)
Kantara 1: 'ಕಾಂತಾರ' ಚಿತ್ರದ ಯಶಸ್ಸಿನ ನಂತರ, ಅದರ ಮುಂದಿನ ಭಾಗವಾದ 'ಕಾಂತಾರ ಅಧ್ಯಾಯ 1'ರ ಟ್ರೇಲರ್ ಇಡೀ ವಿಶ್ವದಲ್ಲಿ ಗಮನ ಸೆಳೆಯುತ್ತಿದೆ. ಚಿತ್ರದ ಪ್ರೀ-ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖ ಸದಸ್ಯರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ರಿಷಬ್ ಶೆಟ್ಟಿ ಮಾತನಾಡಿ, 'ಕಾಂತಾರ' ಐದು ವರ್ಷಗಳ ಕಠಿಣ ಪರಿಶ್ರಮದ ಫಲ. ಈ ಪ್ರಯಾಣವು ತುಂಬಾ ಭಾವನಾತ್ಮಕವಾಗಿತ್ತು ಮತ್ತು ಕಷ್ಟಗಳಿಂದ ಕೂಡಿತ್ತು. ಈ ಸಮಯದಲ್ಲಿ ನನ್ನ ಪತ್ನಿ ಪ್ರಗತಿ ಶೆಟ್ಟಿ ಅವರು ಸಾಕಷ್ಟು ಹರಕೆಗಳನ್ನು ಹೊತ್ತಿದ್ದಾರೆ. ಚಿತ್ರದ ಯಶಸ್ಸಿಗೆ ಇಡೀ ತಂಡ, ಅರಣ್ಯ ಸಚಿವರು, ಮತ್ತು ಸ್ಥಳೀಯ ಜನರು ಸಂಪೂರ್ಣ ಬೆಂಬಲ ನೀಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಬಜೆಟ್ ಬಗ್ಗೆ ಯೋಚಿಸದೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಾನು ನಾಲ್ಕೈದು ಬಾರಿ ಸಾವಿನ ಅಂಚಿನಿಂದ ಮರಳಿ ಬಂದಿದ್ದೇನೆ. ಈ ಚಿತ್ರದ ತಯಾರಿಕೆಗೆ ಸುಮಾರು 4.5 ಲಕ್ಷ ಜನರಿಗೆ ಊಟ ಹಾಕಲಾಗಿದೆ. ಇದು ಕೇವಲ ಸಿನಿಮಾ ಆಗಿರದೆ ಒಂದು ಭಾವನಾತ್ಮಕ ಪ್ರಯಾಣವಾಗಿದೆ. ನಿರ್ಮಾಪಕರು ಕೇವಲ ಒಂದು ಸಾಲಿನ ಕಥೆಯ ಮೇಲೆ ನಂಬಿಕೆ ಇಟ್ಟು ಈ ಚಿತ್ರ ಮಾಡಲು ಒಪ್ಪಿಕೊಂಡರು ಎಂದು ತಿಳಿಸಿದರು.
ಚಿತ್ರದಲ್ಲಿ ರಾಣಿ ಪಾತ್ರ ನಿರ್ವಹಿಸಿದ ರುಕ್ಮಿಣಿ ವಸಂತ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ಇಂತಹ ಮಹತ್ವದ ಪಾತ್ರ ದೊರೆತಿದ್ದು ಸಂತೋಷ ತಂದಿದೆ ಎಂದು ಹೇಳಿದರು. ಈ ಪಾತ್ರ ಸವಾಲಿನದ್ದಾಗಿದ್ದರೂ, ತಂಡದ ಬೆಂಬಲದಿಂದ ಸುಲಭವಾಗಿದೆ ಎಂದರು.
ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಮಾತನಾಡಿ, "ನಾವು ಮೂರು ವರ್ಷಗಳ ಕಾಲ ಮನೆಯನ್ನು ಬಿಟ್ಟು ಕುಂದಾಪುರದಲ್ಲಿ ಇದ್ದು ಈ ಚಿತ್ರದಲ್ಲಿ ಪಾಲ್ಗೊಂಡಿದ್ದೇವೆ. ಹೊಂಬಾಳೆ ಫಿಲ್ಮ್ಸ್ ನಮ್ಮ ಕುಟುಂಬದಂತೆ ನಿಂತಿದೆ. ಐದು ವರ್ಷಗಳ ಹಿಂದೆ ಒಂದು ಫೋನ್ ಕರೆಯ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರ ಮಾಡಲು ಒಪ್ಪಿಕೊಂಡರು" ಎಂದು ಹೇಳಿದರು. ಈ ಚಿತ್ರದ ಹಿಂದೆ ಒಂದು ದೈವಿಕ ಶಕ್ತಿ ಇದೆ ಎಂದು ಅವರು ನಂಬಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರ್, ಅಕ್ಟೋಬರ್ 2 ರಂದು 'ಕಾಂತಾರ' ಭಾರತದಾದ್ಯಂತ 7,000 ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದರು. ಇದರ ಜೊತೆಗೆ, ಇದು 30 ದೇಶಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. ಮೊದಲ ಬಾರಿಗೆ ಕನ್ನಡದ ಒಂದು ಚಿತ್ರ ಸ್ಪ್ಯಾನಿಷ್ ಭಾಷೆಗೆ ಡಬ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಇತರ ನಗರಗಳಲ್ಲಿಯೂ ಪತ್ರಿಕಾಗೋಷ್ಠಿಗಳನ್ನು ನಡೆಸಲು ಯೋಜನೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ 'ಕಾಂತಾರ' ಪೋಸ್ಟ್ಕಾರ್ಡ್ ಮತ್ತು ಪೋಸ್ಟ್ ಕವರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬರಹಗಾರರು, ಕಾರ್ಯನಿರ್ವಾಹಕ ನಿರ್ಮಾಪಕರು, ಸಾಹಸ ನಿರ್ದೇಶಕರು, ಸಂಕಲನಕಾರರು ಮತ್ತು ನೃತ್ಯ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಇತರ ಸದಸ್ಯರು ಸಹ ಉಪಸ್ಥಿತರಿದ್ದರು.