)
ಭಾರತದ ಗಾನಕೋಗಿಲೆ ಎಂದೇ ಖ್ಯಾತರಾದ ಲತಾಮಂಗೇಶ್ಕರ್ ತಮ್ಮ ಸುಮಧುರ ಧ್ವನಿಯಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗೆದ್ದವರು, ಇಂತಹ ಮಹಾನ್ ಗಾಯಕಿ ಜೀವನಪೂರ್ತಿ ಮದುವೆಯಾಗದೆ ಉಳಿದದ್ದು ಎನ್ನುವ ಪ್ರಶ್ನೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಈಗ ನಾವು ಈಗ ಅಪೂರ್ಣವಾಗಿಯೇ ಉಳಿದ ಅವರ ಪ್ರೇಮ ಕಥೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಇಂತಹ ಮಹಾನ್ ಗಾಯಕಿಯ ಪ್ರೀತಿಯ ವಿಷಯಕ್ಕೆ ಬಂದಾಗ ಒಬ್ಬ ವ್ಯಕ್ತಿ ಹೆಸರು ಸದಾ ಮುಂಚೂಣಿಗೆ ಬರುತ್ತದೆ, ಹೌದು, ಈಗ ನಾವು ಹೇಳಲು ಹೊರಟಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ರಾಜ್ ಸಿಂಗ್..! ಅಷ್ಟಕ್ಕೂ ಈ ವ್ಯಕ್ತಿ ಯಾರಪ್ಪ ಎಂದರೆ ಡುಂಗರಪುರ ರಾಜಮನೆತನಕ್ಕೆ ಸೇರಿದ ರಾಜ. ಕೇವಲ ಈ ವ್ಯಕ್ತಿ ರಾಜ ಅಷ್ಟೇ ಆಗಿರಲಿಲ್ಲ ಖ್ಯಾತ ಕ್ರಿಕೆಟ್ ಆಟಗಾರನೂ ಹೌದು. ಲತಾ ಅವರ ಸುಮಧುರ ಗಾಯನಕ್ಕೆ ಮಾರುಹೋಗಿದ್ದ ರಾಜ್ ಆತ್ಮೀಯವಾಗಿ ಲತಾ ಅವರನ್ನು ಮಿತ್ತು ಎಂದು ಕರೆಯುತ್ತಿದ್ದರು. ಆರಂಭದಲ್ಲಿ ಸ್ನೇಹವಾಗಿ ಇದ್ದಂತ ಸಂಬಂಧವು ತದನಂತರ ಇಬ್ಬರ ನಡುವೆ ಪ್ರೇಮಾಂಕುರಕ್ಕೆ ತಿರುಗಿತ್ತು. ಒಂದು ಹಂತದಲ್ಲಿ ರಾಜ್ ಸಿಂಗ್, ಲತಾ ಅವರನ್ನು ಮದುವೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದರಂತೆ. ಕೆಲವು ವರದಿಗಳ ಪ್ರಕಾರ, ಇಬ್ಬರು ವಿವಾಹ ನಿಶ್ಚಿತಾರ್ಥಕ್ಕೂ ಒಪ್ಪಿಕೊಂಡಿದ್ದರು. ಆದರೆ, ಈ ಸಂಬಂಧವು ರಾಜ್ ಸಿಂಗ್ರ ತಂದೆ ಮಹಾರಾವಲ್ ಲಕ್ಷ್ಮಣ್ ಸಿಂಗ್ರ ಒಪ್ಪಿಗೆಯ ಕೊರತೆಯಿಂದಾಗಿ ಮುರಿದುಬಿತ್ತು. ಲತಾ ರಾಜಮನೆತನದ ಹಿನ್ನೆಲೆಯನ್ನು ಹೊಂದದೆ ಇರುವುದೇ ಈ ತಿರಸ್ಕಾರಕ್ಕೆ ಕಾರಣವಾಯಿತು ಎನ್ನಲಾಗಿದೆ.
ಇದಾದ ನಂತರ ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಇಬ್ಬರೂ ಮದುವೆಯಾಗದೆ ಜೀವನವನ್ನು ಕಳೆದರು. ಆದರೆ, ಇದ್ಯಾವುದು ಕೂಡ ಅವರ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ, ಮದುವೆಯಾಗದೆ ಇದ್ದರೂ ಸಹ ಅವರು ಜೀವನಪೂರ್ತಿ ಆತ್ಮೀಯ ಸ್ನೇಹಿತರಾಗಿಯೇ ಉಳಿದರು. ರಾಜ್ ಸಿಂಗ್ ಸಹ ತಮ್ಮ ಜೀವನದಲ್ಲಿ ಲತಾ ಅವರ ಸ್ಥಾನವನ್ನು ಯಾರಿಗೂ ನೀಡಲಿಲ್ಲ, ಮತ್ತು ಲತಾ ಮಂಗೇಶ್ಕರ್ ಕೂಡ ತಮ್ಮ ಹೃದಯದಲ್ಲಿ ರಾಜ್ಗೆ ವಿಶೇಷ ಸ್ಥಾನವನ್ನು ಕಾಯ್ದಿರಿಸಿದ್ದರು.
ಲತಾ ಮಂಗೇಶ್ಕರ್ರವರು ಮದುವೆಯಾಗದಿರಲು ಇದೊಂದೇ ಕಾರಣವಲ್ಲ, ಚಿಕ್ಕವಯಸ್ಸಿನಲ್ಲಿಯೇ ತಂದೆ ನಿಧನ ಹೊಂದಿದ್ದರಿಂದಾಗಿ ಕುಟುಂಬದ ಜವಾಬ್ದಾರಿಯ ಭಾರ ಅವರ ಭುಜದ ಮೇಲೆ ಬಿತ್ತು. ಕುಟುಂಬದ ಹಿರಿಯರಾಗಿ, ತಮ್ಮ ಸಹೋದರರಿಗೆ ಉತ್ತಮ ಜೀವನವನ್ನು ಒದಗಿಸುವ ಜವಾಬ್ದಾರಿಯನ್ನು ಲತಾ ಅವರು ತೆಗೆದುಕೊಂಡರು. ಈ ಜವಾಬ್ದಾರಿಯ ಒತ್ತಡದಲ್ಲಿ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಮಯವನ್ನೇ ಕೊಡಲು ಸಾಧ್ಯವಾಗಲಿಲ್ಲ.ಹಾಗಾಗಿ ತಮ್ಮ ಸಹೋದರರಿಯರ ಭವಿಷ್ಯವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ತಮ್ಮ ಆಸೆ-ಆಕಾಂಕ್ಷೆಗಳನ್ನು ತ್ಯಾಗ ಮಾಡಿದರು.
ಹೀಗಾಗಿ ಲತಾ ಮಂಗೇಶ್ಕರ್ರವರ ಜೀವನವು ಕೇವಲ ಸಂಗೀತದ ಮೂಲಕವೇ ಅಮರವಾಗಲಿಲ್ಲ, ಬದಲಿಗೆ ಅವರ ತ್ಯಾಗ, ಸಮರ್ಪಣೆ ಮತ್ತು ಅಪೂರ್ಣವಾದ ಪ್ರೀತಿಯ ಕಥೆಯೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.ರಾಜ್ ಸಿಂಗ್ರೊಂದಿಗಿನ ಅವರ ಸಂಬಂಧವು ಮದುವೆಯೆಂಬ ಬಂಧದಲ್ಲಿ ಕೊನೆಗೊಳ್ಳದಿದ್ದರೂ, ಇಬ್ಬರ ನಡುವಿನ ಆತ್ಮೀಯತೆ ಮತ್ತು ಪರಸ್ಪರ ಗೌರವವು ಅವರ ಜೀವನದ ಒಂದು ಸುಂದರ ಅಧ್ಯಾಯವಾಗಿ ಉಳಿದಿದೆ.
.