ಫೋರ್ಬ್ಸ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸಲ್ಮಾನ್ ಖಾನ್; ಹ್ಯಾಟ್ರಿಕ್ ದಾಖಲೆ

ಕಳೆದ ವರ್ಷ ಅಂದರೆ 2017ರ ಫೋರ್ಬ್ಸ್‌ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಬಾಲಿವುಡ್ ನಟ ಶಾರುಖ್‌ ಖಾನ್‌ ಈ ಬಾರಿ ಟಾಪ್‌ 10ರಿಂದಲೇ ಹೊರಹೋಗಿದ್ದು, 13ನೇ ಸ್ಥಾನಕ್ಕಿಳಿದಿದ್ದಾರೆ.

Updated: Dec 5, 2018 , 05:41 PM IST
ಫೋರ್ಬ್ಸ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸಲ್ಮಾನ್ ಖಾನ್; ಹ್ಯಾಟ್ರಿಕ್ ದಾಖಲೆ

ನವದೆಹಲಿ: ಪೋರ್ಬ್ಸ್ ಬಿಡುಗಡೆ ಮಾಡಿರುವ 2018ನೇ ಸಾಲಿನ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸತತ ಮೂರನೇ ಬಾರಿ ಮೊದಲ ಮೊದಲ ಸ್ಥಾನ ಪಡೆದು ಹ್ಯಾಟ್ರಿಕ್ ದಾಖಲೆ ನಿರ್ಮಿಸಿದ್ದಾರೆ. ಜತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಸಲ್ಲು ಮತ್ತು ಕೊಹ್ಲಿ ದೇಶದ ಅತೀ ಶ್ರೀಮಂತ ಸೆಲೆಬ್ರಿಟಿಗಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮನರಂಜನೆಗೆ ಸಂಬಂಧಿಸಿದ ಸೆಲೆಬ್ರಿಟಿಗಳ ವರ್ಷದ ಆದಾಯದ ಮೇರೆಗೆ ಫೋರ್ಬ್ಸ್‌ ಪ್ರತಿ ವರ್ಷ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2018ರ ಪಟ್ಟಿಯನ್ನು ಅಕ್ಟೋಬರ್ 1, 2017 ರಿಂದ ಸೆಪ್ಟೆಂಬರ್‌ 30, 2018ರವರೆಗೆ ಸೆಲೆಬ್ರಿಟಿಗಳು ಗಳಿಸಿದ ಆದಾಯದ ಮೇರೆಗೆ ಈ ಪಟ್ಟಿಯನ್ನು ಮಾಡಲಾಗಿದೆ. 

ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ, ಉತ್ಪನ್ನಗಳ ಜಾಹೀರಾತು ಮೊದಲಾದವುಗಳಿಂದ ಒಟ್ಟು 253 ಕೋಟಿ ರೂ. ಆದಾಯ ಗಳಿಸಿದ್ದು, ಆ ಮೂಲಕ ಸಲ್ಮಾನ್ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಅಂತೆಯೇ ಎರಡನೇ ಸ್ಥಾನ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-228 ಕೋಟಿ ರೂ. ಹಾಗೂ ಮೂರನೇ ಸ್ಥಾನದಲ್ಲಿರುವ ನಟ ಅಕ್ಷಯ್ ಕುಮಾರ್ 185 ಕೋಟಿ ರೂ. ಆದಾಯ ಗಳಿಸಿದ್ದಾರೆ.

ಕಳೆದ ವರ್ಷ ಅಂದರೆ 2017ರ ಫೋರ್ಬ್ಸ್‌ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಬಾಲಿವುಡ್ ನಟ ಶಾರುಖ್‌ ಖಾನ್‌ ಈ ಬಾರಿ ಟಾಪ್‌ 10ರಿಂದಲೇ ಹೊರಹೋಗಿದ್ದು, 13ನೇ ಸ್ಥಾನಕ್ಕಿಳಿದಿದ್ದಾರೆ. 2017ರಲ್ಲಿ ಶಾರುಖ್‌ ಅವರ ಯಾವುದೇ ಹೊಸ ಚಿತ್ರ ಬಿಡುಗಡೆಯಾಗದ ಕಾರಣ ಅವರ ಆದಾಯ ಕಳೆದ ವರ್ಷಕ್ಕಿಂತ ಶೇ. 33 ರಷ್ಟು ಕಡಿಮೆಯಾಗಿದೆ. ಆದರೆ, ಜಾಹೀರಾತಿನ ಮೂಲಕ ಬಾಲಿವುಡ್‌ ಬಾದ್‌ಶಾ 56 ಕೋಟಿ ರೂ. ಗಳಿಸಿಕೊಂಡಿದ್ದಾರೆ. ಇನ್ನು, ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ 112 ಕೋಟಿ ರೂ. ಗಳಿಕೆ ಮಾಡಿಕೊಳ್ಳುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ವರ್ಷದ ಆರಂಭದಲ್ಲಿ ಅವರ ನಟನೆಯ ‘ಪದ್ಮಾವತ್​’ ಚಿತ್ರ 300 ಕೋಟಿ ರೂ. ಕ್ಲಬ್​ ಸೇರಿತ್ತು. ಅಲ್ಲದೆ, ಸಾಕಷ್ಟು ಉತ್ಪನ್ನಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಹಾಗಾಗಿ ಅವರ ಗಳಿಕೆ ಹೆಚ್ಚಿದೆ.

ಅಲ್ಲದೆ, ಟೀಂ ಇಂಡಿಯಾದ ಮಾಜಿ ಕೂಲ್‌ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಥಾನಗಳಿಸಿದ್ದು, ವರ್ಷದಲ್ಲಿ 101.77 ಕೋಟಿ ರೂ. ಆದಾಯ ಗಳಿಸಿದ್ದಾರೆ. ನಂತರ ನಟ ಅಮೀರ್ ಖಾನ್‌ (97.50 ಕೋಟಿ ರೂ.), ಅಮಿತಾಬ್ ಬಚ್ಚನ್‌ (96.17 ಕೋಟಿ ರೂ.), ರಣವೀರ್‌ ಸಿಂಗ್ (84.7 ಕೋಟಿ ರೂ.), ಸಚಿನ್ ತೆಂಡೂಲ್ಕರ್‌ (80 ಕೋಟಿ ರೂ.) ಹಾಗೂ ನಟ ಅಜಯ್ ದೇವಗನ್ (74.50 ಕೋಟಿ ರೂ.) ಆದಾಯ ಗಳಿಸುವ ಮೂಲಕ ಕ್ರಮವಾಗಿ 6, 7, 8, 9 ಹಾಗೂ 10 ನೇ ಸ್ಥಾನ ಗಳಿಸಿದ್ದು, ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.