)
Actress Silk Smitha: ಹಿಂದಿನ ಸಿನಿಮಾಗಳಲ್ಲಿ ಕೇವಲ ಸ್ಟಾರ್ ಹೀರೋ, ಹೀರೋಯಿನ್'ಗಳು ಮಾತ್ರವಲ್ಲದೆ ಐಟಂ ಸಾಂಗ್ ಮೂಲಕವೂ ಕೂಡ ಕೆಲವು ಕಲಾವಿದರು ಸಾಕಷ್ಟು ಹೆಸರು ಮಾಡಿದ್ದಾರೆ. ಐಟಂ ಸಾಂಗ್ ಎಂದೊಡನೆ ಮೊದಲು ನೆನಪಾಗುವುದು ತಮ್ಮ ಆಕರ್ಷಕ ಕಣ್ಣು, ಮೈಮಾಟದಿಂದ ಸಿನಿ ಪ್ರಿಯರನ್ನು ರಂಚಿಸುತ್ತಿದ್ದ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸುಂದರಿ ನಟಿ ಸಿಲ್ಕ್ ಸ್ಮಿತಾ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಡ್ಯಾನ್ಸ್, ಬೋಲ್ಡ್ ವಸ್ತ್ರಧಾರಣೆ, ನಟನೆ ಮೂಲಕ ಭಾರೀ ಸಂಚಲನ ಸೃಷ್ಟಿ ಮಾಡಿದ್ದ ಸಿಲ್ಕ್ ಸ್ಮಿತಾ ಪ್ರಮುಖ ಪಾತ್ರ ಮಾಡದಿದ್ದರೂ ಸಿಕ್ಕ ಸಣ್ಣ ಪಾತ್ರಗಳಿಂದಲೂ ತಮ್ಮ ಅಭಿನಾ ಕೌಶಲ್ಯದಿಂದ ಸ್ಟಾರ್ ಆಗಿ ಮೆರೆದವರು. ಕೇವಲ ಕನ್ನಡ ಮಾತ್ರವಲ್ಲದೆ, ದಕ್ಷಿಣ ಭಾರತದ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಈಕೆ ಎಲ್ಲೆಡೆ ಉತ್ತಮ ಹೆಸರನ್ನು ಮಾಡಿದ್ದರು.
ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ತೊಡುತ್ತಿದ್ದ ಆ ಕಾಲದಲ್ಲಿ ಸಣ್ಣ ಬಟ್ಟೆ ತೊಟ್ಟು ತಮ್ಮ ಸೌಂದರ್ಯ, ಆಕರ್ಷಕ ನೋಟ, ಮೈಮಾಟದಿಂದ ಪಡ್ಡೆ ಹುಡುಗರಷ್ಟೇ ಅಲ್ಲ ಅಂಕಲ್, ಮುದುಕರ ನಿದ್ದೆಗೆಡಿಸಿದ್ದ ಸಿಲ್ಕಿ ಬ್ಯೂಟಿ ತುಂಬಾ ಚಿಕ್ಕ ವಯಸ್ಸಿನಲ್ಲಿ ಆತ್ಮಹ*ತ್ಯೆಗೆ ಶರಣಾಗಿದ್ದು ಮಾತ್ರ ಇಡೀ ಚಿತ್ರರಂಗವನ್ನೇ ಆಘಾತಕ್ಕೀಡು ಮಾಡಿತ್ತು. ಅದೂ ಕೂಡ ಆಕೆಯ ಒಂದು ಐಟಂ ಸಾಂಗ್ ಗಾಗಿ ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದ ಕಾಲದಲ್ಲಿ ಆಕೆ ತನ್ನ ಜೀವನವನ್ನೇ ಕೊನೆಗೊಳಿಸಿಕೊಂಡಿದ್ದು ಏಕೆ ಎಂಬುದು ಮಾತ್ರ ಇಂದಿಗೂ ನಿಗೂಢ!
ಸಿಲ್ಕ್ ಸ್ಮಿತಾ ಇಂತಹ ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳುವ ಮೊದಲು ಖ್ಯಾತ ನಿರ್ಮಾಪಕ, ನಟರೊಬ್ಬರಿಗೆ ಕರೆ ಮಾಡಿದ್ದರು. ಅದು ತೆಲುಗು, ತಮಿಳು, ಮಲೆಯಾಳಂ ಅಥವಾ ಬೇರಾವ ಚಿತ್ರರಂಗದ ನಟರೂ ಅಲ್ಲ. ಆಕೆ ಕರೆ ಮಾಡಿದ್ದು ಕನ್ನಡದ ರವಿಮಾಮ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ.
1992ರಲ್ಲಿ ತೆರೆಕಂಡ ಕನ್ನಡದ ಸೂಪರ್ ಡೂಪರ್ ಸಿನಿಮಾ 'ಹಳ್ಳಿ ಮೇಷ್ಟ್ರು'. ಈ ಸಿನಿಮಾದಲ್ಲಿ ವಯಸ್ಕರ ಶಿಕ್ಷಕಿಯಾಗಿ ಪಾತ್ರ ನಿರ್ವಹಿಸಿದ್ದ ನಟಿ ಸಿಲ್ಕ್ ಸ್ಮಿತಾ ಹಳ್ಳಿ ಮೇಷ್ಟ್ರೆ... ಹಳ್ಳಿ ಮೇಷ್ಟ್ರೆ... ಎನ್ನುತ್ತಾ ಕನ್ನಡಾಭಿಮಾನಿಗಳ ಹೃದಯ ಗೆದ್ದಿದ್ದರು. ಸದಾ ಐಟಂ ಸಾಂಗ್, ತುಂಡು ಬಟ್ಟೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ಅವರಿಗೆ ರವಿಚಂದ್ರನ್ ಈ ಸಿನಿಮಾದಲ್ಲಿ ಅವರ ಗೌರವಕ್ಕೆ ಧಕ್ಕೆ ತರದ ರೀತಿಯಲ್ಲಿ, ಭಾರತೀಯ ನಾರಿಯ ನೆಚ್ಚಿನ ಉಡುಗೆಯಾದ ಸೀರೆಯಲ್ಲೇ ಅಭಿನಯಿಸುವ ಪಾತ್ರ ನೀಡಿದ್ದರು. ಕೇವಲ ಕ್ಯಾಬ್ರೆ ಡ್ಯಾನ್ಸರ್, ಐಟಂ ಹುಡುಗಿಯಾಗಿ ನಡೆಸಿಕೊಳ್ಳುತ್ತಿದ್ದ ಆ ಸಮಯದಲ್ಲಿ ಹಳ್ಳಿ ಮೇಷ್ಟ್ರು ನೀಡಿದ್ದ ಈ ಪಾತ್ರ ಅಭಿಮಾನಿಗಳಿಗೆ ಇಷ್ಟ ಆಗಿದ್ದು ಮಾತ್ರವಲ್ಲ ಸ್ವತಃ ಸಿಲ್ಕ್ ಸ್ಮಿತಾ ಅವರಿಗೂ ಒಂದು ರೀತಿಯ ಆತ್ಮ ತೃಪ್ತಿಯನ್ನು ನೀಡಿತ್ತು. ಅವರ ಕಲೆಗೆ ಕಲಾವಿದರಾಗಿ ನಟರಾಗಿ ರವಿಚಂದ್ರನ್ ನೀಡಿದ್ದ ಗೌರವದಿಂದಾಗಿಯೇ ಆಕೆ ರವಿಮಾಮನನ್ನು ಉತ್ತಮ ಸ್ನೇಹಿತರಾಗಿ ನೋಡುವಂತೆ ಮಾಡಿತ್ತು.
ಈ ಬಗ್ಗೆ ಮಾತನಾಡಿದ್ದ ರವಿಚಂದ್ರನ್, ಸಿಲ್ಕ್ ಸ್ಮಿತಾ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಆಗಾಗ್ಗೆ ದೂರವಾಣಿ ಕರೆ ಮೂಲಕ ನಾವು ಮಾತನಾಡುತ್ತಿದ್ದೆವು ಎಂದಿದ್ದಾರೆ.
ಸಿಲ್ಕ್ ಸ್ಮಿತಾ ಸಾವಿನ ಹಿಂದಿನ ದಿನವೂ ನನಗೆ ಕರೆ ಮಾಡಿದ್ದರು. ಸಿನಿಮಾವೊಂದರ ಚಿತ್ರೀಕರಣದಲ್ಲಿ ನಿರತನಾಗಿದ್ದ ಕಾರಣ ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೆಲಸದಿಂದ ಬಿಡುವಾದ ಬಳಿಕ ಕರೆ ಮಾಡಿ ಮಾತನಾಡುವೆ ಎಂದು ನಾನು ಭಾವಿಸಿದ್ದೆ. ಆದರೆ, ಮರುದಿನ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯಿತು. ಒಂದೊಮ್ಮೆ ಆ ಕರೆಯನ್ನು ನಾನು ರಿಸೀವ್ ಮಾಡಿದ್ದಿದ್ದರೆ ಅವರ ಹತಾಶೆ ಬಗ್ಗೆ ಮಾತನಾಡುತ್ತಿದ್ದರೇನೋ? ಅವರು ಬಹುಶಃ ಇಂದು ನಮ್ಮೊಂದಿಗೆ ಇರುತ್ತಿದ್ದರೇನೋ ಎಂದು ಅವರು ಸಿಲ್ಕ್ ಸ್ಮಿತಾ ಅವರ ಅಂತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.