Harish Rai life story : ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯದ ಮೂಲಕ ತಮ್ಮದೇ ಆದ ಛಾಪು ಮೂಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಹರೀಶ್ ರಾಯ್ ಅವರು, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸುತ್ತಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಒಂದು ಕಾಲದಲ್ಲಿ ಚಿನ್ನದ ಅಂಗಡಿಯ ಮಾಲೀಕರಾಗಿದ್ದ ಹರೀಶ್ ರಾಯ್, ಒಂದೊಂದು ಪೈಸೆಗೂ ಪರದಾಡಿದ್ದರು ಎನ್ನುವುದು ನಿಜಕ್ಕೂ ವಿಪರ್ಯಾಸ. ಚಿನ್ನದಂಗಡಿ ಮಾಲೀಕ, ಸಿನಿಮಾಗಳಲ್ಲಿ ಖಳನಾಯಕ, ಆರೋಗ್ಯ ಸಮಸ್ಯೆ ವಿರುದ್ಧ ಹೋರಾಟ ಹರೀಶ್ ರಾಯ್ ಜೀವನದ ಕೆಲವು ಪ್ರಮುಖ ಘಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ.
ಹರೀಶ್ ರಾಯ್ ಹಿನ್ನೆಲೆ:
ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮೊದಲು ಹರೀಶ್ ರಾಯ್ ಅವರು ತಮ್ಮ ಊರಲ್ಲಿ ಸ್ವಂತ ಚಿನ್ನದ ಅಂಗಡಿಯನ್ನು ಹೊಂದಿದ್ದರಂತೆ. ಆದರೆ, ಬಣ್ಣದ ಬದುಕಿನ ವ್ಯಾಮೋಹ ಕೈ ಬೀಸಿ ಕರೆದಿತ್ತು. ಹಾಗಾಗಿ, ಚಿನ್ನದ ಅಂಗಡಿಯನ್ನು ನನ್ನ ಅಣ್ಣನಿಗೆ ಬಿಟ್ಟು ಬಂದಿದ್ದೆ ಎಂದು ಸಂದರ್ಶನವೊಂದರಲ್ಲಿ ಹರೀಶ್ ರಾಜ್ ಅವರೇ ಹೇಳಿಕೊಂಡಿದ್ದರು.
ಸೂಪರ ಹಿಟ್ ಸಿನಿಮಾಗಳಲ್ಲಿ ನಟನೆ :
ಕರಾವಳಿ ಮೂಲದ ಹರೀಶ ರಾಯ್ ಸಿನಿಮಾ ಪ್ರಪಂಚಕ್ಕೆ ಕಾಲಿಡುವ ಕನಸಿನಿಂದ ಅಂಗಡಿಯನ್ನ ತಮ್ಮ ಅಣ್ಣನಿಗೆ ಬಿಟ್ಟುಕೊಟ್ಟು ಬಂದು ಹಲವಾರು ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಂಡು ಪೇಕ್ಷಕರ ಮನಗೆದ್ದರು. 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಖಳನಟರಾಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ- ಕೆಜಿಎಫ್ ಚಾಚಾ.. ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ!
ಮೊದಲಿಗೆ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಹರೀಶ್ ರಾಯ್ ಬಳಿಕ ಜೋಡಿ ಹಕ್ಕಿ, ತಾಯವ್ವ, ನಲ್ಲ, ಬೆಂಗಳೂರು ಅಂಡರ್ ವರ್ಲ್ಡ್, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಭೂಗತ, ರಾಜ್, ಬಹದ್ದೂರ್, ಸಂಜು ವೆಡ್ಸ್ ಗೀತಾ, ‘ಕೆಜಿಎಫ್ ಚಾಪ್ಟರ್ 1 ಮತ್ತು 2’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಓಂ ಸಿನಿಮಾ ಬಳಿಕ ಕೆಜಿಎಫ್ ಹರೀಶ್ ರಾಯ್ ಅವರಿಗೆ ಉತ್ತಮ ಬ್ರೇಕ್ ಕೊಟ್ಟಿತ್ತು. ಆದರೆ, ಅವರ ಅನಾರೋಗ್ಯ ಅವರನ್ನು ಕಷ್ಟದ ಮಡುವಿನಲ್ಲಿ ಬೀಳುವಂತೆ ಮಾಡಿತ್ತು. ನಾಲ್ಕನೇ ಹಂತದ ಥೈರಾಯ್ಡ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಹರೀಶ ರಾಯ್ ಅವರಿಗೆ ಅನಾರೋಗ್ಯ, ದುಬಾರಿ ಚಿಕಿತ್ಸೆಯಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆ ಸಂದರ್ಭದಲ್ಲಿ ಹರೀಶ್ ರಾಯ್ ಅವರಿಗೆ ಹಲವಾರು ಸಿನಿತಾರೆಯರು ಧೈರ್ಯ ತುಂಬಿ, ಸಹಾಯ ಹಸ್ತ ಚಾಚಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಚಿರನಿದ್ರೆಗೆ ಜಾರಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರ ಅಗಲಿಕೆ ಕನ್ನಡ ಚಲನಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.









