)
ಬೆಂಗಳೂರು: ಕನ್ನಡದ ರಿಯಾಲಿಟಿ ಶೋ 'ಬಿಗ್ ಬಾಸ್'ನ ಇತ್ತೀಚಿನ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಖ್ಯಾತ ಆ್ಯಂಕರ್ ಜಾನ್ವಿ, ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನ ಕೂಡ ಮನೆಯೊಳಗೆ ಚರ್ಚೆಯ ಕೇಂದ್ರಬಿಂದುವಾಗಿದೆ.
ಈ ಹಿಂದೆಯೂ ಜಾನ್ವಿಯ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಬಂದಿದ್ದು,ಬಿಗ್ ಬಾಸ್ ಮನೆಯಲ್ಲಿ ಜಾನ್ವಿ, ಸಹ ಸ್ಪರ್ಧಿಗಳಾದ ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿಯೊಂದಿಗೆ ತಮ್ಮ ಜೀವನದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಾತುಕತೆಯ ಸಂದರ್ಭದಲ್ಲಿ ಜಾನ್ವಿ, ಮಲ್ಲಮ್ಮನವರ ಜೀವನದ ಕಷ್ಟಗಳನ್ನು ಕೇಳಿ, 'ನೀವು ನಿಜಕ್ಕೂ ಸ್ಫೂರ್ತಿದಾಯಕ. 15ನೇ ವಯಸ್ಸಿಗೆ ಮದುವೆಯಾಗಿ, ಮಕ್ಕಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದೀರಿ' ಎಂದು ಶ್ಲಾಘಿಸಿದರು. ಈ ಮಾತಿಗೆ ಭಾವುಕರಾದ ಮಲ್ಲಮ್ಮ ಕಣ್ಣೀರಿಟ್ಟರು.
ಈ ವೇಳೆ ಜಾನ್ವಿ ತಮ್ಮ ಜೀವನದ ಕೆಲವು ಕಷ್ಟದ ಕ್ಷಣಗಳನ್ನು ಹಂಚಿಕೊಂಡರು. 'ನಾನು ಮದುವೆಯಾದಾಗ ಇನ್ನೂ ಬೆಂಗಳೂರಿಗೆ ಬಂದಿರಲಿಲ್ಲ" ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡ ಜಾನ್ವಿ, ತಮ್ಮ ವಿಚ್ಛೇದನದ ಬಗ್ಗೆಯೂ ಮಾತನಾಡಿದರು.ಮಲ್ಲಮ್ಮನವರು, "ನಿಮ್ಮ ಪತಿ ಈಗ ಏನು ಮಾಡುತ್ತಿದ್ದಾರೆ?' ಎಂದು ಕೇಳಿದಾಗ, ಜಾನ್ವಿ, 'ನಾವು ವಿಚ್ಛೇದನ ಪಡೆದಿದ್ದೇವೆ" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಮ್ಮ,'ಮದುವೆಯಾದ ಮೇಲೆ ಹಾಗೆ ಬಿಡಬಾರದು' ಎಂದು ಸಲಹೆ ನೀಡಿದಾಗ, ಜಾನ್ವಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. "ನಾನು ಜೊತೆಯಲ್ಲಿದ್ದಾಗಲೇ ಅವರಿಗೆ ಬೇರೆ ಮದುವೆಯಾಗಿ ಮಗುವಾಗಿತ್ತು. ಹೀಗಾದಾಗ ಆ ಸಂಬಂಧಕ್ಕೆ ಅರ್ಥವಿರಲಿಲ್ಲ. ಅದಕ್ಕೆ ಬಿಟ್ಟೆ" ಎಂದು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದರು. ತದನಂತರ ಮಲ್ಲಮ್ಮ ಕೂಡ ಅವರ ಮಾತನ್ನು ಒಪ್ಪಿಕೊಂಡರು.
ಜಾನ್ವಿ ತಮ್ಮ ಆ್ಯಂಕರಿಂಗ್ ವೃತ್ತಿಜೀವನದ ಮೂಲಕ ಕನ್ನಡ ರಂಗಭೂಮಿಯಲ್ಲಿ ಗುರುತಿಸಿಕೊಂಡವರು.ವಿಚ್ಛೇದನದ ನಂತರವೂ ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಂಡ ಅವರು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಈಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ಮೂಲಕ ಮಿಂಚುವ ಉತ್ಸಾಹದಲ್ಲಿದ್ದಾರೆ. ಒಂದು ವೇಳೆ ಅವರು ಈ ಶೋನಲ್ಲಿ ಗೆದ್ದರೆ, ಚಿತ್ರರಂಗದಿಂದ ಮತ್ತಷ್ಟು ಅವಕಾಶಗಳು ಅವರನ್ನು ಅರಸಿಬರಬಹುದು ಎಂಬ ನಿರೀಕ್ಷೆ ಇದೆ.