)
ಬೆಂಗಳೂರು: ಕನ್ನಡದ ಲೆಜೆಂಡರಿ ನಟ ಸಾಹಸ ಸಿಂಹ ಎಂದೇ ಖ್ಯಾತರಾದ ದಿವಂಗತ ಡಾ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸಮಾಧಿ ಕಟ್ಟಲಾಗಿತ್ತು. ರಾತ್ರೋ ರಾತ್ರಿ ವಿಷ್ಣುವರ್ಧನ್ ಸಮಾಧಿ ಕೆಡವಿದ ನಂತರ ಅವರ ಕೋಟ್ಯಾಂತರ ಅಭಿಮಾನಿಗಳು ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದ ಹೊರಗೆ ಜಮಾಯಿಸಿದ್ದರು.
ಆಕ್ರೋಶಗೊಂಡ ಅಭಿಮಾನಿಗಳು ಸ್ಟುಡಿಯೋದ ಹೊರಗೆ ಪ್ರತಿಭಟನೆ ನಡೆಸಿ, ಸ್ಥಳದ ನಿರ್ಲಕ್ಷ್ಯಕ್ಕಾಗಿ ರಾಜ್ಯ ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷ್ಣುವರ್ಧನ್ ಡಿಸೆಂಬರ್ 30, 2009 ರಂದು ನಿಧನರಾದಾಗ ಅವರ ಅಂತ್ಯಕ್ರಿಯೆಯನ್ನು ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಯಿತು. ಅಭಿಮಾನಿಗಳು ಬಹಳ ಹಿಂದಿನಿಂದಲೂ ನಟನಿಗೆ ಶಾಶ್ವತ ಸ್ಮಾರಕವನ್ನು ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಆಸ್ತಿ ವಿವಾದವನ್ನು ಪರಿಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಅಭಿಮಾನ್ ಸ್ಟುಡಿಯೋ ಕನ್ನಡದ ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇರಿತ್ತು.
ನ್ಯಾಯಾಲಯದ ಅನುಮತಿಯೊಂದಿಗೆ ಆಸ್ತಿಯ ಪ್ರಸ್ತುತ ಮಾಲೀಕರು ಗುರುವಾರ ರಾತ್ರಿ ಪೊಲೀಸ್ ಭದ್ರತೆಯಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಕೆಡವಿದರು. ಈ ಬಗ್ಗೆ ಕನ್ನಡ ಸಿನಿರಂಗದ ಅನೇಕ ನಟ ನಟಿಯರು ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ನಟ ಧ್ರುವ ಸರ್ಜಾ ಸಹ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
"ಸಾಧಕನಿಗೂ ಸಾವಿಲ್ಲ ಕಲೆಗೂ ಸಾವಿಲ್ಲ ವಿಷ್ಣು ಅಪ್ಪಾಜಿ ಅಜರಾಮರ. ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು. ಆದರೂ ಸಹ ಈ ಒಂದು ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ" ಎಂದು ನಟ ಧ್ರುವ ಸರ್ಜಾ X ಪೊಸ್ಟ್ ಮಾಡಿದ್ದಾರೆ.
"ಕೇಳಲು ಸಾಕಷ್ಟು ಪ್ರಶ್ನೆಗಳಿವೆ ಆದರೆ ಇದೆಲ್ಲದಕ್ಕೂ ಉತ್ತರ ನಾನು ಒಬ್ಬ ಕನ್ನಡಿಗನಾಗಿ ಒಬ್ಬ ಕಲಾವಿದನಾಗಿ ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ. ಜೈ ಕನ್ನಡಾಂಬೆ ವಿಷ್ಣು ದಾದಾ ಅಜರಾಮರ" ಎಂದು ನಟ ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.