)
nanu mattu gunda 2 : ನಾನು ಮತ್ತು ಗುಂಡ ಮೊದಲ ಭಾಗದ ಸಿನಿಮಾದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಅವರು ನಾಯಕನಾಗಿ ನಟಿಸಿದ್ದರು. ಐದು ವರ್ಷಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ, ತನ್ನ ಸರಳ ಕಥೆಯ ಮೂಲಕ ಕನ್ನಡ ಸಿನಿಪ್ರಿಯರನ್ನು ರಂಜಿಸಿತ್ತು. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ನಟಿಸಿದ್ದ ನಾಯಿ ಎಲ್ಲರ ಮನಗೆದ್ದಿತ್ತು. ಈಗ ಇಷ್ಟು ವರ್ಷಗಳ ನಂತರ ಇದರ ಎರಡನೇ ಭಾಗ ತೆರೆಕಾಣಲು ಸಜ್ಜಾಗಿದ್ದು, ಇದು ವಿಶಿಷ್ಟ ಕಥಾಹಂದರವನ್ನು ಹೊಂದಿದೆ ಮತ್ತು ಉತ್ತಮ ತಾರಾಗಣ ಇದರಲ್ಲಿದೆ. ಈ ಫಿಲ್ಮ್ ಇದೇ ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರವನ್ನು ನಿರ್ದೇಶಕ ರಘು ಹಾಸನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ರಾಕೇಶ್ ಅಡಿಗ ಮತ್ತು ರಚನಾ ಇಂದರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಈ ಚಿತ್ರಕ್ಕೆ ಸಂಗೀತವನ್ನು ಆರ್.ಪಿ. ಪಟ್ನಾಯಕ್ ಹೊತ್ತಿದ್ದಾರೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಚಿತ್ರಕ್ಕೆ ಯಾವುದೇ ಕಟ್ಗಳನ್ನು ಸೂಚಿಸದೇ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣಪತ್ರ ನೀಡಿದೆ. ಈ ಕಥೆಯು ಮೊದಲ ಭಾಗದ ಶಂಕರ ನಿಧನದ ನಂತರ ಆತನ ಮಗನ ಜೀವನದ ಸುತ್ತ ತಿರುಗುತ್ತದೆ. ಶಂಕರನ ಮಗನಾಗಿ ರಾಕೇಶ್ ಅಡಿಗ ಅಭಿನಯಿಸಿದ್ದು, ಈ ಚಿತ್ರದಲ್ಲಿ ಅವನಿಗೆ ಆ ನಾಯಿಯೇ ಪ್ರಪಂಚ. ಸಾಮಾಜಿಕ ಸಂದೇಶದ ಜೊತೆಗೆ ದೇವನೀಯ ಅಂಶಗಳನ್ನೂ ಹೊಂದಿರುವ ಕಥಾಹಂದರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಿದೆ.
ಈ ಚಿತ್ರದ ಜಿತ್ರೀಕರಣಕ್ಕಾಗಿ ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಮತ್ತು ಬೆಂಗಳೂರು ಸುತ್ತಮುತ್ತ ಸುಂದರ ದೃಶ್ಯಾವಳಿಗಳನ್ನು ಬಳಸಿಕೊಂಡಿದೆ. ಸಿಂಬು ಎಂಬ ನಾಯಿಯ ಜೊತೆಗೆ ಬಂಟಿ ಎಂಬ ನಾಯಿಯೂ, ಬಾಲನಟ ಜೀವನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿತವಾದ ಈ ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಅವರ ಸಂಗೀತ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ ಮತ್ತು ತನ್ವಿಕ್ ಅವರ ಛಾಯಾಗ್ರಹಣ ಬೆಂಬಲವಾಗಿದೆ. ಪ್ರೇಕ್ಷಕರ ಮನ ಸೆಳೆಯಲು ಸಜ್ಜಾಗಿರುವ ನಾನು ಮತ್ತು ಗುಂಡ 2, ನಾಯಿಯ ಪ್ರೀತಿಯ ಮೂಲಕ ಕುಟುಂಬ, ಭಾವನೆ ಮತ್ತು ಸಾಮಾಜಿಕ ಸಂದೇಶಗಳನ್ನು ಹಂಚುವ ಪ್ರಯತ್ನ ಮಾಡುತ್ತಿದೆ.