)
rati agnihotri : ಪ್ರೀತಿಸಿ ಮದುವೆಯಾದ ಗಂಡನಿಂದಲೇ 30 ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದ ನಟಿ – ಈ ಕಥೆ ಕೇವಲ ಒಂದು ವ್ಯಕ್ತಿಯದ್ದೇ ಅಲ್ಲ, ಅನೇಕರ ಬದುಕಿನ ವಾಸ್ತವಿಕತೆಯ ಪ್ರತಿಬಿಂಬವಾಗಿದೆ. ಸಿನಿರಂಗದ ದೊಡ್ಡ ತಾರೆಯಾಗಿದ್ದರೂ, ನಿಜಜೀವನದಲ್ಲಿ ನಿಜಕ್ಕೂ ನರಕವನ್ನು ಅನುಭವಿಸಬೇಕಾದ ದುಃಖಿತ ನಟಿ ರತಿ ಅಗ್ನಿಹೋತ್ರಿಯ ಜೀವನವೇ ಅದಕ್ಕೆ ಸಾಕ್ಷಿ.
1979ರಲ್ಲಿ ನಟನೆಯ ಲೋಕಕ್ಕೆ ಕಾಲಿಟ್ಟ ರತಿ ಅಗ್ನಿಹೋತ್ರಿ “ಏಕ್ ದುಜೆ ಕೆ ಲಿಯೇ” ಚಿತ್ರದ ಮೂಲಕ ರಾತ್ರೋರಾತ್ರಿ ತಾರೆಯಾದರು. ದಕ್ಷಿಣದಿಂದ ಬಾಲಿವುಡ್ ತನಕ ಅವರಿಗೆ ಬೇಡಿಕೆ ಹೆಚ್ಚಿತು. ಆದರೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅವರು ಉದ್ಯಮಿ ಅನಿಲ್ ವಿರ್ವಾನಿ ಅವರನ್ನು ಪ್ರೀತಿಸಿ ಮದುವೆಯಾದರು. ಪೋಷಕರ ವಿರೋಧದ ನಡುವೆಯೇ ತೆಗೆದುಕೊಂಡ ಈ ನಿರ್ಧಾರ ಜೀವನದಲ್ಲಿ ದೊಡ್ಡ ತಿರುವಾಯಿತು.
ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯ ನಿಜಸ್ವರೂಪ ಬಯಲಾಯಿತು. ಪ್ರೀತಿಯಿಂದ ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದುಕೊಂಡ ರತಿ, ಗಂಡನಿಂದ ದಿನನಿತ್ಯ ಕಿರುಕುಳಕ್ಕೆ ಗುರಿಯಾದರು. ಹೊಡೆತ, ನಿಂದನೆ, ಅವಮಾನ – ಎಲ್ಲವೂ ದಿನನಿತ್ಯದ ಘಟನೆಯಾಗಿ ಬಿಟ್ಟಿತು. ತಾನು ಆರಿಸಿಕೊಂಡ ಸಂಗಾತಿ ಇಷ್ಟು ಕ್ರೂರನಾಗುತ್ತಾನೆ ಎಂದು ಅವಳು ಊಹಿಸಿರಲಿಲ್ಲ. ಮದುವೆಯ ಒಂದು ವರ್ಷದ ನಂತರ ಮಗ ತನುಜ್ ಜನಿಸಿದರು. ಮಗುವಿನ ಆಗಮನದಿಂದ ಪರಿಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರತಿ, ಇನ್ನಷ್ಟು ನೋವನ್ನು ಅನುಭವಿಸಿದರು. ಮಗನ ಭವಿಷ್ಯಕ್ಕಾಗಿ 30 ವರ್ಷಗಳ ಕಾಲ ಮೌನವಾಗಿ ಸಹಿಸಿದರು. “ನನ್ನ ಮಗನೇ ನನ್ನ ದೊಡ್ಡ ಆದ್ಯತೆ, ಅದಕ್ಕಾಗಿ ನಾನು ಈ ನೋವನ್ನು ತಾಳಿದೆ” ಎಂದು ಅವರು ನಂತರ ಸಂದರ್ಶನದಲ್ಲಿ ಕಣ್ಣೀರು ಹಾಕಿದರು.
ಸತತ ಹಿಂಸೆಯಿಂದ ಬೇಸತ್ತು, 2015ರಲ್ಲಿ ರತಿ ಅಗ್ನಿಹೋತ್ರಿ ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ದಾಖಲಿಸಿದರು. “ನಾನು ವಯಸ್ಸಾಗುತ್ತಿದ್ದೇನೆ, ದುರ್ಬಲಗೊಳ್ಳುತ್ತಿದ್ದೇನೆ… ಒಂದು ದಿನ ಹೊಡೆದು ಕೊಲ್ಲಿಬಿಡುತ್ತಾರೆ ಎಂಬ ಭಯವಿತ್ತು” ಎಂದು ಆಕೆ ಹೇಳಿಕೊಂಡರು. ಈ ದೂರು ದೇಶದಾದ್ಯಂತ ಚರ್ಚೆಗೆ ಕಾರಣವಾಯಿತು. ಘಟನೆ ನಂತರ ದಂಪತಿ ಕೆಲವು ತಿಂಗಳು ಬೇರ್ಪಟ್ಟಿದ್ದರು. ಆದರೆ ಮಗನ ಭವಿಷ್ಯದ ಹಿತಕ್ಕಾಗಿ ಮತ್ತೆ ಒಂದಾಗಿದರು. ನೋವಿನಿಂದ ಕೂಡಿದರೂ, ತನ್ನ ಮಗನಿಗಾಗಿ ಪತಿಯೇ ಬೇಕೆಂದ ಕರುಣಾಮಯಿಯಾಗಿ ವರ್ತಿಸಿದರು. ಇಂದಿಗೂ ಅವರು ತಮ್ಮ ಬದುಕನ್ನು ಮಗನಿಗಾಗಿ ಮುನ್ನಡೆಸುತ್ತಿದ್ದಾರೆ.