಿಂಗ್ ಆರೋಪಿಸಿದ್ದಾರೆ.
ಈ ಅಪರಾಧ ಕೃತ್ಯದಲ್ಲಿ ಇಬ್ಬರೂ ಕಲಾವಿದರು ಸಮಾನ ಪಾಲುದಾರರು ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 420 ಮತ್ತು 120-ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಾರುಖ್ 1998 ರಿಂದ ಹುಂಡೈನ ಬ್ರಾಂಡ್ ಅಂಬಾಸಿಡರ್ ಆಗಿದ್ದರೆ, ದೀಪಿಕಾ 2023 ರಲ್ಲಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದರು ಎಂಬುದು ಗಮನಿಸಬೇಕಾದ ಸಂಗತಿ. ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.