)
smriti mandhana wedding; ಆರ್ಸಿಬಿ ಮಹಿಳಾ ತಂಡದ ನಾಯಕಿ ಹಾಗೂ ಭಾರತ ತಂಡದ ವೈಸ್ ಕ್ಯಾಪ್ಟನ್ ಸ್ಮೃತಿ ಮಂಧಾನ ಹಾಗೂ ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚ್ಚಲ್ ಮದುವೆ ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ ವಿವಾಹ ಸಂಭ್ರಮದಲ್ಲೇ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಎದೆ ನೋವು ಕಾಣಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲೇ ಪಲಾಶ್ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದರಿಂದ ಮದುವೆ ನವೆಂಬರ್ 23 ರಂದು ನಡೆಯದೇ ಮುಂದೂಡಲಾಗಿತ್ತು. ಸದ್ಯ ಇದಕ್ಕೆ ಸಂಬಂಧಿಸಿದಂತೆ ಪಲಾಶ್ ಮುಚ್ಚಲ್ ಅವರ ಸಹೋದರಿ ಮಾತನಾಡಿದ್ದಾರೆ.
ಮದುವೆಯ ಪೂರ್ವ ಕಾರ್ಯಕ್ರಮಗಳಲ್ಲಿ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್ ಫುಲ್ ಹ್ಯಾಪಿಯಾಗಿ ಸ್ನೇಹಿತರು, ಸಂಬಂಧಿಕರೊಂದಿಗೆ ಕುಣಿಯುತ್ತಿದ್ದರು. ಈಗೀರುವಾಗಲೇ ಸ್ಮೃತಿ ಮಂಧಾನ ತಂದೆಗೆ ಎದೆ ನೋವು ಕಾಣಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅವರಿಗೆ ಕಾರ್ಡಿಕ್ಗೆ ಸಂಬಂಧಿಸಿದ ಕೆಲವು ಗುರುತುಗಳನ್ನು ವೈದ್ಯರು ತಿಳಿಸಿ ಸೂಕ್ಷ್ಮವಾದದ್ದು ಎಂದು ಹೇಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರು.
ಸ್ಮೃತಿ ಮಂಧಾನ ತಂದೆ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ ಪಲಾಶ್ ಮುಚ್ಚಲ್ ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ಪಲಾಶ್ ಮುಚ್ಚಲ್ರ ಆರೋಗ್ಯ ಪರೀಕ್ಷಿಸಿ ತೀವ್ರ ಆಮ್ಲೀಯತೆಯೊಂದಿಗೆ ವೈರಲ್ ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಅಂತ ಹೇಳಿದ್ದರು. ಸದ್ಯ ಇಬ್ಬರ ಆರೋಗ್ಯ ಚೆನ್ನಾಗಿದ್ದು ಯಾವುದೇ ತೊಂದರೆ ಇಲ್ಲ ಎಂದು ಡಾಕ್ಟರ್ ಹೇಳಿದ್ದಾರೆ.
ಇದು ಎಲ್ಲ ಮುಗಿದ ಮೇಲೆ ಈ ಇಬ್ಬರ ಮದುವೆ ಕುರಿತು ಪಲಾಶ್ ಮುಚ್ಚಲ್ ಅವರ ಸಹೋದರಿ ಪಾಲಕ್ ಮುಚ್ಚಲ್ ಮಾತನಾಡಿ, ಮದುವೆ ನಿಂತ ಮೇಲೆ ಎರಡು ಕುಟುಂಬಗಳು ತುಂಬಾ ಕಠಿಣ ಸಮಯವನ್ನು ಎದುರಿಸಿವೆ. ಆದದ್ದು ಆಗಿ ಹೋಯಿತು. ಅಂದು ಎರಡು ಕುಟುಂಬ ಸೇರಿ ಮದುವೆ ರದ್ದು ಬಗ್ಗೆ ನಿರ್ಧಾರ ತೆಗೆದುಕೊಂಡವು. ಈ ಸಮಯದಲ್ಲಿ ನಾವು ಸಕಾರಾತ್ಮಕವಾಗಿ ಇರುವುದನ್ನು ಹೆಚ್ಚು ನಂಬಬೇಕು. ಒಳ್ಳೆಯದಾಗಿ ಇರಲು ನಾವು ಬಯಸುತ್ತೇವೆ. ಸ್ಮೃತಿಗೆ ಮೋಸ ಮಾಡಿದ್ದೇವೆ ಎನ್ನುವ ಆರೋಪ ಸುಳ್ಳು. ಇದನ್ನು ತುಂಬಾ ಬಲವಾಗಿ ಎದುರಿಸಿದ್ದೇವೆ. ಹೊಸ ವರ್ಷದ ಸಮಯದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.