)
ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ನಟಿಯರಲ್ಲಿ ಐಶ್ವರ್ಯಾ ರೈ ಒಬ್ಬರು. ಐಶ್ವರ್ಯಾ ರೈಗಿಂತ ಮುನ್ನ ಮತ್ತು ನಂತರ ಅದೆಷ್ಟು ವಿಶ್ವ ಸುಂದರಿಯರು ಬಂದರೂ, ಶಾಶ್ವತ ವಿಶ್ವ ಸುಂದರಿಯಾಗಿ ಜನಮಾನಸದಲ್ಲಿ ಉಳಿದಿರುವುದು ಐಶ್ವರ್ಯಾ ರೈ ಮಾತ್ರ. 1994ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಅವರು, ಈಗ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅವರಿಗೆ ವಿಶ್ವ ಸುಂದರಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದು ಕೇವಲ ಸೌಂದರ್ಯವಲ್ಲ, ಅವರಿಗೆ ಕೇಳಿರುವ ಪ್ರಶ್ನೆ ಮತ್ತು ಆ ಪ್ರಶ್ನೆಗೆ ಐಶ್ವರ್ಯ ನೀಡಿರುವ ಉತ್ತರ.
ನಟಿ ಐಶ್ವರ್ಯಾ ರೈ ವಿಶ್ವದ ಸುಂದರಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಇವರು ತಮ್ಮ ಸೌಂದರ್ಯ ಮಾತ್ರವಲ್ಲ, ನಟನಾ ಕೌಶಲ್ಯಕ್ಕೂ ಹೆಸರಾದವರು. ತಾವು ಅಭಿನಯಿಸಿದ ಸಿನಿಮಾಗಳು ಗಲ್ಲಾಪೆಟ್ಟಿಗೆ ತುಂಬಿಕೊಳ್ಳುವಂತೆ ಮಾಡುವಲ್ಲಿ ಐಶ್ವರ್ಯಾ ಪಾತ್ರ ದೊಡ್ಡದು.
ಜೋಶ್ ಚಿತ್ರದ ಚೆಲ್ಲು ಚೆಲ್ಲು ಹುಡುಗಿಯ ಪಾತ್ರದಿಂದ ಹಿಡಿದು, ತಾಲ್, ಹಂ ದಿಲ್ ದೇ ಚುಕೆ ಸನಂ, ದೇವ್ ದಾಸ್, ಜೋಧಾ ಅಕ್ಬರ್, 'ಪೊನ್ನಿಯಿನ್ ಸೆಲ್ವನ್ ನಂಥಹ ಗಂಭೀರ ಪಾತ್ರಗಳಿಗೂ ಜೀವ ತುಂಬಿದ್ದಾರೆ.
51 ವರ್ಷದ ಐಶ್ವರ್ಯಾ ರೈ ಈಗ ಸಿನಿಮಾಕ್ಕಿಂತ ತಮ್ಮ ಕುಟುಂಬ ಮತ್ತು ಮಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಜಗತ್ತಿನಿಂದ ದೂರ ಉಳಿದಿದ್ದರೂ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಕಿಂಚಿತ್ತೂ ಇಳಿಕೆಯಾಗಿಲ್ಲ. ದಿನೇ ದಿನೇ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಐಶ್ವರ್ಯಾ ರೈ ತಮ್ಮ ಸೌಂದರ್ಯಕ್ಕೆ ಮಾತ್ರವಲ್ಲದೆ ತಮ್ಮ ಬುದ್ಧಿವಂತಿಕೆ ಮತ್ತು ಸ್ಪಷ್ಟತೆಗೂ ಹೆಸರುವಾಸಿಯಾಗಿದ್ದಾರೆ. 1994 ರಲ್ಲಿ ಅವರಿಗೆ ಕೇಳಲಾದ ಪ್ರಶ್ನೆಗೆ ನೀಡಿರುವ ಉತ್ತರವೇ ಅವರಿಗೆ ವಿಶ್ವ ಸುಂದರಿ ಬಿರುದನ್ನು ತಂದುಕೊಟ್ಟಿತು.
1994 ರಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ಸಮಯದಲ್ಲಿ, "ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆಲ್ಲಲು ಯಾವ ಅರ್ಹತೆಗಳನ್ನು ಹೊಂದಿರಬೇಕು?" ಎನ್ನುವ ಪ್ರಶ್ನೆಯನ್ನು ಐಶ್ವರ್ಯಾಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಐಶ್ವರ್ಯಾ, ವಿಶ್ವ ಸುಂದರಿಯ ಅರ್ಹತೆಯನ್ನು ಸೌಂದರ್ಯದ ಮೂಲಕ ಮಾತ್ರ ಅಳೆಯುವುದಲ್ಲ. ಅವರು ದೀನದಲಿತರ ಬಗ್ಗೆಯೂ ಸಹಾನುಭೂತಿ ಹೊಂದಿರಬೇಕು. ಮನುಷ್ಯ, ರಾಷ್ಟ್ರೀಯತೆ ಮತ್ತು ಬಣ್ಣ ವ್ಯತ್ಯಾಸಗಳಿಂದ ಉಂಟಾಗುವ ಅಡೆತಡೆಗಳನ್ನು ಮೀರಿ ನೋಡಬಲ್ಲ ವ್ಯಕ್ತಿಯೇ ವಿಶ್ವ ಸುಂದರಿಯಾಗಬೇಕು, ಅದುವೇ ನಿಜವಾದ ವ್ಯಕ್ತಿತ್ವವಾಗಿರಬೇಕು ಎಂದು ಉತ್ತರಿಸಿದ್ದರು. ಈ ಉತ್ತರವೇ ಐಶ್ವರ್ಯಾ ರೈಗೆ ವಿಶ್ವ ಸುಂದರಿ ಪ್ರಶಸ್ತಿಯನ್ನು ತಂದುಕೊಟ್ಟಿತು.